More

    ಮಹಿಳೆ-ಮಕ್ಕಳ ಹಕ್ಕು ರಕ್ಷಣೆಗೆ ಒತ್ತು: ಸಚಿವ ಈಶ್ವರಪ್ಪ

    ಶಿವಮೊಗ್ಗ: ಸ್ವಾತಂತ್ರ್ಯ ಎಂಬುದು ಸ್ವೇಚ್ಛಾಚಾರವಲ್ಲ. ಸಮಾನತೆ, ಸಹೋದರತೆ, ಸಾಮರಸ್ಯ ನಿತ್ಯ ಬದುಕಿನ ಭಾಗವಾಗಬೇಕಿದೆ. ಕಾನೂನು ಗೌರವಿಸುವುದು, ಮಹಿಳೆ ಮತ್ತು ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
    ನಗರದ ಡಿಎಆರ್ ಮೈದಾನದಲ್ಲಿ ಭಾನುವಾರ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ತಾಲೂಕು ಆಡಳಿತದಿಂದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯೋತ್ಸವದ ಸುಸಂದರ್ಭದಲ್ಲಿ ಮಹಾತ್ಮರ ಆಶಯದಂತೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ದೇಶವನ್ನು ಮತ್ತಷ್ಟು ಸಮೃದ್ಧಗೊಳಿಸಲು ಸಂಕಲ್ಪ ಮಾಡಬೇಕಿದೆ. ಯುವಜನತೆ ಸ್ವಾತಂತ್ರ್ಯದ ಮಹತ್ವ ಮತ್ತು ಹೋರಾಟದ ಹಿಂದಿನ ಪರಿಶ್ರಮ ಅರ್ಥ ಮಾಡಿಕೊಳ್ಳಬೇಕಿದೆ. ಈ ಮೂಲಕ ದೇಶದ ಹಿರಿಮೆ-ಗರಿಮೆಯನ್ನು ಎತ್ತರಕ್ಕೇರಿಸಬೇಕಿದೆ ಎಂದು ತಿಳಿಸಿದರು.
    ಅದಕ್ಕೂ ಮುನ್ನ ಸಚಿವರು ಜಿಲ್ಲಾ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು. ಮಾಚೇನಹಳ್ಳಿ ಕೆಎಸ್‌ಆರ್‌ಪಿ 8ನೇ ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಶಿವಮೊಗ್ಗ ಉಪ ವಿಭಾಗದ ಸಿವಿಲ್ ಪೊಲೀಸ್ ತುಕಡಿ, ಮಹಿಳಾ ಪೊಲೀಸ್ ತುಕಡಿ, ಅಗ್ನಿ ಶಾಮಕದಳ, ಅರಣ್ಯ ಇಲಾಖೆ, ಗೃಹ ರಕ್ಷಕ ದಳದ ಪುರುಷ ಮತ್ತು ಮಹಿಳಾ ಪಡೆ ಮತ್ತು ಅಬಕಾರಿ ಇಲಾಖೆ ಸಿಬ್ಬಂದಿ ಪಥ ಸಂಚಲನ ನಡೆಸಿದರು.
    ಮೇಯರ್ ಸುನೀತಾ ಅಣ್ಣಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಕೆ.ಬಿ.ಅಶೋಕ್ ನಾಯ್ಕ, ಎಂಎಲ್‌ಸಿಗಳಾದ ಆರ್.ಪ್ರಸನ್ನಕುಮಾರ್, ಎಸ್.ರುದ್ರೇಗೌಡ, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಉಪ ಮೇಯರ್ ಶಂಕರ್ ಗನ್ನಿ, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಸದಸ್ಯರಾದ ಎಚ್.ಸಿ.ಯೋಗೇಶ್, ಅನಿತಾ ರವಿಶಂಕರ್, ಸುರೇಖಾ ಮುರಳೀಧರ್, ಎಸ್.ಜ್ಞಾನೇಶ್ವರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts