More

    ಕುರಿಗಾರರಿಗೆ ಪರಿಹಾರ ಸ್ಥಗಿತ ಖಂಡನೀಯ

    ಬೆಳಗಾವಿ: ಅಪಘಾತ ಅಥವಾ ಕಾಯಿಲೆಗೆ ತುತ್ತಾಗಿ ಮೃತಪಡುವ ಕುರಿಗೆ ಸರ್ಕಾರ ನೀಡುತ್ತಿದ್ದ 5 ಸಾವಿರ ರೂ. ಪರಿಹಾರ ಸ್ಥಗಿತ ಮಾಡಿರುವುದು ಖಂಡನೀಯ ಎಂದು ಕುರಿ ಮತ್ತು ಮೇಕೆ ಮಹಾಮಂಡಳದ ಅಧ್ಯಕ್ಷ ಪಂಡಿತರಾವ್ ಚಿದ್ರಿ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ 2014ರಿಂದ ಮೃತಪಟ್ಟ ಕುರಿಗೆ 5 ಸಾವಿರ ರೂ. ಸಹಾಯಧನ ನೀಡುತ್ತ ಬಂದಿತ್ತು. 2020ರ ಏಪ್ರಿಲ್‌ನಿಂದ ಏಕಾಏಕಿ ಪರಿಹಾರಧನ ನೀಡುವುದನ್ನು ನಿಲ್ಲಿಸಿದೆ. ಇದರಿಂದ ರಾಜ್ಯದಲ್ಲಿರುವ ಸುಮಾರ 6 ಲಕ್ಷ ಕುರಿಗಾರರಿಗೆ ಆರ್ಥಿಕ ನಷ್ಟವಾಗುತ್ತಿದೆ ಎಂದರು. ಹಲವು ಸಮುದಾಯಗಳ ಬಡವರು ಸಹ ಕುರಿಗಳನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಸರ್ಕಾರ ನಿಗಮ, ಮಂಡಳಿ ಸ್ಥಾಪಿಸಿ, ಹಣ ಮೀಸಲಿಡುತ್ತಿದೆ. ಆದರೆ, ಕುರಿಗಾರರಿಗೆ ಪರಿಹಾರಧನ ಸ್ಥಗಿತ ಮಾಡಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು. ಕುರಿಗಳು ಉತ್ತಮ ಗೊಬ್ಬರ ಕೊಡುತ್ತವೆ. ಸಿಂಗಾಪುರದಲ್ಲಿ ಕುರಿಗಳ ಹಾಲನ್ನು ಔಷಧ ತಯಾರಿಕೆಯಲ್ಲಿ ಬಳಸುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಕುರಿಗಳ ಹಾಲು ಸಂಗ್ರಹಿಸಿ ಮಾರುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

    ಒಬ್ಬ ಮನುಷ್ಯ ವರ್ಷದ ಅವಧಿಯಲ್ಲಿ 11 ಕೆ.ಜಿ.ಯಷ್ಟು ಕುರಿ ಮಾಂಸ ತಿಂದರೆ ಆರೋಗ್ಯವಂತನಾಗಿರುತ್ತಾನೆ ಎಂದು ವಿಶ್ವ ಸಂಸ್ಥೆಯ ವರದಿ ಹೇಳುತ್ತದೆ. ಆದರೆ, ಪ್ರಸ್ತುತ ಒಬ್ಬರಿಗೆ 5-6 ಕೆ.ಜಿ. ಮಾಂಸ ಮಾತ್ರ ಲಭ್ಯವಾಗುತ್ತಿದೆ. ಹೀಗಾಗಿ ಸರ್ಕಾರ ಕುರಿಗಾರರನ್ನು ಉತ್ತೇಜಿಸಬೇಕು ಎಂದು ಆಗ್ರಹಿಸಿದರು.

    ಬೆಂಗಳೂರು ಚಲೋ: 2014ರಿಂದ ಬೆಳಗಾವಿ ಜಿಲ್ಲೆಗೆ ಇದುವರೆಗೆ 1.8 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ. 51 ಲಕ್ಷ ರೂ. ಪರಿಹಾರ ಬಾಕಿಯಿದೆ. ರಾಜ್ಯದಲ್ಲಿ ಒಟ್ಟು 88.67 ಕೋಟಿ ರೂ. ಪರಿಹಾರ ಧನ ಬಿಡುಗಡೆಯಾಗಿದ್ದು, 39.18 ಕೋಟಿ ರೂ. ಬಾಕಿ ಇದೆ. ಪಶುಗಳಿಗೆ ಋತುಮಾನಕ್ಕೆ ತಕ್ಕಂತೆ ಔಷಧ ವಿತರಿಸುವಂತೆ ಕುರಿಗಳಿಗೂ ವಿತರಣೆ ಮಾಡಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯದ ಎಲ್ಲ ಕುರಿಗಾರರು ಬೆಂಗಳೂರು ಚಲೋ ರ‌್ಯಾಲಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಚಿದ್ರಿ ಎಚ್ಚರಿಕೆ ನೀಡಿದರು.

    ಕುರಿ ಮತ್ತು ಮೇಕೆ ಮಹಾಮಂಡಲದ ಬೆಳಗಾವಿ ನಿರ್ದೇಶಕ ಗಜಾನನ ಕೊಳ್ಳಿ, ಮಹಾಮಂಡಳ ನಿರ್ದೇಶಕರಾದ ಎಸ್.ವಿ. ಲಿಂಗರಾಜ, ಸಂಗಮೇಶ ವಾಲೀಕಾರ, ಕುರುಬರ ಸಂಘ ಉಪಾಧ್ಯಕ್ಷ ಶಂಕರ ಹೆಗಡೆ ಸುದ್ದಿಗೋಷ್ಠಿಯಲ್ಲಿದ್ದರು.

    ನಾನು ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷನಾಗಿದ್ದಾಗ ಕುರಿಗಾರರ ಸೊಸೈಟಿಗೆ 5 ಲಕ್ಷ ರೂ. ನಂತೆ 111 ಸೊಸೈಟಿಗೆ ಒಟ್ಟು ಐದೂವರೆ ಕೋಟಿ ರೂ. ಒಂದಾವರ್ತಿ ಪ್ರೋತ್ಸಾಹಧನ ವಿತರಿಸಿದ್ದೆ.
    | ಪಂಡಿತರಾವ್ ಚಿದ್ರಿ, ಕುರಿ ಮತ್ತು ಮೇಕೆ ಮಹಾಮಂಡಳದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts