More

    ಡಿಸಿ ಕಚೇರಿ ಎದುರೇ ಬೈಕ್‌ಗೆ ಬೆಂಕಿ!

    ಶಿವಮೊಗ್ಗ: ಜಿಲ್ಲಾಡಳಿತ ನಮ್ಮ ಸೂರು ಕಿತ್ತುಕೊಂಡಿದೆ. ನೆಲೆ ಇಲ್ಲದೇ ಬೀದಿಗೆ ಬರುವಂತೆ ಮಾಡಿದೆ. ಅಧಿಕಾರಿಗಳಿಗೆ ಜನಪರ ಕಾಳಜಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಯುವಕನೋರ್ವ ಡಿಸಿ ಕಚೇರಿ ಎದುರೇ ಮಂಗಳವಾರ ತನ್ನ ಬೈಕ್‌ಗೆ ಬೆಂಕಿ ಹಚ್ಚುವ ಮೂಲಕ ಕೆಲ ಕಾಲ ಆತಂಕಕ್ಕೆ ಕಾರಣವಾಗಿದ್ದ. ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ್ದಾನೆ.
    ಗಾಡಿಕೊಪ್ಪ ಅಂಬೇಡ್ಕರ್ ನಗರ ನಿವಾಸಿ ರಾಜ(29) ಎಂಬ ಯುವಕ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಎಲ್ಲರೂ ನೋಡುತ್ತಿದ್ದಂತೆಯೇ ತನ್ನ ಬೈಕ್‌ಗೆ ಬೆಂಕಿ ಹಚ್ಚಿದ್ದಾನೆ. ಕೆಲವೇ ನಿಮಿಷದಲ್ಲಿ ಬೈಕ್ ಸುಟ್ಟು ಕರಕಲಾಗಿದೆ. ಈ ಘಟನೆ ನಡೆದ ಕೆಲವೇ ಅಡಿಗಳ ದೂರದಲ್ಲಿ ಡಿಸಿ ಕಚೇರಿ ಸಿಬ್ಬಂದಿ ಹಾಗೂ ಕಚೇರಿ ಕೆಲಸಕ್ಕೆಂದು ಆಗಮಿಸಿದ್ದ ಸಾರ್ವಜನಿಕರ ಹಲವಾರು ವಾಹನಗಳನ್ನು ಪಾರ್ಕ್ ಮಾಡಲಾಗಿತ್ತು.
    ಬೈಕ್‌ಗೆ ಬೆಂಕಿ ಹಚ್ಚಿದ ನಂತರ ಸ್ವತಃ ಬೆಂಕಿ ಹಚ್ಚಿಕೊಳ್ಳುವ ಯತ್ನ ಮಾಡಿದ್ದಾನೆ. ಇದನ್ನು ಗಮನಿಸಿದ ಡಿಸಿ ಕಚೇರಿ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದು ಆತನ ಕೈನಲ್ಲಿದ್ದ ಬೆಂಕಿ ಪೊಟ್ಟಣ ಕಿತ್ತು ಕೊಂಡು ದೂರ ಕರೆದುಕೊಂಡು ಹೋಗಿದ್ದಾರೆ. ಘಟನೆಯಲ್ಲಿ ಬೈಕ್ ಸುಟ್ಟು ಕರಕಲಾಗಿದೆ.
    ತೆರವಿಗೆ ಆಕ್ರೋಶ
    ತುಂಗಾ ಏತ ನೀರಾವರಿ ಯೋಜನಾ ವಲಯದಲ್ಲಿ ಗಾಡಿಕೊಪ್ಪ ಸಮೀಪ ಕೆಲವು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ಹಲವರು ವಾಸವಾಗಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಲವು ಮನೆಗಳನ್ನು ತೆರವು ಮಾಡಿ ಉಳಿದವರು ಸ್ಥಳ ತೆರವು ಮಾಡಲು ಕಾಲಾವಕಾಶ ನೀಡಲಾಗಿತ್ತು.
    ಆ ಸಂದರ್ಭದಲ್ಲಿ ವ್ಯಕ್ತಿಯೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಅದನ್ನು ಪೊಲೀಸರು ತಡೆದಿದ್ದರು. ಬಳಿಕ ಅಲ್ಲಿನ ನಿವಾಸಿಗಳು ಮೂರ‌್ನಾಲ್ಕು ದಿನ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಇದೀಗ ಯುವಕನೋರ್ವ ಸರ್ಕಾರಿ ಕಚೇರಿ ಆವರಣದಲ್ಲಿ, ನೂರಾರು ಮಂದಿ ಸೇರುವ ಜಾಗದಲ್ಲಿ ಬೈಕ್‌ಗೆ ಬೆಂಕಿ ಹಚ್ಚುವ ಮೂಲಕ ಆತಂಕಕ್ಕೆ ಕಾರಣವಾಗಿದ್ದಾನೆ.
    ಈತನ ವಿರುದ್ಧ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts