More

  ಶರಣರ ಆಶಯ ಸಮಸಮಾಜ ನಿರ್ಮಾಣ, ಮುಖ್ಯಮಂತ್ರಿ ಸಿದ್ದರಾಮಯ್ಯ

  ಬ್ಯಾಡಗಿ: ಎಲ್ಲ ಜಾತಿಯಲ್ಲಿರುವ ಬಡವರಿಗೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಶಕ್ತಿ ತುಂಬಿ ಸಮಾಜದ ಮುಖ್ಯವಾಹಿನಿಗೆ ತಂದಾಗ ಮಾತ್ರ ಅವರಿಗೆ ಸ್ವಾತಂತ್ರ್ಯ ಸಿಗಲಿದೆ. ಬಸವಾದಿ ಶರಣರು ವಚನಗಳ ಮೂಲಕ ಸಮಸಮಾಜ ನಿರ್ವಿುಸುವಂತೆ ತಿಳಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

  ತಾಲೂಕಿನ ಚಿಕ್ಕಬಾಸೂರಲ್ಲಿ ನೊಳಂಬ ಸಮಾಜದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಮಹಾಯೋಗಿ ಸಿದ್ಧರಾಮೇಶ್ವರರ 851ನೇ ಜಯಂತ್ಯುತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

  ಮಹಾಯೋಗಿ ಸಿದ್ಧರಾಮೇಶ್ವರರು ಬಸವಣ್ಣನವರ ಸಮಕಾಲೀನರು. 12ನೇ ಶತಮಾನದಲ್ಲಿ ಶರಣರು ವಚನ ಸಾಹಿತ್ಯ ಮೂಲಕ ಜೀವನ ಮೌಲ್ಯಗಳನ್ನು ತಿಳಿಸಿದ್ದು, ಕಾಯಕ, ದಾಸೋಹಕ್ಕೆ ಒತ್ತು ನೀಡಿದ್ದರು. ಮೌಢ್ಯ ಆಚರಣೆಗಳನ್ನು ಕೈಬಿಟ್ಟು ತಿಳಿವಳಿಕೆ ಹೊಂದಬೇಕು ಎಂದಿದ್ದರು. ಕುವೆಂಪು ಅವರು ಪ್ರತಿಯೊಬ್ಬರೂ ಹುಟ್ಟುವಾಗ ವಿಶ್ವಮಾನವರಾಗಿ ಹುಟ್ಟುತ್ತಾರೆ, ಬದುಕಿನಲ್ಲಿ ಅಲ್ಪ ಮಾನವರಾಗುತ್ತಾರೆ ಎಂದಿದ್ದಾರೆ. ಸಾರ್ಥಕ ಜೀವನ ನಡೆಸಲು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

  ಶರಣರು ಎಲ್ಲರಿಗೂ ಅರ್ಥೈಸಿಕೊಳ್ಳುವ ಶೈಲಿಯಲ್ಲಿ ವಿಶ್ವಕ್ಕೆ ವಚನ ಸಾಹಿತ್ಯ ಕೊಟ್ಟಿದ್ದಾರೆ. ಎಲ್ಲ ಜಾತಿ, ಜನಾಂಗದಲ್ಲಿ ಬಡವರಿದ್ದು, ಅವರಿಗೆ ಸಾಮಾಜಿಕ ಸ್ಥಾನಮಾನ, ಗುಣಮಟ್ಟದ ಶಿಕ್ಷಣ, ರಾಜಕೀಯ ಅವಕಾಶಗಳು ಕಲ್ಪಿಸಿದಾಗ ನೈಜವಾಗಿ ಸ್ವಾತಂತ್ರ್ಯ ಸಿಕ್ಕಂತಾಗಲಿದೆ ಎಂದು ಶರಣರು ಅನುಭವ ಮಂಟಪದಲ್ಲಿ ಪ್ರತಿಪಾದಿಸಿದ್ದರು ಎಂದರು.

  ದೇವಸ್ಥಾನಕ್ಕೆ ಹೋಗಬೇಡಿ:

  ಚಾತುರ್ವರ್ಣ ಪದ್ಧತಿಯನ್ನು ಸ್ವಾರ್ಥಕ್ಕಾಗಿ ಮಾಡಿಕೊಂಡಿದ್ದು, ಯಾರ್ಯಾರು ಇಂತಹದನ್ನೇ ಮಾಡಬೇಕೆಂದು ಏನಾದರೂ ಇದೆಯಾ. ಯಾವ ದೇವಸ್ಥಾನದಲ್ಲಿ ನಿಮ್ಮನ್ನು ಬಿಡುವುದಿಲ್ಲವೋ ಅಲ್ಲಿಗೆ ಹೋಗಬೇಡಿ. ಉನ್ನತ ಶಿಕ್ಷಣವಂತರು ಮೌಢ್ಯ ಆಚರಿಸುತ್ತಿರುವುದು ಸರಿಯಲ್ಲ. ಮನುಷ್ಯ ವೈಚಾರಿಕ ಆಲೋಚನೆ, ಚಿಂತನೆ ಮಾಡಬೇಕು. ಎಲ್ಲರನ್ನು ಎಲ್ಲರೂ ಪ್ರೀತಿಸಬೇಕೆ ಹೊರತು, ದ್ವೇಷಿಸಬಾರದು. ಯಾರೂ ಹಣೆಬರಹ ಬರೆದಿಲ್ಲವೆಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಕುಟುಂಬದಲ್ಲಿ ಆರು ಜನರಿದ್ದು, ನಾನು ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬಂದಿರುವೆ. ಇದರಲ್ಲೇನು ಹಣೆಬರಹ ಎಂದು ಪ್ರಶ್ನಿಸಿದರು.

  ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಉತ್ಸವ ಸಮಿತಿ ಸದಸ್ಯರು, ಸಚಿವರು, ಶಾಸಕರು ತೆರಳಿ ಸಿದ್ಧರಾಮೇಶ್ವರ ಜಯಂತಿ ಆಚರಣೆಗೆ 50 ಲಕ್ಷ ರೂಪಾಯಿ ಅನುದಾನ ಬೇಡಿಕೆಯಿಟ್ಟಿದ್ದಕ್ಕೆ ಸ್ಪಂದಿಸಿ ಮಂಜೂರು ಮಾಡಿದ್ದಾರೆ ಎಂದರು.

  ಹಾವೇರಿ ಜಿಲ್ಲೆಯನ್ನು ಕೃಷಿ ಭಾಗ್ಯ ಯೋಜನೆಯಿಂದ ಕೈಬಿಟ್ಟಿದ್ದು, ಸೇರ್ಪಡೆಗೊಳಿಸಬೇಕು. ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಿಂದ 160 ಕೆರೆಗಳಿಗೆ ಕಾಲುವೆ ನೀರು ಬಿಡಲಾಗುತ್ತಿದೆ. ಆದರೆ, ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ಕಾಲುವೆಯಲ್ಲಿ ಪೈಪ್​ಲೈನ್ ಮೂಲಕ ನೀರು ಹರಿಸಿ, ತಾಲೂಕಿನ ಮಲೆನಾಡು ಪ್ರದೇಶಕ್ಕೆ ಶಾಶ್ವತ ಯೋಜನೆಗೆ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

  ಪುಷ್ಪಗಿರಿ ಸೋಮೇಶ್ವರ ಶ್ರೀಗಳು, ಮನಗುಂಡಿಯ ಬಸವಾನಂದ ಶ್ರೀಗಳು, ಮಾಜಿ ಸಂಸದ ಮಂಜುನಾಥ ಕುನ್ನೂರ, ಶಾಸಕ ಶ್ರೀನಿವಾಸ ಮಾನೆ, ಎಂ.ಎಂ. ಹಿರೇಮಠ, ಶಾಸಕ ಕೆ. ಷಡಕ್ಷರಿ, ಎಂ. ನಂಜಾಮಣಿ, ಉದ್ಯಮಿ ಆನಂದ ಗಡ್ಡದೇವರಮಠ, ಸಮಿತಿಯ ಪದಾಧಿಕಾರಿಗಳಾದ ಎಸ್.ಆರ್. ಪಾಟೀಲ, ಸೋಮಶೇಖರ ಕಣಗಲಬಾವಿ ಇತರರು ಇದ್ದರು.

  ವಿಶೇಷ ಸೌಲಭ್ಯ ಕಲ್ಪಿಸಲು ಮನವಿ

  ರಾಜ್ಯ ನೊಳಂಬ ಸಮಾಜ ಬಾಂಧವರಿಗೆ ವಿಶೇಷ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಕೆಲ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗೆ ಸಮಿತಿ ಸದಸ್ಯರು ಮನವಿ ಪತ್ರ ಸಲ್ಲಿಸಿದರು. ಬಳಿಕ ಭಾಷಣದಲ್ಲಿ ಮುಖ್ಯಮಂತ್ರಿಗಳು ಪುಷ್ಪಗಿರಿ ಸಂಸ್ಥಾನದ ಸೋಮಶೇಖರ ಶ್ರೀಗಳು ಮಠದಿಂದ ಗ್ರಾಮಾಭಿವೃದ್ಧಿ ಸಂಸ್ಥೆ ತೆರೆದು ರಾಜ್ಯದ ವಿವಿಧ ಗ್ರಾಮಗಳಲ್ಲಿ 40 ಸಾವಿರ ಸ್ವಸಹಾಯ ಗುಂಪುಗಳನ್ನು ರಚಿಸಿ ಸರ್ವತೋಮುಖ ಬೆಳವಣಿಗೆಗೆ ಯತ್ನಿಸುತ್ತಿದ್ದಾರೆ. ಅನುದಾನ ನೀಡುವ ಕುರಿತು ಪರಿಶೀಲಿಸುತ್ತೇನೆ ಎಂದು ಭರವಸೆ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts