More

    ವಿದ್ಯುತ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

    ಶಿವಮೊಗ್ಗ: ಕರೊನಾ ಮತ್ತು ಅತಿವೃಷ್ಟಿಯಿಂದ ಆರ್ಥಿಕ ಸಂಕಷ್ಟದ ನಡುವೆ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಜನರಿಗೆ ಶಾಕ್ ನೀಡಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ವಿದ್ಯುತ್ ದರ ಏರಿಕೆ ರಾಜ್ಯ ಸರ್ಕಾರವು ಕನ್ನಡ ರಾಜ್ಯೋತ್ಸವಕ್ಕೆ ನೀಡಿರುವ ಕೊಡುಗೆ ಎಂದು ವ್ಯಂಗ್ಯವಾಡಿದರು.
    ಕಳೆದೊಂದು ವರ್ಷದಿಂದ ಕರೊನಾಕ್ಕೆ ಇಡೀ ದೇಶವೇ ತಲ್ಲಣಗೊಂಡಿದೆ. ತೀವ್ರ ಆರ್ಥಿಕ ಕುಸಿತ, ನಿರುದ್ಯೋಗ, ರೈತರ ಬವಣೆ ಹೆಚ್ಚುತ್ತಿವೆ. ಸಣ್ಣ ಕೈಗಾರಿಕೆಗಳು ಮುಚ್ಚುತ್ತಿದ್ದು ದುಡಿಮೆ ಇಲ್ಲದೇ ಕಂಗಾಲಾಗಿರುವ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಏಕಾಏಕಿ ವಿದ್ಯುತ್ ಏರಿಕೆ ಮಾಡಿರುವುದು ಸರಿಯಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿಯಂತ್ರಣದಲ್ಲಿರುವ ಸೇವೆಯಲ್ಲಿ ರಾಜ್ಯದ ಜನತೆಗೆ ರಿಯಾಯಿತಿ ನೀಡುವುದು ಜನಪರ ಸರ್ಕಾರದ ಆದ್ಯತೆಯಾಗಬೇಕಿತ್ತು ಎಂದರು.
    ರಿಯಾಯಿತಿ ನೀಡಬೇಕಾದ ಸರ್ಕಾರವೇ ವಿದ್ಯುತ್ ದರ ಪರಿಷ್ಕರಿಸಿ ಸರಾಸರಿ ಶೇ.5.4ರಂತೆ (ಯುನಿಟ್‌ಗೆ 40 ಪೈಸೆ) ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ರಾಜ್ಯದ ಜನರು ಹತಾಶರಾಗಿರುವ ಸಂದರ್ಭದಲ್ಲಿ ಜನರು ದಿನನಿತ್ಯದ ಬದುಕಿಗೆ ಅನಿವಾರ್ಯವಾಗಿರುವ ವಿದ್ಯುತ್ ದರ ಏರಿಸಿರುವ ಕ್ರಮವು ಜನವಿರೋಧಿ ಮತ್ತು ಅಮಾನವೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಪಾಲಿಕೆ ಪ್ರತಿಪಕ್ಷ ನಾಯಕ ಎಚ್.ಸಿ.ಯೋಗೀಶ್, ಸದಸ್ಯರಾದ ರಮೇಶ್ ಹೆಗ್ಡೆ, ಯಮುನಾ ರಂಗೇಗೌಡ, ಮೆಹಖ್ ಷರೀಫ್, ಮುಖಂಡರಾದ ಇಸ್ಮಾಯಿಲ್ ಖಾನ್, ಎನ್.ರಮೇಶ್, ಎಸ್.ಪಿ.ಶೇಷಾದ್ರಿ, ಎಲ್.ರಾಮೇಗೌಡ, ಸಿ.ಎಸ್.ಚಂದ್ರಭೂಪಾಲ್, ಚಂದನ್, ವಿಶ್ವನಾಥ್ ಕಾಶಿ, ಯು.ಶಿವಾನಂದ್, ಸಿ.ಜೆ.ಮಧುಸೂದನ್, ಎಚ್.ಪಿ.ಗಿರೀಶ್, ಕೆ.ರಂಗನಾಥ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts