More

    ಸೇವಾ ಕಾರ್ಯದಲ್ಲಿ ರಾಷ್ಟ್ರೀಯತೆ ತುಂಬಿರಲಿ

    ಹುಬ್ಬಳ್ಳಿ: ಸೇವಾ ಕಾರ್ಯದಲ್ಲಿ ರಾಷ್ಟ್ರೀಯತೆ ತುಂಬಿರಬೇಕು. ರಾಷ್ಟ್ರೀಯತೆ ಇಲ್ಲವಾದಲ್ಲಿ ಸೇವಾ ಕಾರ್ಯವು ಉಪ್ಪು ಇಲ್ಲದ ಸಾಂಬಾರ ಇದ್ದಂತೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.

    ನಗರದಲ್ಲಿ ಭಾನುವಾರ ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಸೇವಾಕುಂಭ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಸೇವೆಯೇ ಪರಮೋಧರ್ಮ. ಕರ್ಮಯೋಗವನ್ನು ಪ್ರತಿಯೊಬ್ಬರೂ ನೆನಪಿಸಿ ಕೊಳ್ಳಬೇಕು. ಸೇವೆ ಮಾಡಿದ್ದಕ್ಕೆ ಫಲ ಕೇಳುವ ಅಧಿಕಾರ ಯಾರಿಗೂ ಇಲ್ಲ ಎಂದರು.

    ನಾನು ಎಂಎಲ್​ಸಿ ಆಗಬೇಕೆಂದು ಆಕಾಂಕ್ಷೆ ಹೊಂದಿರಲಿಲ್ಲ. 25 ಕೋಟಿ ರೂ. ಕೊಡಲು ರೆಡಿ ಇದ್ದವರು ಎಂಎಲ್​ಸಿ ಆಗಿಲ್ಲ, ನೀವು ಹೇಗೆ ಆದ್ರಿ ಎಂದು ಬಹಳಷ್ಟು ಜನ ನನ್ನನ್ನು ಕೇಳಿದರು. ನಾನು ಆಗಿಲ್ಲ, ಹಿರಿಯರು ಮಾಡಿದ್ದಾರೆ ಎಂದು ಹೇಳಿದ್ದೆ. ಈ ಅವಕಾಶವನ್ನು ಬಳಸಿಕೊಳ್ಳಲು ನಿರ್ಧರಿಸಿದ್ದೇನೆ ಎಂದರು.

    ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಮಾತನಾಡಿ, ಹಲವು ಆಯಾಮಗಳಲ್ಲಿ ಸೇವೆ ಮಾಡಬಹುದಾಗಿದೆ. ಅದಕ್ಕೆ ಸಮಾಜಕ್ಕಾಗಿ ಹಣ, ಸಮಯ ವಿನಿಯೋಗಿಸುವ ಮನಸ್ಸು ಬೇಕು ಎಂದರು.

    ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ರಘುವೀರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸೇವಾಕುಂಭದಲ್ಲಿ 82 ಸೇವಾ ಸಂಸ್ಥೆಗಳ 157 ಪ್ರತಿನಿಧಿಗಳು ಪಾಲ್ಗೊಂಡಿದ್ದರು.

    ಕೋವಿಡ್ ನೆಪದಲ್ಲಿ ಸುಧಾರಣೆ: ಬೆಳಗ್ಗೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡ ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಯುವಾ ಬ್ರಿಗೇಡ್ ಸಮಾಜ ಪರಿವರ್ತನೆಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. ಗರ್ಭಾವಸ್ಥೆಯಲ್ಲಿ ತಾಯಿ-ಮಗುವಿನ ಮರಣ, ಮದ್ಯಪಾನ ಮತ್ತು ದುಶ್ಚಟಗಳಂಥ ವಿಷಯದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

    ಕೋವಿಡ್ ನೆಪದಲ್ಲಿ ಕಿಮ್ಸ್​ನಲ್ಲಿ ಸಾಕಷ್ಟು ಸುಧಾರಣೆ ಆಗಿವೆ. 250 ಐಸಿಯು ಬೆಡ್, 200ಕ್ಕೂ ಅಧಿಕ ವೆಂಟಿಲೇಟರ್ ಸೌಲಭ್ಯ ಹೊಂದಿದ್ದೇವೆ. ಸರ್ಕಾರ ಹಾಗೂ ಸಿಎಸ್​ಆರ್ ಅನುದಾನದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪಡಿಸಿದ್ದೇವೆ. ಸ್ವಚ್ಛತೆಗೂ ಆದ್ಯತೆ ನೀಡಿದ್ದೇವೆ ಎಂದು ಹೇಳಿದರು.

    ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಕೆಲವರಿಗೆ ಹಣ ಮತ್ತು ಅಧಿಕಾರದ ಹುಚ್ಚು ಇರುತ್ತದೆ. ಬದುಕನ್ನು ಸುಂದರಗೊಳಿಸಲು ಇರುವುದೇ ಸೇವೆ. ಸೇವೆ ಮಾತ್ರ ಸಾಮಾನ್ಯ ಮನುಷ್ಯನನ್ನು ದೈವತ್ವ ಕಡೆಗೆ ಒಯ್ಯುತ್ತದೆ ಎಂದರು. ಯುವಾ ಬ್ರಿಗೇಡ್​ನ ಸಮನ್ವಯ ರಾಜ್ಯ ಸಂಚಾಲಕ ಚಂದ್ರಶೇಖರ ಕೆ.ಎಸ್. ಸ್ವಾಗತಿಸಿದರು.

    ರೇಷನ್ ಅಂಗಡಿಯಲ್ಲಿ ನಿಂತಿದ್ದೆ: ನನ್ನನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ದೆಹಲಿಯಿಂದ ಒಬ್ಬರು ಕರೆ ಮಾಡಿದ ಸಂದರ್ಭದಲ್ಲಿ ನಾನು ರೇಷನ್ ಅಂಗಡಿ ಮುಂದೆ ಕ್ಯೂನಲ್ಲಿ ನಿಂತಿದ್ದೆ ಎಂದು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ದಕ್ಷಿಣ ಕನ್ನಡದ ಹರೇಕಳ ಹಾಜಬ್ಬ ಹೇಳಿದರು. ಸೇವಾಕುಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೆಹಲಿಯಿಂದ ಕರೆ ಮಾಡಿದವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ನನಗೆ ಸರಿಯಾಗಿ ಕನ್ನಡವೇ ಬರುವುದಿಲ್ಲ. ಹಿಂದಿ ಮಾತನಾಡಿದ್ದು ಅರ್ಥವಾಗಲಿಲ್ಲ. ಹಾಗಾಗಿ ಕರೆ ಮಾಡಿದ್ದು ಯಾಕೆಂದು ಅರ್ಥವಾಗಲಿಲ್ಲ. ಬಳಿಕ ಬೇರೆಯವರಿಂದ ತಿಳಿಯಿತು ನನಗೆ ಪದ್ಮಶ್ರೀ ಪ್ರಶಸ್ತಿ ನೀಡುತ್ತಿದ್ದಾರೆಂದು ಹೇಳಿದರು. ಪದ್ಮಶ್ರಿ, ರಾಜ್ಯೋತ್ಸವ, ಇನ್ನಿತರ ಪ್ರಶಸ್ತಿ-ಸನ್ಮಾನಗಳಿಗೆ ಮಾಧ್ಯಮಗಳೇ ಕಾರಣ. ಶಾಲೆಯನ್ನೇ ಕಲಿಯದ ನನ್ನಂಥ ಸಣ್ಣ ವ್ಯಕ್ತಿಯನ್ನು ಸಮಾಜಕ್ಕೆ ಪರಿಚಯಿಸಿದ್ದು ಮಾಧ್ಯಮ. ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts