More

    ‘ಗುರು ಶಿಷ್ಯರು’; ಸ್ಟಾರ್ ಮಕ್ಕಳ ಖೋಖೋ

    |ಹರ್ಷವರ್ಧನ್ ಬ್ಯಾಡನೂರು

    ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ದೇಸೀ ಕ್ರೀಡೆಗಳನ್ನು ನೋಡಿದ್ದೇವೆ. ಇಂದು ಬಿಡುಗಡೆ ಯಾಗುತ್ತಿರುವ ಜಡೇಶ್ ಕೆ. ಹಂಪಿ ನಿರ್ದೇಶನದ, ಶರಣ್ ಅಭಿನಯದ ಚಿತ್ರ ‘ಗುರು ಶಿಷ್ಯರು’, ಖೋಖೋ ಹಿನ್ನೆಲೆಯ ಚಿತ್ರ. ಈ ಚಿತ್ರದ ವಿಶೇಷತೆಯೆಂದರೆ, ಕನ್ನಡದ ಜನಪ್ರಿಯ ನಟರ ಮಕ್ಕಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಶರಣ್ ಪುತ್ರ ಹೃದಯ್, ಪ್ರೇಮ್ ಪುತ್ರ ಏಕಾಂತ್, ಬುಲೆಟ್ ಪ್ರಕಾಶ್ ಮಗ ರಕ್ಷಕ್, ರವಿಶಂಕರ್ ಗೌಡ ಪುತ್ರ ಸೂರ್ಯ, ನವೀನ್ ಕೃಷ್ಣ ಮಗ ಹರ್ಷಿತ್ ಹಾಗೂ ಶಾಸಕ ರಾಜುಗೌಡ ಪುತ್ರ ಮಣಿಕಾಂತ್ ಈ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ತಮ್ಮ ಪಾತ್ರ, ಅದಕ್ಕಾಗಿ ಮಾಡಿಕೊಂಡ ಸಿದ್ಧತೆ, ಖೋಖೋ ಆಟದ ಅನುಭವ, ನಿರೀಕ್ಷೆಗಳ ಬಗ್ಗೆ ಈ ಮಕ್ಕಳು ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ.

    ಸದ್ಯ ಎರಡನೇ ಪಿಯು ಓದುತ್ತಿರುವ ಶರಣ್ ಪುತ್ರ ಹೃದಯ್, ‘ಗುರು ಶಿಷ್ಯರು’ ಚಿತ್ರದಲ್ಲಿ ಬೆಟ್ಟದಾಪುರ ಖೋಖೋ ತಂಡದ ಕ್ಯಾಪ್ಟನ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುತ್ತಾ ಹೃದಯ್, ‘ನನಗೆ ಡಾನ್ಸ್, ಜಿಮ್ನಾಸ್ಟಿಕ್ ಅಂದರೆ ಇಷ್ಟ. ವರ್ಕೌಟ್ ವಿಡಿಯೋಗಳನ್ನೂ ಆಗಾಗ ಮಾಡುತ್ತಿದ್ದೆ. ಒಮ್ಮೆ ಅಪ್ಪ, ತರುಣ್ ಸುಧೀರ್ ಮತ್ತು ನಿರ್ದೇಶಕ ಜಡೇಶ್ ಸರ್​ಗೆ ವಿಡಿಯೋ ತೋರಿಸಿದ್ದರಂತೆ. ಅದಾಗಿ ಹಲವು ದಿನಗಳ ಬಳಿಕ ದೈಹಿಕವಾಗಿ ಫಿಟ್ ಆಗಿರುವ, ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಹುಡುಗನನ್ನು ಹುಡುಕುತ್ತಿದ್ದಾಗ ನನಗೆ ಕರೆ ಮಾಡಿದರು. ಚಿತ್ರೀಕರಣಕ್ಕೂ ಮೊದಲು ಸುಮಾರು ಎಂಟು ತಿಂಗಳು ಬೆಳಗ್ಗೆ ಮತ್ತು ಸಂಜೆ ಸುಮಾರು ಐದಾರು ತಾಸು ಖೋಖೋ ತರಬೇತಿ ನೀಡಿದರು. ಮಧ್ಯಾಹ್ನ ನಟನೆಯ ತರಬೇತಿ ಇರುತ್ತಿತ್ತು. ಪ್ರತಿ ಶೆಡ್ಯುಲ್​ಗೂ ಮುನ್ನ ಎಲ್ಲ ಸೀನ್​ಗಳ ರಿಹರ್ಸಲ್ ನಡೆಯುತ್ತಿತ್ತು. ಮೊದಲ ದಿನವೇ ಅಪ್ಪನ ಜತೆ ನಟಿಸಬೇಕಿತ್ತು. ಅವರಂತಹ ಅನುಭವಿ ನಟನ ಮುಂದೆ ಹೇಗೆ ನಟಿಸೋದು ಅಂತ ನರ್ವಸ್ ಆಗಿಬಿಟ್ಟಿದ್ದೆ. ಅಪ್ಪ ಧೈರ್ಯ ಹೇಳಿದರು’ ಎಂದು ಹೇಳಿಕೊಳ್ಳುತ್ತಾರೆ.

    ‘ಗುರು ಶಿಷ್ಯರು'; ಸ್ಟಾರ್ ಮಕ್ಕಳ ಖೋಖೋ| ಹೃದಯ್, ನಟ ಶರಣ್ ಪುತ್ರ

    ‘ನೆನಪಿರಲಿ’ ಪ್ರೇಮ್ ಪುತ್ರ ಏಕಾಂತ್ , ‘ನಾನು ಜಿಮ್ನಾಸ್ಟಿಕ್ ಮಾಡುತ್ತಿದ್ದೆ. ತರುಣ್ ಸುಧೀರ್ ಸರ್ ಅದರ ವಿಡಿಯೋ ನೋಡಿದ್ದರಂತೆ. ಆಗ ಸಿನಿಮಾ ಬಗ್ಗೆ ಗೊತ್ತಾಯಿತು. ಚಿತ್ರಕ್ಕೆ ಆಯ್ಕೆಯಾದ ಬಳಿಕ ಅಪ್ಪ ಧ್ಯಾನ ಮಾಡಲು ಹೇಳುತ್ತಿದ್ದರು. ಶಾಂತಚಿತ್ತನಾಗಿ ಶೂಟಿಂಗ್ ಸೆಟ್​ಗೆ ಹೋಗಲು ತಿಳಿಸಿದ್ದರು. ಸದ್ಯ ಸೆಕೆಂಡ್ ಪಿಯು ಓದುತ್ತಿದ್ದೇನೆ. ಸದ್ಯಕ್ಕೆ ಬೇರೆ ಸಿನಿಮಾದಲ್ಲಿ ಅವಕಾಶ ಬಂದಿಲ್ಲ. ಬಂದರೆ ಅಪ್ಪ ಏನು ಹೇಳುತ್ತಾರೋ ಹಾಗೆ ಮಾಡುತ್ತೇನೆ. ಸಿನಿಮಾದಿಂದ ಹೊಸ ಗೆಳೆಯರು ಸಿಕ್ಕಿದ್ದಾರೆ. ಎಲ್ಲರಿಂದಲೂ ಕಲಿತಿದ್ದೇನೆ. ಜೀವನಪರ್ಯಂತ ನಮ್ಮ ಗೆಳೆತನ ಹಾಗೇ ಇರಲಿ ಎಂದು ಆಶಿಸುತ್ತೇನೆ’ ಎನ್ನುತ್ತಾರೆ.

    ‘ಗುರು ಶಿಷ್ಯರು'; ಸ್ಟಾರ್ ಮಕ್ಕಳ ಖೋಖೋ| ಏಕಾಂತ್, ನಟ ಪ್ರೇಮ್ ಪುತ್ರ

    ‘ಗುರು ಶಿಷ್ಯರು’ ಚಿತ್ರತಂಡದ ಎಲ್ಲ ಸ್ಟಾರ್ ಮಕ್ಕಳ ಪೈಕಿ ಅತಿ ಕಿರಿಯ ಅಂದರೆ ಅದು ರವಿಶಂಕರ್ ಗೌಡ ಪುತ್ರ ಸೂರ್ಯ. ಚಿತ್ರದ ಬಗ್ಗೆ ಮಾತನಾಡುತ್ತಾ, ‘ಕರೋನಾ ಸಮಯದಲ್ಲಿ ಯೂಟ್ಯೂಬ್ ವಿಡಿಯೋ ಮಾಡುತ್ತಿದ್ದೆ. ಅದನ್ನು ನೋಡಿ ಆಯ್ಕೆ ಮಾಡಿಕೊಂಡರು. ಕ್ಯಾಮರಾ ಮುಂದೆ ಭಯ ಹೋಗಲಾಡಿಸಲು ಮೊದಲು ಮಂಜು ನೀನಾಸಂ ಸಾರ್ ಎರಡು ತಿಂಗಳ ಕಾಲ ನಟನೆಯ ತರಬೇತಿ ನೀಡಿದರು. ಆ ನಂತರ 8 ತಿಂಗಳ ಕಾಲ ಖೋಖೋ ಪ್ರ್ಯಾಕ್ಟೀಸ್ ಮಾಡಿದೆವು. ನನಗಂತೂ ಆಕ್ಟಿಂಗ್ ಅಂದರೆ ತುಂಬ ಆಸಕ್ತಿ ಇದೆ. ಆದರೆ, ಮೊದಲು ಶಿಕ್ಷಣ ಅಂತ ಅಪ್ಪ-ಅಮ್ಮ ಹೇಳಿದ್ದಾರೆ’ ಎಂದು ಹೇಳಿಕೊಳ್ಳುತ್ತಾನೆ ಸೂರ್ಯ.

    ‘ಗುರು ಶಿಷ್ಯರು'; ಸ್ಟಾರ್ ಮಕ್ಕಳ ಖೋಖೋ| ಸೂರ್ಯ, ನಟ ರವಿಶಂಕರ್ ಗೌಡ ಪುತ್ರ

    ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ‘ನಾನು ಚಿತ್ರದಲ್ಲಿ ಡೈವ್ ಎಕ್ಸ್​ಪರ್ಟ್ ಪಾಷಾ ಪಾತ್ರದಲ್ಲಿ ನಟಿಸಿದ್ದೇನೆ. ಹೇರ್​ಸ್ಟೈಲ್, ಮಾತನಾಡುವ ಶೈಲಿ ಬದಲು ಮಾಡಿಕೊಂಡಿದ್ದೆ. ಪಾತ್ರಕ್ಕೆ ತಕ್ಕಂತೆ ಕಣ್​ಕಪು್ಪ, ತಾಯ್ತ ಹಾಕಿಕೊಂಡಿದ್ದೆ. ಚಿತ್ರೀಕರಣ ಪ್ರಾರಂಭಕ್ಕೂ ಮುನ್ನ ಆಕ್ಟಿಂಗ್ ವರ್ಕ್​ಶಾಪ್, ಖೋಖೋ ತರಬೇತಿ ಪಡೆದೆವು. ಖೋಖೋ ತಂಡದ ಎಲ್ಲರೂ ಸಿನಿಮಾದಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ಒಳ್ಳೆಯ ಗೆಳೆಯರಾಗಿದ್ದೇವೆ. ಶೂಟಿಂಗ್ ಸಮಯದಲ್ಲಿ ಖೋಖೋ ಆಡುವಾಗ ಎಲ್ಲರಿಗೂ ಗಾಯಗಳಾಗಿವೆ. ಇನ್ನೂ ಸಿನಿಮಾ ನೋಡಿಲ್ಲ, ಪ್ರೇಕ್ಷಕರ ಜತೆ ಕುಳಿತು ಸಿನಿಮಾ ನೋಡುತ್ತೇನೆ. ಮುಂದೆ ಚಿತ್ರರಂಗದಲ್ಲೇ ಮುಂದುವರಿಯುತ್ತೇನೆೆ’ ಎನ್ನುತ್ತಾರೆ.

    ‘ಗುರು ಶಿಷ್ಯರು'; ಸ್ಟಾರ್ ಮಕ್ಕಳ ಖೋಖೋ| ರಕ್ಷಕ್, ಬುಲೆಟ್ ಪ್ರಕಾಶ್ ಪುತ್ರ

    ಹಿರಿಯ ನಟ ಶ್ರೀನಿವಾಸಮೂರ್ತಿ ಮೊಮ್ಮಗ ಹಾಗೂ ನವೀನ್ ಕೃಷ್ಣ ಮಗ ಹರ್ಷಿತ್ ಮಾತನಾಡಿ, ‘ಲಾಕ್​ಡೌನ್ ಸಮಯದಲ್ಲಿ ನಾನು, ನನ್ನ ತಮ್ಮ ಇಬ್ಬರೂ ಹರ್ಷಿತ್-ಹರುಷ್ ಕಾಮಿಡಿ ಕಂಪನಿ ಅಂತ ಯೂಟ್ಯೂಬ್ ಚಾನಲ್ ಮಾಡಿಕೊಂಡು ಕಾಮಿಡಿ ವಿಡಿಯೋಗಳನ್ನು ಮಾಡುತ್ತಿದ್ದೆವು. ಅದನ್ನು ನೋಡಿ ಅವಕಾಶ ಸಿಕ್ಕಿತು. ನಾನಿಲ್ಲಿ ಬಸವ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಆಟಿಟ್ಯೂಡ್ ತೋರಿಸಬೇಡ, ಎಲ್ಲರನ್ನೂ ಮಾತನಾಡಿಸು, ವಿನಮ್ರತೆಯಿಂದ ಇರು, ಮೊದಲು ಮೇಕಪ್ ಹಾಗೂ ಕ್ಯಾಮರಾಗೆ ನಮಸ್ಕರಿಸಿ ಕೆಲಸ ಪ್ರಾರಂಭಿಸು ಎಂದು ಅಪ್ಪ ಹೇಳಿದ್ದರು. ಸಿನಿಮಾ ರಿಲೀಸ್ ಆಗುತ್ತಿರುವ ಖುಷಿಯೂ ಇದೆ. ಜತೆಗೆ ಸ್ವಲ್ಪ ನರ್ವಸ್ ಕೂಡ ಆಗಿದ್ದೇನೆ’ ಎಂದು ಮಾತನಾಡುತ್ತಾರೆ.

    ‘ಗುರು ಶಿಷ್ಯರು'; ಸ್ಟಾರ್ ಮಕ್ಕಳ ಖೋಖೋ| ಹರ್ಷಿತ್, ನಟ ನವೀನ್ ಕೃಷ್ಣ ಪುತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts