More

    0.140 ಮಿಲಿ ಗ್ರಾಂ ಚಿನ್ನದ ಗಣಪತಿ, ಕುಸರಿ ಕೆಲಸಗಾರ ಪ್ರಶಾಂತ್ ಕೈಚಳಕ

    ಶಿವಮೊಗ್ಗ: ಎಲ್ಲೆಡೆ ಗೌರಿ-ಗಣೇಶ ಹಬ್ಬ ಆಚರಣೆ ಸಂಭ್ರಮ. ಹಳ್ಳಿಯಿಂದ ದಿಲ್ಲಿವರೆಗೂ ಯಾವ ಗಲ್ಲಿ, ಬಡಾವಣೆ, ದೇವಸ್ಥಾನಗಳಲ್ಲಿ ವಿರಾಜಮನನಾಗಿರುವ ವಿಘ್ನ ವಿನಾಯಕ ಮೂರ್ತಿಗಳಿಗೆ ಜೈಘೋಷ ಮೊಳಗುತ್ತಿದೆ. ಪರಿಸರಸ್ನೇಹಿ ಸೇರಿದಂತೆ ಒಂದಕ್ಕಿಂದ ಒಂದು ಭಿನ್ನವಾದ ಮೂರ್ತಿಗಳು ಗಮನ ಸೆಳೆಯುತ್ತಿವೆ. ಈ ನಡುವೆ ಶಿವಮೊಗ್ಗದಲ್ಲಿ ಕೇವಲ 0.140 ಮಿಲಿ ಗ್ರಾಂನ ಚಿನ್ನದ ಗಣಪತಿ ವಿಗ್ರಹವೊಂದು ಭಕ್ತರ ಕಣ್ಮನ ಸೆಳೆಯುತ್ತಿದೆ.
    ಗಾಂಧಿಬಜಾರ್ ಉಪ್ಪಾರಕೇರಿ ಮಹಾಲಸಾ ಚಿನ್ನಾಭರಣ ಮಳಿಗೆಯ ಕುಸರಿ ಕೆಲಸಗಾರ ಪ್ರಶಾಂತ್ ಎಸ್.ವರ್ಣೇಕರ್ ಕೇವಲ ಒಂದೇ ದಿನದಲ್ಲಿ ಒಂದು ಮಿಲಿಗ್ರಾಂಗಿಂತಲೂ ಕಡಿಮೆ ತೂಕವಿರುವ ಚಿನ್ನದ ಗಣೇಶನ ವಿಗ್ರಹ ಸಿದ್ಧಪಡಿಸಿದ್ದಾರೆ.
    ಅಂಕೋಲದ ಬೆಳೆಸೆ ಗ್ರಾಮದ ಪ್ರಶಾಂತ್ ಅವರ ತಂದೆ ಹಲವು ದಶಕಗಳ ಹಿಂದೆಯೇ ಶಿವಮೊಗ್ಗದಲ್ಲಿ ಬಂದು ನೆಲೆಸಿದ್ದಾರೆ. ತಂದೆಯೊಂದಿಗೆ ಮಹಾಲಸಾ ಚಿನ್ನಾಭರಣ ಮಳಿಗೆಯಲ್ಲಿ ಕುಸರಿ ಕೆಲಸ ಮಾಡಿಕೊಂಡಿರುವ ಪ್ರಶಾಂತ್ ಕೂಡ ಸ್ವಾಭಾವಿಕವಾಗಿರುವುದನ್ನು ವಿಭಿನ್ನವಾಗಿಸುವ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಮೂಗುಬೊಟ್ಟಿಗಿಂತಲೂ ಕಿರಿದಾಗಿರುವ ಗಣೇಶನ ಮೂರ್ತಿ ತಯಾರಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
    ಈ ಹಿಂದೆ ಚಿನ್ನಾಭರಣ ಮಳಿಗೆದಾರರ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಮಿಶ್ರಣದೊಂದಿಗೆ ವಿಶ್ವವಿಖ್ಯಾತ ತಾಜ್‌ಮಹಲ್ ಪ್ರತಿಕೃತಿ ತಯಾರಿಸಿದ್ದ ಪ್ರಶಾಂತ್ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದರು. ಆನಂತರ ಪ್ರತಿವರ್ಷ ಒಂದಿಲ್ಲೊಂದು ಕುಸರಿ ಕೆಲಸ ಮಾಡುತ್ತಲೇ ಇದ್ದಾರೆ. ತಾಜ್‌ಮಹಲ್ ಬಳಿಕ ಒಂದು ಮಿಲಿ ಗ್ರಾಂಗಿಂತ ಕಡಿಮೆ ತೂಕದ ವೀಣೆ, ತಬಲ, ತಕ್ಕಡಿ, ಕುರ್ಚಿ ನಿರ್ಮಿಸಿದ್ದಾರೆ. ಇದೀಗ ಗಣಪತಿ ಹಬ್ಬದ ನಿಮಿತ್ತ ವಿಘ್ನ ನಿವಾರಕನನ್ನು ಕೇವಲ 0.140 ಮಿಲಿ ಗ್ರಾಂನಲ್ಲಿ ಸಿದ್ಧಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts