More

    ಶಿವಮೊಗ್ಗ-ರಾಣೆಬೆನ್ನೂರ ರೈಲು ಮಾರ್ಗಕ್ಕೆ ಶೀಘ್ರ ಶಂಕು

    ರಟ್ಟಿಹಳ್ಳಿ: ರಾಣೆಬೆನ್ನೂರ ನಗರದಿಂದ ರಟ್ಟಿಹಳ್ಳಿ, ಮಾಸೂರು ಮೂಲಕ ಶಿಕಾರಿಪುರ-ಶಿವಮೊಗ್ಗ ರೈಲು ಮಾರ್ಗಕ್ಕೆ ಡಿಸೆಂಬರ್​ನಲ್ಲಿ ಶಂಕುಸ್ಥಾಪನೆ ನಡೆಯಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

    ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಬಳಿ ಹೆದ್ದಾರಿ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.

    ರಾಣೆಬೆನ್ನೂರ-ಬೈಂದೂರ ರಾಷ್ಟ್ರೀಯ ಹೆದ್ದಾರಿ 766ಸಿಗೆ ಸಂಬಂಧಿಸಿದಂತೆ ವಿವಿಧೆಡೆ ದ್ವಿಪಥ ರಸ್ತೆ ಹಾಗೂ ಮಾಸೂರು ತಿಪ್ಪಾಯಿಕೊಪ್ಪ ಬಳಿ ಕುಮದ್ವತಿ ನದಿಗೆ ಸೇತುವೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗೆ ಒಟ್ಟು 218.93 ಕೋಟಿ ರೂಪಾಯಿ ಮಂಜೂರಾಗಿದೆ. ರಾಣೆಬೆನ್ನೂರ-ರಟ್ಟಿಹಳ್ಳಿ-ಮಾಸೂರು, ಶಿಕಾರಿಪುರ, ಅನಂತಪುರ-ಹೊಸನಗರ- ಬೈಂದೂರ ಹೆದ್ದಾರಿ ಕಾಮಗಾರಿಯಿಂದ ರಾಣೆಬೆನ್ನೂರ ಮತ್ತು ಶಿಕಾರಿಪುರ ವಾಣಿಜ್ಯ ನಗರಗಳ ಸಂಪರ್ಕಕ್ಕೆ ಅನುಕೂಲವಾಗಲಿದೆ ಎಂದರು.

    ಸ್ವಾತಂತ್ರ್ಯ ನಂತರ ಈ ಭಾಗದಲ್ಲಿ ರೈಲ್ವೆ ಯೋಜನೆ ಪ್ರಾರಂಭವಾಗಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಸಕ್ತಿ ಮೇರೆಗೆ ಈ ಭಾಗದ ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದಾಗಿ ರೈಲು ಮಾರ್ಗಕ್ಕೆ ಅನುಮೋದನೆ ದೊರೆತಿದೆ ಎಂದರು.

    ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಮಳೆಗಾಲದಲ್ಲಿ ಕುಮದ್ವತಿ ನದಿ ತುಂಬಿ ಹರಿಯುವುದರಿಂದ ತಿಪ್ಪಾಯಿಕೊಪ್ಪ ಸೇತುವೆ ಮುಳುಗಡೆಯಾಗಿ 4-5 ದಿವಸಗಳ ಕಾಲ ಸಂಚಾರ ಬಂದ್ ಆಗುತ್ತದೆ. ಈ ರಾಷ್ಟ್ರೀಯ ಹೆದ್ದಾರಿ ಯೋಜನೆ ಮೂಲಕ ಎತ್ತರ ಮಟ್ಟದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತದೆ ಎಂದರು.

    ಸಂಸದ ಶಿವಕುಮಾರ ಉದಾಸಿ ಮಾತನಾಡಿ,ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಈ ವರ್ಷ 1.90 ಲಕ್ಷ ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ. ಪ್ರತಿ ದಿನ 37 ಕಿ.ಮೀ. ಹೆದ್ದಾರಿ ಕಾಮಗಾರಿ ಜರುಗುತ್ತಿದೆ ಎಂದರು.

    ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ತಾಪಂ ಮಾಜಿ ಸದಸ್ಯ ಆರ್.ಎನ್. ಗಂಗೋಳ, ಫಾಲಾಕ್ಷಗೌಡ ಪಾಟೀಲ, ಷಣ್ಮುಖಯ್ಯ ಮಳ್ಳಿಮಠ, ಮಂಜುನಾಥ ತಳವಾರ, ಹೆಸ್ಕಾಂ ನಿರ್ದೇಶಕ ಮಹೇಶ ಗುಬ್ಬಿ, ಎಸ್.ಎಸ್.ಪಾಟೀಲ, ನಿಂಗನಗೌಡ ಹಳ್ಳಪ್ಪಗೌಡ್ರ, ಶಂಭಣ್ಣ ಗೂಳಪ್ಪನವರ, ಮಾಲತೇಶ ಗಂಗೋಳ, ವಿಜಯ ಅಂಗಡಿ, ಷಣ್ಮುಖಯ್ಯ ಮಳ್ಳಿಮಠ, ಕಂಠಾದರ ಅಂಗಡಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts