More

    ವೈಟ್‌ಬೋರ್ಟ್ ವಾಹನ ಕಡಿವಾಣಕ್ಕೆ ಒತ್ತಾಯಿಸಿ ಆರ್‌ಟಿಒಗೆ ಮನವಿ

    ಶಿವಮೊಗ್ಗ: ವೈಟ್‌ಬೋರ್ಟ್ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಬುಧವಾರ ನೂರಾರು ಟ್ಯಾಕ್ಸಿ ಮಾಲೀಕರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಆರ್‌ಟಿಒ ಜೆ.ಪಿ.ಗಂಗಾಧರ್ ಅವರಿಗೆ ಮನವಿ ಸಲ್ಲಿಸಿದರು.
    ಕೆಲ ಖಾಸಗಿ ವಾಹನಗಳ ಮಾಲೀಕರು ವೈಟ್‌ಬೋರ್ಡ್ ಹಾಕಿಕೊಂಡು ಕಾನೂನು ಬಾಹಿರವಾಗಿ ತೆರಿಗೆ ವಂಚಿಸಿ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಇದರಿಂದ ಯಲ್ಲೋ ಬೋರ್ಡ್‌ನ ವಾಹನಗಳ ಮಾಲೀಕರಿಗೆ ನಷ್ಟವಾಗುತ್ತಿದೆ. ಹಾಗಾಗಿ ವೈಟ್‌ಬೋರ್ಡ್ ಹಾಕಿಕೊಂಡು ವಾಣಿಜ್ಯ ಉದ್ದೇಶಕ್ಕೆ ವಾಹನಗಳನ್ನು ಬಳಸುವ ಮಾಲೀಕರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
    ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಪ್ರವಾಸಿ ನಿಲ್ದಾಣಗಳಲ್ಲಿ ವೈಟ್‌ಬೋರ್ಡ್ ವಾಹನಗಳ ಹಾವಳಿ ಹೆಚ್ಚಾಗುತ್ತಿದೆ. ಪ್ರವಾಸಿಗಳನ್ನು ಕರೆದುಕೊಂಡು ಬಾಡಿಗೆಗೆ ಹೋಗುತ್ತಿದ್ದಾರೆ. ಇದರಿಂದ ಯಲ್ಲೋ ಬೋರ್ಡ್‌ನ ಮಾಲೀಕರು ಸರ್ಕಾರಕ್ಕೆ ನಿಗದಿತ ತೆರಿಗೆ ಪಾವತಿಸಿ ವಾಣಿಜ್ಯ ಉದ್ದೇಶಗಳಿಗೆ ಬಾಡಿಗೆಗಾಗಿ ಎದುರು ನೋಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಪ್ರವಾಸೋದ್ಯಮವನ್ನೇ ನಂಬಿರುವ ನೂರಾರು ವಾಹನ ಚಾಲಕರು ಮತ್ತು ಮಾಲೀಕರ ಬದುಕು ಬೀದಿಗೆ ಬೀಳುವಂತಾಗಿದೆ. ಖಾಸಗಿ ವೈಟ್‌ಬೋರ್ಡ್ ವಾಹನಗಳು ಕಾನೂನು ಬಾಹಿರವಾಗಿ ಸರ್ಕಾರ ನಿಗದಿ ಮಾಡಿದ ಪ್ರವಾಸಿ ವಾಹನಗಳ ದರಗಳಿಗಿಂತ ಬಹಳ ಕಡಿಮೆ ಪಡೆದು ಸಂಚರಿಸುತ್ತಿವೆ. ಬ್ಯಾಂಕ್‌ಗಳು ಸೇರಿ ವಿವಿಧೆಡೆಯಿಂದ ಸಾಲ ಪಡೆದು ವಾಹನಗಳನ್ನು ಖರೀದಿಸಿದ್ದು ಇದೀಗ ಮಾಸಿಕ ಸಾಲದ ಕಂತುಗಳನ್ನು ಪಾವತಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
    ಸಂಘದ ಪ್ರಮುಖರಾದ ಶಿವಕುಮಾರ್, ಕಾರ್ತಿಕ್ ಶೆಟ್ಟಿ, ಅವಿನಾಶ್, ಆರ್.ಉಮೇಶ್, ವಿನೋದ್, ಪ್ರದೀಪ್, ನಾಗರಾಜ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
    ವೈಟ್‌ಬೋರ್ಡ್ ವಾಹನ ಬಾಡಿಗೆಗೆ ಬಿಡುವಂತಿಲ್ಲ:
    ವೈಟ್‌ಬೋರ್ಡ್ ಪಡೆದು ಯಾವುದೇ ಕಾರಣಕ್ಕೂ ವಾಹನಗಳನ್ನು ಬಾಡಿಗೆಗೆ ಬಿಡುವಂತಿಲ್ಲ ಎಂದು ಆರ್‌ಟಿಸಿ ಜೆ.ಸಿ.ಗಂಗಾಧರ್ ಎಚ್ಚರಿಕೆ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕಾನೂನಿನ ಇತಿಮಿತಿಯಲ್ಲಿ ವಾಹನಗಳ ಸಂಚಾರಕ್ಕೆ ಅಭ್ಯಂತರವಿಲ್ಲ. ಸರ್ಕಾರದ ಆದೇಶವನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕಾಗುತ್ತದೆ. ಇಲ್ಲವಾದರೆ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts