More

    ಕುರಿ, ಮೇಕೆ ಸಾಕಲು ಸರ್ಕಾರ ನೆರವಿಲ್ಲ ; ಉದ್ಯಮದತ್ತ ಯುವಕರ ಒಲವು ; ಸರ್ಕಾರದಿಂದ ಸಿಗುತ್ತಿಲ್ಲ ಔಷಧ ; ಜಿಲ್ಲೆಯಲ್ಲಿವೆ 17 ಲಕ್ಷ ಕುರಿ, ಮೇಕೆ

    ತುಮಕೂರು : ರಾಜ್ಯದಲ್ಲಿಯೇ ಅತೀ ಹೆಚ್ಚು ಕುರಿ, ಮೇಕೆಗಳಿರುವ ಜಿಲ್ಲೆಯಲ್ಲಿ ಕುರಿಗಾಹಿಗಳಿಗೆ ಸರ್ಕಾರದ ನೆರವು ಸಾಕಾಗುತ್ತಿಲ್ಲ ಎಂಬ ಕೊರಗಿದೆ. ಮಳೆಗಾಲದಲ್ಲಿ ಕುರಿ, ಮೇಕೆಗಳಿಗೆ ಜಂತುನಾಶಕ ಅಗತ್ಯವಿದ್ದು ದುಬಾರಿ ಹಣಕೊಟ್ಟು ಔಷಧ ಕೊಡಿಸುವುದು ರೈತರಿಗೆ ಕಷ್ಟವಾಗಿದೆ.

    ಜಿಲ್ಲೆಯಲ್ಲಿ 12 ಲಕ್ಷ ಕುರಿ, 6 ಲಕ್ಷ ಮೇಕೆಗಳನ್ನು ಸಾಕಣೆ ಮಾಡಲಾಗುತ್ತಿದ್ದು ಬಹುತೇಕರು ಇದೇ ವೃತ್ತಿ ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ, ಬಹುತೇಕರಿಗೆ ಕುರಿ, ಮೇಕೆಗಳಿಗೆ ಔಷಧ ಕೊಂಡುಕೊಳ್ಳುವುದೇ ಸಮಸ್ಯೆಯಾಗಿದೆ. ಪಶುಪಾಲನಾ ಇಲಾಖೆ ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಔಷಧ ಕೂಡ ನೀಡದಿರುವುದು ಉದ್ಯಮಕ್ಕೆ ನಷ್ಟ ತಂದಿದೆ.

    ವರ್ಷಕ್ಕೊಮ್ಮೆ ಜಂತುನಾಶಕ ನೀಡುವುದು ಅಗತ್ಯವಿದ್ದು ಸರ್ಕಾರದಿಂದಲೇ ಸಾಮೂಹಿಕವಾಗಿ ಔಷಧ ನೀಡುವ ಕಾರ್ಯಕ್ರಮಕ್ಕೆ ಜನಾಗ್ರಹ ಕೇಳಿಬಂದಿದೆ. ಶಿರಾ, ಪಾವಗಡ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹೆಚ್ಚು ಕುರಿಗಾಹಿಗಳಿದ್ದು ನೆರವಿನ ಹಸ್ತ ಚಾಚಬೇಕಿದೆ.

    ನಿಗಮದ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೆಡ್ ನಿರ್ಮಿಸಲು ಸಹಾಯಧನ ನೀಡಲಾಗುತ್ತಿದ್ದು, ಸಹಕಾರ ಸಂಘದಲ್ಲಿ ಸದಸ್ಯರಾಗಿರುವುದು ಕಡ್ಡಾಯಗೊಳಿಸಲಾಗಿರುವುದು ಸಾಕಷ್ಟು ಜನರಿಗೆ ಅರ್ಹತೆ ಇಲ್ಲದಂತಾಗಿದೆ. ಸಂಘದ ನೋಂದಣಿ ಹಾಗೂ ಸದಸ್ಯತ್ವ ಪಡೆದುಕೊಳ್ಳುವುದು ತಿಳಿಯದ ಕುರಿಗಾಹಿಗಳು ಸೌಲಭ್ಯದಿಂದ ವಂಚಿತರಾಗುವಂತಾಗಿದೆ.

    ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾದ ಹಿನ್ನೆಲೆಯಲ್ಲಿ ಕುರಿ ಹಾಗೂ ಮೇಕೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಲಿರುವುದರಿಂದ ಕಾಲಕ್ಕನುಗುಣವಾಗಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಲಿದ್ದು ಕುರಿ, ಮೇಕೆ ಸಾಕಣೆಗೆ ಹೆಚ್ಚು ಒಲವು ತೋರಲಾಗಿದೆ. ಬಹುತೇಕ ಹಳ್ಳಿಗಳಲ್ಲಿ ಾರಂ ನಿರ್ಮಾಣವಾಗುತ್ತಿದ್ದು ಈ ಹಂತದಲ್ಲಿ ಸರ್ಕಾರದ ನೆರವು ಕೂಡ ಅಗತ್ಯವಾಗಿದೆ. ಕೃಷಿ ಹಾಗೂ ತೋಟಗಾರಿಕೆಗೆ ಹೆಚ್ಚು ಹಣಕಾಸು ನೆರವು ನೀಡುವ ಸರ್ಕಾರಗಳು ಕುರಿ, ಮೇಕೆ ಸಾಕಣೆಗೆ ನಿರೀಕ್ಷಿತ ನೆರವು ನೀಡದಿರುವುದು ಉದ್ಯಮ ಬೆಳವಣಿಗೆಯಲ್ಲಿ ಹಿನ್ನೆಡೆಯಾಗಿದೆ.

    ಇತರ ಜಿಲ್ಲೆಗಳಲ್ಲೂ ಇದೇ ಸಮಸ್ಯೆ : ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ 2020 ನ.10 ರಂದು ಔಷಧ ಪೂರೈಕೆಯಾಗಿತ್ತು. ಅಲ್ಲಿಂದ ಈವರೆಗೆ ಔಷಧ ಪೂರೈಕೆಯಾಗಿಲ್ಲ. ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಔಷಧ ಪೂರೈಕೆಯಾಗಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ 3.2 ಲಕ್ಷ ಕುರಿ-ಮೇಕೆಗಳಿದ್ದು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಬರಬೇಕಾದ ಜಂತು ನಾಶಕ ಔಷಧ ಪೂರೈಕೆಯಾಗಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುರಿ-ಮೇಕೆಗಳಿಗೆ ಜಂತು ಹುಳು ಔಷಧ ಮಾತ್ರ ಸಮರ್ಪಕವಾಗಿ ಸಿಗುತ್ತಿದೆ. ಇನ್ನಿತರ ಔಷಧಗಳ ಪೂರೈಕೆ ಸಕಾಲಕ್ಕೆ ಆಗುತ್ತಿಲ್ಲ.

    ಜಿಲ್ಲೆಯಲ್ಲಿ ಕುರಿ, ಮೇಕೆ ಸಾಕಾಣಿಕೆಯಲ್ಲಿ ದೊಡ್ಡ ಕ್ರಾಂತಿಯೇ ನಡೆಯುತ್ತಿದೆ. ಕಳೆದೆರಡು ವರ್ಷದಲ್ಲಿ 200ಕ್ಕೂ ಹೆಚ್ಚು ಯುವಕರು ನಮ್ಮಲ್ಲಿ ತರಬೇತಿ ಪಡೆದು ಕುರಿ ಸಾಕಣೆಗೆ ಮುಂದಾಗಿದ್ದಾರೆ. 18 ಲಕ್ಷಕ್ಕೂ ಹೆಚ್ಚು ಕುರಿ, ಮೇಕೆಗಳಿದ್ದು ಸಂಖ್ಯೆಗೆ ಅನುಗುಣವಾಗಿ ಜಂತುನಾಶಕ ವಿತರಿಸಲಾಗುತ್ತಿದೆ. ಇಲಾಖೆ ಸೌಲಭ್ಯವನ್ನು ಸಂಘಗಳ ಮೂಲಕ ವಿತರಿಸಲಾಗುತ್ತಿದೆ.
    ಡಾ.ಕೆ.ನಾಗಣ್ಣ ಸಹಾಯಕ ನಿರ್ದೇಶಕ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts