More

    ಹಣಕಾಸಿನ ವಿಚಾರಕ್ಕೆ ಸ್ನೇಹಿತನ ಕೊಲೆ; ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

    ಶಿವಮೊಗ್ಗ: ಹಣಕಾಸಿನ ವಿಚಾರದಲ್ಲಿ ಸ್ನೇಹಿತನ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ 2ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯವು ನಾಲ್ವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 20 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲರಾದಲ್ಲಿ ಹೆಚ್ಚುವರಿ 6 ತಿಂಗಳು ಸಾದಾ ಕಾರಗೃಹ ಶಿಕ್ಷೆ ನೀಡಿ ಆದೇಶ ನೀಡಿದೆ.

    ಗಾಜನೂರಿನ ದುರ್ಗ ಅಲಿಯಾಸ್ ದುರ್ಗಪ್ಪ (29), ಉಮೇಶ (30), ಸುರೇಂದ್ರ ಅಲಿಯಾಸ್ ಸುರೇಶ (30) ಹಾಗೂ ಶಂಕರ ಅಲಿಯಾಸ್ ಶಿವಶಂಕರ (24) ಜೀವಾವಧಿ ಶಿಕ್ಷೆಗೆ ಒಳಗಾದವರು. ಗಾಜನೂರು ಇಂದಿರಾನಗರದ ರಾಘು ಅಲಿಯಾಸ್ ರಾಘವೇಂದ್ರ (28) ಕೊಲೆಯಾಗಿದ್ದ.

    ಪ್ರಕರಣದ ಹಿನ್ನೆಲೆ:

    ರಾಘವೇಂದ್ರ ಮತ್ತು ದುರ್ಗ ಸ್ನೇಹಿತರಾಗಿದ್ದು, ಗಾಜನೂರಿನ ಇಂದಿರಾನಗರದಲ್ಲಿ ವಾಸವಾಗಿದ್ದರು. ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ವೈಯಕ್ತಿಕ ದ್ವೇಷ ಬೆಳೆದಿತ್ತು. ಈ ಹಿನ್ನಲೆಯಲ್ಲಿ ದುರ್ಗ ತನ್ನ ಸ್ನೇಹಿತರಾದ ಉಮೇಶ್, ಸುರೇಂದ್ರ, ಶಂಕರ ಮತ್ತು ಲೋಕೇಶಪ್ಪನ ಜತೆಗೂಡಿ 2013ರ ಮೇ 29ರಂದು ರಾಘವೇಂದ್ರನ ಕೊಲೆಗೆ ಸಂಚು ರೂಪಿಸಿದ್ದ.

    ಅಂದು ರಾತ್ರಿ ರಾಘವೇಂದ್ರ ಇಂದಿರಾನಗರ ಚಾನಲ್ ಏರಿ ಮೇಲೆ ನಡೆದುಕೊಂಡು ಹೋಗುವಾಗ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಆತನ ಎಡಕುತ್ತಿಗೆ, ಕಿವಿ ಮತ್ತು ಕಾಲುಗಳ ಮೇಲೆ ಹರಿತವಾದ ಆಯುಧದಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಪ್ರಕರಣದ ಅಂದಿನ ತನಿಖಾಧಿಕಾರಿಯಾಗಿದ್ದ ಶಿವಮೊಗ್ಗ ಡಿವೈಎಸ್ಪಿ ರಾಮನಾಯ್ಕ್ ಅವರು ದುರ್ಗ ಸೇರಿದಂತೆ ಐವರನ್ನು ಬಂಧಿಸಿ 2013ರ ಜೂ.28ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಶಿವಪ್ರಸಾದ್, ದುರ್ಗ, ಉಮೇಶ್, ಸುರೇಂದ್ರ ಮತ್ತು ಶಂಕರನಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.

    ಲೋಕೇಶನಪ್ಪ ವಿರುದ್ಧ ಸೂಕ್ತ ಸಾಕ್ಷ್ಯಧಾರಗಳು ಸಿಗದ ಕಾರಣ ಪ್ರಕರಣದಿಂದ ಬಿಡುಗಡೆಗೊಳಿಸಿದರು. ದಂಡದಲ್ಲಿ ಮೃತ ರಾಘವೇಂದ್ರನ ಪತ್ನಿ ಮಂಜುಳಾ ಅವರಿಗೆ 60 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪಿ.ಒ.ಪುಷ್ಪಾ ಅವರು ವಾದ ಮಂಡಿಸಿದ್ದರು.

    ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts