More

    ಫೆ.8ರಂದು ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಿಎಂ ಚಾಲನೆ

    ಶಿವಮೊಗ್ಗ: ನಗರದಲ್ಲಿ ಫೆಬ್ರವರಿ 8ರಂದು ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸುವರು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.
    ಡಿಸಿ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ನಗರ ವ್ಯಾಪ್ತಿಯಲ್ಲಿ ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಹಾಗೂ ಪ್ರಮುಖ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಗುವುದು. ಎಲ್ಲ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರಗಳನ್ನು ಜಿಲ್ಲಾಧಿಕಾರಿ ಅವರಿಗೆ ತಕ್ಷಣ ಸಲ್ಲಿಸುವಂತೆ ಸೂಚನೆ ನೀಡಿದರು.
    ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ 23 ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳನ್ನು ಅನುಷ್ಠಾನಗೊಳಿಸಲಾಗಿದೆ. ವಿವೇಕ ಶಾಲೆ ಯೋಜನೆಯಡಿ 14 ಕಾಮಗಾರಿಗಳ ಶಂಕುಸ್ಥಾಪನೆ, ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ 10 ಅಂಗನವಾಡಿಗಳ ಉದ್ಘಾಟನೆ ಹಾಗೂ ಇನ್ನೂ 11 ಅಂಗನವಾಡಿಗಳಿಗೆ ಶಂಕುಸ್ಥಾಪನೆ, ಈಗಾಗಲೇ ಪೂರ್ಣಗೊಂಡಿರುವ 300 ಆಶ್ರಯ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ, ನಿರ್ಮಿತಿ ಕೇಂದ್ರದಿಂದ ಕೈಗೊಂಡಿರುವ 24 ಸಮುದಾಯ ಭವನಗಳ ಉದ್ಘಾಟನೆ ಹಾಗೂ ಪ್ರಾದೇಶಿಕ ಲಸಿಕಾ ಕೇಂದ್ರಕ್ಕೆ ಶಂಕುಸ್ಥಾಪನೆ ಸೇರಿದಂತೆ ಎಲ್ಲ ಪ್ರಮುಖ ಕಾಮಗಾರಿಗಳ ವಿವರಗಳನ್ನು ಒದಗಿಸಬೇಕು ಎಂದು ಹೇಳಿದರು.
    ಈಗಾಗಲೇ 300 ಆಶ್ರಯ ಮನೆಗಳು ಪೂರ್ಣಗೊಂಡಿದ್ದು, ಅದಕ್ಕೆ ನೀರು, ವಿದ್ಯುತ್ ಮತ್ತು ಒಳಚರಂಡಿ ಸಂಪರ್ಕಗಳನ್ನು ತಕ್ಷಣ ಕಲ್ಪಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ಒದಗಿಸಲು ಕ್ರಮ ಕೈಗೊಳ್ಳಬೇಕು. ಎನ್‌ಇಎಸ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
    ಮೇಯರ್ ಎಸ್.ಶಿವಕುಮಾರ್, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಉಪ ಮೇಯರ್ ಲಕ್ಷ್ಮೀಶಂಕರ ನಾಯ್ಕ, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಜ್ಞಾನೇಶ್ವರ್, ಸದಸ್ಯ ಎಸ್.ಎನ್.ಚನ್ನಬಸಪ್ಪ, ಡಿಸಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಎನ್.ಡಿ.ಪ್ರಕಾಶ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts