More

    ಶಿವಮೊಗ್ಗಕ್ಕೂ ವಿಸ್ತರಿಸಿದ ಬಂಜಾರರ ಹೋರಾಟ

    ಶಿವಮೊಗ್ಗ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಬಂಜಾರ, ಭೋವಿ, ಕೊರಮ ಮತ್ತು ಕೊರಚ ಸಮುದಾಯ ಶಿಕಾರಿಪುರದಲ್ಲಿ ಆರಂಭ ಮಾಡಿದ ಪ್ರತಿಭಟನೆ ಕ್ರಮೇಣ ಜಿಲ್ಲೆಯಾದ್ಯಂತ ವಿಸ್ತರಣೆಯಾಗತೊಡಗಿದ್ದು, ಶಿಕಾರಿಪುರ, ಕುಂಚೇನಹಳ್ಳಿ ತಾಂಡಾ ಬಳಿಕ ಈಗ ಶಿವಮೊಗ್ಗಕ್ಕೆ ಸ್ಥಳಾಂತರಗೊಂಡಿದೆ.
    ಬುಧವಾರ ಗಾಡಿಕೊಪ್ಪದಲ್ಲಿ ತಾಂಡಾದ ನೂರಾರು ಗ್ರಾಮಸ್ಥರು ಶಿವಮೊಗ್ಗ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ತಡೆದು ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಳಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಖಂಡಿಸಿದರು. ಟಯರ್‌ಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಂಜಾರ ಜನಾಂಗದ ಶಾಸಕರು ಹಾಗೂ ಸಂಸದರ ಅಣುಕು ಶವ ಪ್ರದರ್ಶನವನ್ನು ಮಾಡಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
    ಶೇ.15ರಷ್ಟಿದ್ದ ಎಸ್ಸಿ ಮೀಸಲನ್ನು ಹೆಚ್ಚಿಸಲಾಗಿದೆ. ಎಲ್ಲ ಎಸ್ಸಿಗಳಿಗೂ ಶೇ.17ರಷ್ಟು ಮೀಸಲು ಸಿಗಬೇಕಿತ್ತು. ಆದರೆ ಒಳ ಮೀಸಲಾತಿ ಕಲ್ಪಿಸಿದ್ದರಿಂದ ಬಂಜಾರರಿಗೆ ಶೇ.17ರಷ್ಟಿದ್ದ ಮೀಸಲು ಪ್ರಮಾಣ ಈಗ ಶೇ.4.5ಕ್ಕೆ ಇಳಿಕೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
    ಮತದಾನ ಬಹಿಷ್ಕಾರದ ಬೆದರಿಕೆ: ಒಳ ಮೀಸಲಾತಿ ನಿರ್ಧಾರ ಹಿಂಪಡೆಯುವವರೆಗೂ ತಾಂಡಾಗಳಲ್ಲಿ ಎಲ್ಲ ಪಕ್ಷದ ರಾಜಕೀಯ ನಾಯಕರಿಗೆ ಪ್ರವೇಶ ನಿಷೇಧಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ರವಾನಿಸಿದರು. ತಾಂಡಾಗಳಿಗೆ ಯಾವ ಪಕ್ಷದ ಶಾಸಕರು ಹಾಗೂ ನಾಯಕರನ್ನು ಒಳಗೆ ಬಿಡುವುದಿಲ್ಲ. ಬಿಜೆಪಿ ಸರ್ಕಾರ ಲಂಬಾಣಿ ಸಮುದಾಯದವರಿಗೆ ಅನ್ಯಾಯ ಮಾಡಿದ್ದು, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಗಾಡಿಕೊಪ್ಪ ತಾಂಡದ ನಾಯಕ್, ಡಾಕ್, ಕಾರ್ ಭಾರಿ ಮತ್ತು ತಾಂಡಾದ ಮಹಿಳೆಯರು, ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
    ಒಂದು ಗಂಟೆಗೂ ಅಧಿಕ ಕಾಲ ಸಂಚಾರ ಸ್ಥಗಿತ: ಒಂದು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದ ಕಾರಣ ಶಿವಮೊಗ್ಗ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯವಾಗಿತ್ತು. ಏಕಾಏಕಿ ಗಾಡಿಕೊಪ್ಪದ ತಾಂಡಾದ ಜನರು ಪ್ರತಿಭಟನೆ ನಡೆಸಿದರು. ಇದರಿಂದ ಶಿವಮೊಗ್ಗದಿಂದ ಸಾಗರ, ಹೊಸನಗರ, ಹೊನ್ನಾಳಿ(ಆಯನೂರು ಮಾರ್ಗವಾಗಿ) ತೆರಳುವ ಪ್ರಯಾಣಿಕರು ಪರದಾಟ ನಡೆಸುವಂತಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts