More

    ತಾತ್ಕಾಲಿಕ ಮಾರುಕಟ್ಟೆಯಲ್ಲಿ ಅಲೆಮಾರಿಗಳ ವಾಸ, ಪುರಭವನದ ಬಳಿ ನಿರ್ಮಿಸಿದ ಶೆಡ್‌ಗಳು ನಿಷ್ಪ್ರಯೋಜಕ

    ಮಂಗಳೂರು: ನಗರದ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಿಗಳಿಗೆ ಪುರಭವನದ ಬಳಿ ನಿರ್ಮಾಣ ಮಾಡಿದ ತಾತ್ಕಾಲಿಕ ಮಾರುಕಟ್ಟೆ ಶೆಡ್‌ಗಳಲ್ಲಿ ಈಗ ಅಲೆಮಾರಿಗಳು ವಾಸ ಮಾಡುತ್ತಿದ್ದಾರೆ.

    ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಿಗಳು ಮಾರುಕಟ್ಟೆ ಪ್ರವೇಶಿಸದಂತೆ ನಿರ್ಬಂಧಿಸಿ ಸುಮಾರು ಮೂರು ತಿಂಗಳಾಗಿವೆ. ಕಟ್ಟಡ ಶಿಥಿಲವಾಗಿದ್ದು, ನೂತನ ಕಟ್ಟಡ ಕಾಮಗಾರಿ ನಡೆಯಲಿದೆ ಎನ್ನುವ ಕಾರಣ ನೀಡಿ ಮಹಾನಗರಪಾಲಿಕೆ ಅಲ್ಲಿನ ಚಿಲ್ಲರೆ ವ್ಯಾಪಾರಿಗಳಿಗೆ ವ್ಯಾಪಾರ ಮಾಡದಂತೆ ಆದೇಶ ಹೊರಡಿಸಿತ್ತು. ಇದಕ್ಕೂ ಮೊದಲು ರಖಂ ವ್ಯಾಪಾರಸ್ಥರನ್ನು ಬೈಕಂಪಾಡಿ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರ ಮಾಡಿತ್ತು.

    ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಶೀಟ್ ಅಳವಡಿಸಿ ಸ್ಟೇಟ್‌ಬ್ಯಾಂಕ್, ಲೇಡಿಗೋಶನ್ ಆಸ್ಪತ್ರೆ ಎದುರು, ಪುರಭವನ ಎದುರು ಭಾಗದ ಫುಟ್‌ಪಾತ್‌ಗಳಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ವ್ಯಾಪಾರಿಗಳು ಯಾರೊಬ್ಬರೂ ಇಲ್ಲಿ ಬಂದು ವ್ಯಾಪಾರ ನಡೆಸಿಲ್ಲ. ಶೆಡ್‌ಗಳು ಈ ಭಾಗಗಳಲ್ಲಿ ಅಲೆದಾಡುತ್ತಿರುವ ಅಲೆಮಾರಿಗಳಿಗೆ ಮಳೆಗಾಲದಲ್ಲಿ ವಾಸ ಮಾಡಲು ಉಪಯೋಗವಾಗುತ್ತಿದೆ.

    ಬೆಡ್ ಹಾಸಿ ನಿದ್ರೆ: ಅಲೆಮಾರಿಗಳು, ನಿರಾಶ್ರಿತರು ಈ ಶೆಡ್‌ಗಳಲ್ಲಿ ಬೆಡ್ ಹಾಸಿ ನಿದ್ರಿಸುತ್ತಿರುವುದು ಮಂಗಳವಾರ ಕಂಡು ಬಂತು. ಚಿಂದಿ ಆಯುವವರ ಕುಟುಂಬಗಳು ಇಲ್ಲಿ ವಾಸ ಮಾಡುತ್ತಿದ್ದು, ಹೋಟೆಲ್‌ಗಳಿಂದ ಪಾರ್ಸೆಲ್ ತಂದು ಶೆಡ್‌ನಲ್ಲೇ ಊಟ ಮಾಡುತ್ತಿದ್ದಾರೆ. ಬಳಿಕ ಅಲ್ಲಿಯೇ ನಿದ್ರಿಸುತ್ತಿರುವುದು ಕಂಡು ಬಂದಿದೆ. ಕೆಲವೊಂದು ಶೆಡ್‌ಗಳ ಶೀಟ್‌ಗಳು ಗಾಳಿ, ಮಳೆಗೆ ಹಾರಿ ಹೋಗಿವೆ.

    ಭಾನುವಾರ ಪುರಭವನದ ಎದುರು ಉತ್ತರ ಕರ್ನಾಟಕದವರ ಸಂತೆ ನಡೆಯುತ್ತದೆ. ಬಟ್ಟೆ, ತರಕಾರಿ ವ್ಯಾಪಾರ ಜೋರಾಗಿ ನಡೆಯುತ್ತದೆ. ಮಳೆಯಿಂದ ರಕ್ಷಿಸಿಕೊಳ್ಳಲು ಈ ಶೆಡ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕೆಲವೊಂದು ಶೆಡ್‌ಗಳಲ್ಲಿ ಬೀದಿ ನಾಯಿಗಳು ಮಲಗಿಕೊಂಡಿವೆ. ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಿಗಳು ಇಲ್ಲಿಗೆ ಬರದಿದ್ದರೂ, ಶೆಡ್‌ಗಳು ಖಾಲಿಯಾಗಿ ಉಳಿಯದೆ, ಬಳಕೆಯಾಗುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts