More

    ರಸ್ತೆ ಮೇಲೆ ಹರಿಯುತ್ತಿದೆ ಕೊಳಚೆ ನೀರು

    ಮುದ್ದೇಬಿಹಾಳ: ಪಟ್ಟಣದ ಕೊಳಚೆ ಪ್ರದೇಶವಾಗಿರುವ, ಬಹುತೇಕ ಪರಿಶಿಷ್ಟ ಜಾತಿ ಹಾಗೂ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ನೇತಾಜಿ ನಗರ ಬಡಾವಣೆಯ ಸಿದ್ದು ಚಲವಾದಿ ಅವರ ಮನೆಯ ಮುಂಭಾಗದ ಮುಖ್ಯ ರಸ್ತೆಯಲ್ಲಿ ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ.

    ಒಳಚರಂಡಿಯ ಮೇಲ್ಮುಚ್ಚುಳ ದಾಟಿಕೊಂಡು ಕೊಳಚೆ ನೀರು ರಸ್ತೆಯ ಮೇಲೆ ಹರಿದಾಡುತ್ತಿರುವುದರಿಂದ ಬಡಾವಣೆಯ ನಿವಾಸಿಗಳು ಪರದಾಡುವಂತಾಗಿದೆ. ಪಟ್ಟಣದ ಮೇಲ್ಭಾಗದಲ್ಲಿ ಬರುವ ಎಲ್ಲ ಬಡಾವಣೆಗಳ ಕೊಳಚೆ ನೀರು ಒಳಚರಂಡಿ ಮಾರ್ಗವಾಗಿ ಸಾಗಿಬಂದು ಈ ಬಡಾವಣೆಯ ಮೂಲಕ ಮುಂದಕ್ಕೆ ಹರಿದು ಹೋಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಪ್ರದೇಶವು ಇಳಿಜಾರಿನಿಂದ ಕೂಡಿದ್ದು ಮೇಲ್ಭಾಗದ ಕೊಳಚೆಯೆಲ್ಲ ಒಳಚರಂಡಿ ಮೂಲಕ ರಭಸದಿಂದ ಹರಿದು ಬರುತ್ತದೆ. ಕಳೆದ ಒಂದು ವಾರದಿಂದ ಕೊಳಚೆ ನೀರು, ಕಸಕಡ್ಡಿ, ಕೊಳಚೆ ಸಮಸ್ಯೆ ನಿವಾಸಿಗಳನ್ನು ಕಾಡತೊಡಗಿದೆ. ಸುಗಮವಾಗಿ ಸಂಚರಿಸಲೂ ಹರಸಾಹಸ ಪಡುವಂತಾಗಿದೆ.

    ಈ ಸಮಸ್ಯೆಯನ್ನು ಹಲವು ಬಾರಿ ಪುರಸಭೆಯ ಗಮನಕ್ಕೆ ತಂದರೂ ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಮೊದಲೇ ಕೊಳಚೆ ಪ್ರದೇಶವಾಗಿರುವ ಈ ಬಡಾವಣೆಯಲ್ಲಿ ಮೇಲ್ಭಾಗದಿಂದ ಬರುವ ಕೊಳಚೆ, ಕಸಕಡ್ಡಿ ಎಲ್ಲವೂ ಮುಂದೆ ಹೋಗದೆ ನಿಂತಲ್ಲೇ ನಿಂತು ಪ್ರದೇಶ ಮಲಿನಗೊಳ್ಳತೊಡಗಿದೆ. ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ಸಮಸ್ಯೆ ಸರಿಪಡಿಸುವಂತೆ ಕೇಳಿಕೊಂಡರೆ ಪುರಸಭೆಯವರು ಒಳಚರಂಡಿ ಯೋಜನೆ ಇನ್ನೂ ಪುರಸಭೆಗೆ ಹಸ್ತಾಂತರಗೊಂಡಿಲ್ಲ. ಇದರ ನಿರ್ವಹಣೆಯ ಜವಾಬ್ದಾರಿ ನಮಗಿಲ್ಲ. ನಮ್ಮಲ್ಲಿ ಪೌರ ಕಾರ್ಮಿಕರ ಕೊರತೆ ಇದೆ ಎಂದು ಜಾರಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

    ಒಳಚರಂಡಿ ಯೋಜನೆಯ ಅಧಿಕಾರಿ ರಾಠೋಡ ಅವರ ಗಮನಕ್ಕೆ ತಂದರೆ ಅವರು ಸಮಸ್ಯೆ ಬಗೆಹರಿಸುವುದು, ಸ್ವಚ್ಛಗೊಳಿಸುವುದು ಪುರಸಭೆಯವರ ಜವಾಬ್ದಾರಿ ಎಂದು ನುಣುಚಿಕೊಳ್ಳುತ್ತಿದ್ದಾರೆ. ಹೀಗೆ ಜವಾಬ್ದಾರಿ ನಿಭಾಯಿಸಬೇಕಾಗಿರುವ ಒಬ್ಬರು ಇನ್ನೊಬ್ಬರ ಮೇಲೆ ಹಾಕಿ ಪಲಾಯನವಾದ ಅನುಸರಿಸುತ್ತಿರುವುದು ಬಡಾವಣೆಯ ನಾಗರಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ. ಈಗಲಾದರೂ ಒಳಚರಂಡಿಯವರು ಅಥವಾ ಪುರಸಭೆಯವರು ಎಚ್ಚೆತ್ತುಕೊಂಡು ಕೂಡಲೇ ಒಳಚರಂಡಿ ವ್ಯವಸ್ಥೆ ಸರಿಪಡಿಸಿ ಮುಚ್ಚುಳ ಮೇಲ್ಭಾಗದಿಂದ ರಸ್ತೆಗಳ ಮೇಲೆ ಕೊಳಚೆ, ಕಸಕಡ್ಡಿ, ನೀರು ಹರಿಯದಂತೆ ಮಾಡಬೇಕು. ಇಲ್ಲವಾದಲ್ಲಿ ಪುರಸಭೆ ಎದುರು ಬಡಾವಣೆಯ ನಿವಾಸಿಗಳೆಲ್ಲ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಡಾವಣೆಯ ಪ್ರಮುಖರಾದ ಸಿದ್ದು ಚಲವಾದಿ, ಯಲ್ಲಮ್ಮ ಚಲವಾದಿ, ಪರವ್ವ ಚಲವಾದಿ, ಅಲ್ಲಾಭಕ್ಷ ಅವಟಿ, ಲಾಲಬಿ ಅವಟಿ, ಲಾಲಸಾಬ, ಮುತ್ತು ಮಾದರ, ಲಕ್ಷ್ಮಣ ನಾಗರಾಳ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts