More

    ಶಿವಮೊಗ್ಗದಲ್ಲಿ ಕೋಟಿ ಕೋಟಿ ರೂ. ಮೌಲ್ಯದ ಸೀರೆ, ನಗದು ಜಪ್ತಿ

    ಶಿವಮೊಗ್ಗ: ಜಿಲ್ಲೆಯಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ದಾಖಲೆ ರಹಿತವಾಗಿ ಕೋಟಿ ಕೋಟಿ ರೂ. ಮೌಲ್ಯದ ಬಟ್ಟೆ ಬರೆ, ಗೃಹೋಪಯೋಗಿ ವಸ್ತುಗಳು, ನಗದು, ಮದ್ಯ ಮತ್ತು ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿದ್ದು ಮಲೆನಾಡಿನಾದ್ಯಂತ ಭಾರೀ ಸದ್ದು ಮಾಡುತ್ತಿದೆ.
    ನೀತಿ ಸಂಹಿತೆ ಜಾರಿಗೊಂಡ ಬೆನ್ನಲ್ಲೇ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ 30ಕ್ಕೂ ಅಧಿಕ ಕಡೆ ಚೆಕ್‌ಪೋಸ್ಟ್‌ಗಳನ್ನು ತೆರೆದಿದ್ದು ತೀವ್ರ ನಿಗಾ ವಹಿಸಿದೆ. ಪ್ರತಿಯೊಂದು ವಾಹನಗಳನ್ನು ಕೂಲಂಕಶವಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದೇ ವೇಳೆ ನಗರದ ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದೆ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ 4.50 ಕೋಟಿ ರೂ. ಮೌಲ್ಯದ ಸೀರೆಗಳನ್ನು ವಶಪಡಿಸಿಕೊಂಡು ಜನಪ್ರತಿನಿಧಿಗಳಿಗೆ ಶಾಕ್ ನೀಡಿದ್ದಾರೆ.
    ಇದುವರೆಗೆ ಲಕ್ಷಾಂತರ ರೂ. ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದ ವಸ್ತುಗಳು, ಇದೀಗ ಕೋಟ್ಯಂತರ ರೂ.ಗೆ ತಲುಪಿದೆ. ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಜಿಲ್ಲಾಡಳಿತ ಹೈ ಅಲರ್ಟ್ ಆಗಿದ್ದು ವಾರದ ಹಿಂದಷ್ಟೇ ಈಸ್ಟ್ ವೆಸ್ಟ್ ಬಸ್‌ನಲ್ಲಿ ಅಕ್ರಮವಾಗಿ ಹಣ ಸಾಗಿಸಲಾಗುತ್ತಿದೆಂಬ ಮಾಹಿತಿ ಮೇರೆಗೆ ದಾಳಿ ನಡೆಸಿ 8 ಲಕ್ಷ ರೂ. ಮೌಲ್ಯದ ಬಟ್ಟೆಗಳು ಪತ್ತೆಯಾಗಿದ್ದವು. ಇದೀಗ ನಗರದ ಕೆ.ಆರ್.ಪುರಂ ರಸ್ತೆಯಲ್ಲಿರುವ ಡಿಲಕ್ಸ್ ಲಾಜಿಸ್ಟಿಕ್ ಗೋದಾಮಿನಲ್ಲಿ 4.50 ಕೋಟಿ ರೂ. ಮೌಲ್ಯದ ಸೀರೆಗಳು ಪತ್ತೆಯಾಗಿವೆ. ಸೀರೆಗಳಿಗೆ ಯಾವುದೇ ದಾಖಲಾತಿ ಇಲ್ಲದ ಕಾರಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.
    1.60 ಕೋಟಿ ರೂ. ನಗದು ಪತ್ತೆ: ಶಿವಮೊಗ್ಗ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹರಕೆರೆ ಚೆಕ್‌ಪೋಸ್ಟ್‌ನಲ್ಲಿ ಸಮರ್ಪಕ ದಾಖಲೆ ಇಲ್ಲದ 1.40 ಕೋಟಿ ರೂ. ಹಣ ಪತ್ತೆಯಾಗಿದೆ. ಹಣವನ್ನು ತುಂಗಾನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾಂಕ್ ಎಟಿಎಂಗಳಿಗೆ ಹಣ ಪೂರೈಕೆ ಮಾಡುವ ವಾಹನದ ತಪಾಸಣೆ ನಡೆಸಿದಾಗ 1.40 ಕೋಟಿ ರೂ. ನಗದು ಸಿಕ್ಕಿದೆ. ಸಮರ್ಪಕ ದಾಖಲೆ ಒದಗಿಸದ ಹಿನ್ನೆಲೆ ಹಣವನ್ನು ವಶಕ್ಕೆ ಪಡೆಯಲಾಗಿದೆ. ತುಂಗಾನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ರಾತ್ರಿ ವೇಳೆ ಬ್ಯಾಂಕ್ ಅಥವಾ ಎಟಿಎಂಗಳಿಗೆ ಹಣ ಸಾಗಿಸುವಂತಿಲ್ಲ. ಆದರೂ ಖಾಸಗಿ ಬ್ಯಾಂಕ್‌ನ ಎಟಿಎಂಗೆ ಹಣ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಸಾಗರದ ಚೂರಿಕಟ್ಟೆ ಚೆಕ್‌ಪೋಸ್ಟ್‌ನಲ್ಲಿ ಟಾಟಾ ಇಂಡಿಗೋ ಕಾರಿನಲ್ಲಿದ್ದ 20 ಲಕ್ಷ ರೂ. ಜಪ್ತಿ ಮಾಡಿದ್ದಾರೆ. ಸೂಕ್ತ ದಾಖಲಾತಿ ನೀಡದ ಹಿನ್ನಲೆಯಲ್ಲಿ ಹಣ ಮತ್ತು ಕಾರು ವಶಕ್ಕೆ ಪಡೆಯಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts