More

    ವರ್ಷಾಂತ್ಯದೊಳಗೆ ಕೃಷಿ ಗಣತಿ ಪೂರ್ಣಗೊಳಿಸಿ

    ಶಿವಮೊಗ್ಗ: ಕೇಂದ್ರ ಸರ್ಕಾರದ ಸೂಚನೆಯಂತೆ 11ನೇ ಕೃಷಿ ಗಣತಿ ಕಾರ್ಯವನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಕೃಷಿ ಹಾಗೂ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.
    ಬುಧವಾರ ಕೃಷಿ ಗಣತಿ ಜಿಲ್ಲಾ ಸಮನ್ವಯ ಸಮಿತಿ ಸಭೆ ನಡೆಸಿದ ಅವರು, ಕೃಷಿ ಗಣತಿ ಕಾರ್ಯಕ್ಕೆ ಗ್ರಾಮಲೆಕ್ಕಾಧಿಕಾರಿಗಳು ಮೂಲ ಕ್ಷೇತ್ರ ಕಾರ್ಯಕರ್ತರಾಗಿದ್ದಾರೆ. ಕಂದಾಯ ನಿರೀಕ್ಷಕರನ್ನು ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ. ಇವರಿಬ್ಬರೂ ಸಮನ್ವಯದಿಂದ ನಿಖರವಾಗಿ ಗಣತಿ ಕಾರ್ಯ ನಡೆಸಬೇಕೆಂದು ಹೇಳಿದರು.
    ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮಹೇಶ್ವರಪ್ಪ ಮಾತನಾಡಿ, ಕೃಷಿ ವಲಯದ ಅಭಿವೃದ್ಧಿ, ತೊಂದರೆಗಳಿಗೆ ಸಂಬಂಧಿಸಿದ ಬಹುತೇಕ ಮಾಹಿತಿಯನ್ನು ಕೃಷಿ ಗಣತಿಯಿಂದಲೇ ಸಂಗ್ರಹಿಸಲಾಗುತ್ತದೆ. ಐದು ವರ್ಷಗಳಿಗೊಮ್ಮೆ ಕೇಂದ್ರ ಸರ್ಕಾರ ದೇಶಾದ್ಯಂತ ಕೃಷಿ ಗಣತಿಗೆ ಸೂಚನೆ ನೀಡುತ್ತದೆ. ಕೃಷಿ ಗಣತಿಯಿಂದ ಹಿಡುವಳಿದಾರರ ಪ್ರಮಾಣ ನಿಖರವಾಗಿ ತಿಳಿಯಲು ಸಾಧ್ಯ ಎಂದರು.
    ಮೊದಲನೇ ಹಂತದಲ್ಲಿ ಕೃಷಿ ಗಣತಿಯ ಮೂಲಕ ಗ್ರಾಮವಾರು ಹಿಡುವಳಿದಾರರ ಮಾಹಿತಿ, ವಿವಿಧ ಸಾಮಾಜಿಕ ಗುಂಪುವಾರು, ಲಿಂಗವಾರು, ವರ್ಗಗಳವಾರು ಮಾಹಿತಿ ದಾಖಲಿಸಲಾಗುತ್ತದೆ. ಎರಡನೇ ಹಂತದಲ್ಲಿ ಸಕಾಲಿಕ ಗ್ರಾಮಗಳಲ್ಲಿ ಹಿಡುವಳಿದಾರರ ಬೆಳೆವಾರು, ನೀರಾವರಿ ಮೂಲವಾರು ಅಂಕಿ-ಅಂಶಗಳನ್ನು ದಾಖಲಿಸಲಾಗುತ್ತದೆ. ಮೂರನೇ ಹಂತದಲ್ಲಿ ಆಯ್ದ ಹಿಡುವಳಿದಾರರು ಬಳಸುವ ಕೃಷಿ ಉಪಕರಣ, ಕೃಷಿ ಪರಿಕರಗಳು, ಉಪಯೋಗಿಸಿದ ಗೊಬ್ಬರ, ಜಾನುವಾರು, ಕೃಷಿ ಸಾಲ, ಹಿಡುವಳಿದಾರರ ವಿದ್ಯಾಭ್ಯಾಸ ಮುಂತಾದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.
    ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಿ.ಸಿ.ಪೂರ್ಣಿಮಾ, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್ ಮುಂತಾದವರು ಉಪಸ್ಥಿತರಿದ್ದರು.

    ನೋಂದಣಿ ವ್ಯವಸ್ಥೆ ಪಾರದರ್ಶಕವಾಗಿರಲಿ
    ಜನನ ಮತ್ತು ಮರಣ ನೋಂದಣಿ ವ್ಯವಸ್ಥೆ ಪಾರದರ್ಶಕವಾಗಿರಬೇಕು. ಸಕಾಲದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಿಸಬೇಕು. ಪ್ರಮಾಣ ಪತ್ರದಲ್ಲಿ ಲೋಪ ಉಂಟಾದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಡಾ.ಆರ್.ಸೆಲ್ವಮಣಿ ಎಚ್ಚರಿಸಿದರು.
    ಬುಧವಾರ ಜನನ-ಮರಣ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನೋಂದಣಾಧಿಕಾರಿಗೆ ಸಕಾಲದಲ್ಲಿ ಮಾಹಿತಿ ಒದಗಿಸಲು ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳು, ಎಎನ್‌ಎಂ, ಪಿಡಿಒ, ಸ್ಥಳೀಯ ಸಂಸ್ಥೆಗಳ ಕಂದಾಯ ಇಲಾಖೆ ಸಿಬ್ಬಂದಿ, ಆರೋಗ್ಯ ವಿಭಾಗದ ಸಿಬ್ಬಂದಿಗಳನ್ನೊಳಗೊಂಡ ವಾಟ್ಸಪ್ ಗ್ರೂಪ್ ರಚಿಸುವಂತೆ ತಿಳಿಸಿದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts