More

    ಅರಸು ಬಡವರ ಪಾಲಿನ ಆಶಾಕಿರಣ: ಡಾ.ಚಂದ್ರಗುತ್ತಿ

    ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಬಸವಳಿದ ಜನರ ಪಾಲಿಕೆ ಆಶಾಕಿರಣವಾಗಿದ್ದರು. ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ವಿಕಾಸ ಹೊಂದಿದ ಅವರು ಸಾಮಾಜಿಕ ಚಿಕಿತ್ಸಕನಂತೆ ಕಾರ್ಯನಿರ್ವಹಿಸಿದರು ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮೋಹನ ಚಂದ್ರಗುತ್ತಿ ತಿಳಿಸಿದರು.
    ಜಿಲ್ಲಾಡಳಿತದಿಂದ ಶನಿವಾರ ಏರ್ಪಡಿಸಿದ್ದ ದೇವರಾಜ ಅರಸು ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಅಂದು ಹಿಂದುಳಿದ ವರ್ಗದವರು ಎದುರಿಸುತ್ತಿದ್ದ ಕಷ್ಟಗಳ ಬಗ್ಗೆ ಇಂದಿನ ಪೀಳಿಗೆಗೆ ಮಾಹಿತಿಯಿಲ್ಲ. ಕ್ರಾಂತಿಕಾರಿಯಾದ ಭೂಸುಧಾರಣಾ ಕಾಯ್ದೆ ಜಾರಿಗೊಳಿಸುವ ಮೂಲಕ ಭೂಮಿಯ ಹಕ್ಕನ್ನು ನೀಡಿದವರು ಅರಸು ಎಂದು ಹೇಳಿದರು.
    ಹಿಂದುಳಿದ ವರ್ಗಗಳ ಆತ್ಮಚೈತನ್ಯ ಎಂದು ಹೇಳಬಹುದಾದ ಹಾವನೂರು ವರದಿಯನ್ನು ಜಾರಿಗೆ ತಂದು ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿದವರು ಅರಸು. ಅತ್ಯಂತ ಹೀನಾಯವಾದ ತಲೆ ಮೇಲೆ ಮಲ ಹೊರುವ ಪದ್ದತಿ ರದ್ದುಗೊಳಿಸಿದರು. ಅಂಬೇಡ್ಕರ್ ಅವರ ಚಿಂತನ ಕ್ರಮಗಳನ್ನು ಮುಂದುವರೆಸಿದ ಇಂತಹ ಮಹನೀಯರ ಜೀವನ ಚರಿತ್ರೆ, ಗುಣಗಳನ್ನು ತಿಳಿದು, ಅಳವಡಿಸಿಕೊಳ್ಳಬೇಕು ಎಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಯರ್ ಸುನೀತಾ ಅಣ್ಣಪ್ಪ, ಇಂದು ಹಿಂದುಳಿದ ವರ್ಗಗಳಿಗೆ ಸ್ಥಾನಮಾನ ಸಿಕ್ಕಿದೆ ಎಂದರೆ ಅದಕ್ಕೆ ಡಿ.ದೇವರಾಜ ಅರಸು ಕಾರಣ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನೇಕ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳ ಸ್ಥಾಪನೆ ಮೂಲಕ ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟವರು ಅರಸು ಎಂದು ಬಣ್ಣಿಸಿದರು.
    ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಸವಿತಾ ಸಮಾಜದ ಅಧ್ಯಕ್ಷ ಎಂ.ವಿಜಯಭಾಸ್ಕರ್, ದೇವರಾಜ ಅರಸು ಅಭಿವೃದ್ದಿ ನಿಗಮದ ನಿರ್ದೇಶಕ ಮಾಲತೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಜೇಶ್, ಕಾರ್ಯದರ್ಶಿ ಎಸ್.ಬಿ.ಅಶೋಕ್ ಕುಮಾರ್, ಜಿಲ್ಲಾ ಮೊಗವೀರ ಸಮಾಜದ ಅಧ್ಯಕ್ಷ ಕೆ.ವಿ.ಅಣ್ಣಪ್ಪ, ಡಿಎಸ್‌ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ, ಪ್ರಮುಖರಾದ ಗವಿಸಿದ್ದಪ್ಪ ತೆಗ್ಗಿನಮಠ ಮುಂತಾದವರು ಉಪಸ್ಥಿತರಿದ್ದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts