More

    ಸೇವಾಲಾಲ್ ಇಡೀ ಬಂಜಾರ ಸಮುದಾಯದ ಸದ್ಗುರು; ಡಾ. ಕೆ.ನಾಗೇಂದ್ರ ನಾಯ್ಕ

    ಶಿವಮೊಗ್ಗ: ಸಂತ ಶ್ರೀ ಸೇವಾಲಾಲ್ ಅವರು ಇಡೀ ಬಂಜಾರ ಸಮುದಾಯಕ್ಕೆ ಸದ್ಗುರು (ಸತ್ಯದ ಗುರು) ಆಗಿದ್ದಾರೆ ಎಂದು ಶಿವಮೊಗ್ಗ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಕೆ.ನಾಗೇಂದ್ರ ನಾಯ್ಕ ಹೇಳಿದರು.
    ಕುವೆಂಪು ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಬಂಜಾರ ಸಂಘದಿಂದ ಸಂತ ಶ್ರೀ ಸೇವಾಲಾಲ್ ಅವರ 284ನೇ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿ, ಸೇವಾಲಾಲ್ ಅವರು ನೆಲೆಸಿದ ಪುಣ್ಯಸ್ಥಳಗಳನ್ನು ಅರಿಯಬೇಕಿದೆ. ಅವರ ಇತಿಹಾಸ ದರ್ಶನ ಬಂಜಾರರು ಮಾತ್ರವಲ್ಲದೆ ಎಲ್ಲ ಸಮುದಾಯಕ್ಕೂ ಆಗಬೇಕಿದೆ ಎಂದರು.
    ಸೇವಾಲಾಲ್ ಅವರನ್ನು ಬೇರೆ ಜನಾಂಗದವರು ಮಾತ್ರವಲ್ಲ, ಬಂಜಾರರೂ ತಪ್ಪಾಗಿ ಭಾವಿಸುತ್ತಿದ್ದಾರೆ. ತುಂಬ ಸಣ್ಣಮಟ್ಟದಲ್ಲಿ ಅವರನ್ನು ಚಿತ್ರಿಸಲಾಗುತ್ತಿದೆ. ಬಂಜಾರ ಸಾಹಿತ್ಯ ಎಲ್ಲಿಯೂ ಮುನ್ನೆಲೆಗೆ ಬರುತ್ತಿಲ್ಲ. ಇತಿಹಾಸದ ಪುಟಗಳಲ್ಲಿ ಎಲ್ಲಿಯೂ ದಾಖಲಾಗಿಲ್ಲ. ಸಂಪೂರ್ಣ ಇತಿಹಾಸವನ್ನೇ ಮರೆಮಾಚಲಾಗಿದೆ. ಆದರೆ ಸೇವಾಲಾಲ್ ಅವರು ಸಣ್ಣ ವ್ಯಕ್ತಿಯಲ್ಲ, ಮೇರು ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂಬುದನ್ನು ಜಗತ್ತಿಗೆ ಸಾರಿ ಹೇಳುವ ಕೆಲಸ ಆಗಬೇಕಿದೆ ಎಂದು ಹೇಳಿದರು.
    ಬಂಜಾರರ ಇತಿಹಾಸ, ಸಂಸ್ಕೃತಿ, ಕಲೆಯನ್ನು ಬೇರೆ ಭಾಷೆಯಲ್ಲಿ ಹೇಳುವುದು, ಅನುವಾದ ಮಾಡುವ ಕೆಲಸ ಇದುವರೆಗೆ ಆಗಿಲ್ಲ. ಬಂಜಾರರ ಇತಿಹಾಸ, ಸಂಸ್ಕೃತಿ, ಕಲೆಗೆ ಹೆಚ್ಚು ಪ್ರಾತಿನಿಧ್ಯ ಸಿಕ್ಕಿಲ್ಲ. ಇದು ನಮ್ಮ ಸಮಾಜದ ದೊಡ್ಡ ದೌರ್ಬಲ್ಯವಾಗಿದೆ. ಸೇವಾಲಾಲ್ ಅವರ ಆದರ್ಶಗಳನ್ನು ಮರೆತಿದ್ದು ಅವರ ಆದರ್ಶಗಳನ್ನು ಪಾಲಿಸಿದ್ದೇ ಆದಲ್ಲಿ ಎಲ್ಲ ಸಮಾಜಗಳು ಉದ್ಧಾರ ಆಗುತ್ತವೆ ಎಂದು ಹೇಳಿದರು.
    ತಹಸೀಲ್ದಾರ್ ಡಾ. ಎನ್.ಜೆ.ನಾಗರಾಜ್ ಜಯಂತಿ ಉದ್ಘಾಟಿಸಿದರು. ಜಿಪಂ ಯೋಜನಾ ನಿರ್ದೇಶಕಿ ನಂದಿನಿ, ಜಿಲ್ಲಾ ಬಂಜಾರ ಸಂಘದ ಉಪಾಧ್ಯಕ್ಷ ಆಯನೂರು ಶಿವಾನಾಯ್ಕ, ಪ್ರಧಾನ ಕಾರ್ಯದರ್ಶಿ ಬಿ.ಆರ್.ಜಗದೀಶ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಬಂಜಾರ ಸಂಸ್ಕೃತಿ ಅನಾವರಣಗೊಳಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts