More

    ಗೃಹಲಕ್ಷ್ಮೀ ನೋಂದಣಿಗೆ ಕಂಪ್ಯೂಟರ್ ಕೇಂದ್ರಗಳಲ್ಲಿ ದಂಧೆ

    ಯೋಗೇಶ್ ಎಂ.ಮೇಟಿಕುರ್ಕೆ ಹೊಸದುರ್ಗ
    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಉಚಿತ ವ್ಯವಸ್ಥೆ ಕಲ್ಪಿಸಿದ್ದರೂ ತಾಲೂಕಿನ ಕೆಲ ಕಂಪ್ಯೂಟರ್ ಕೇಂದ್ರಗಳಲ್ಲಿ ಜನರಿಂದ ಹಣ ವಸೂಲು ಮಾಡಲಾಗುತ್ತಿರುವ ಆರೋಪ ಕೇಳಿಬರುತ್ತಿವೆ.

    ಗ್ರಾಮ ಒನ್ ಸೇರಿ ನಾನಾ ಕೇಂದ್ರಗಳ ಲಾಗ್ ಇನ್ ಐಡಿ ನಿಗದಿಪಡಿಸಿದ ಕೇಂದ್ರಗಳಲ್ಲದೆ, ಖಾಸಗಿ ಇಂಟರ್‌ನೆಟ್ ನವರಿಗೂ ಸಹ ಅನಧಿಕೃತವಾಗಿ ನೀಡಲಾಗಿದೆ.

    ಇದರಿಂದ ಅರ್ಹ ಫಲಾನುಭವಿಗಳಿಂದ ಹಣ ಪಡೆದು ನೋಂದಣಿ ಮಾಡುತ್ತಿರುವ ಪ್ರಕರಣಗಳು ತಾಲೂಕಿನಲ್ಲಿ ಎಗ್ಗಿಲ್ಲದೆ ಸಾಗಿವೆ.

    ಒಂದೇ ಲಾಗ್ ಇನ್ ಅನ್ನು ಮೂರ‌್ನಾಲ್ಕು ಕಡೆ ಬಳಸಿ ಯೋಜನೆಯ ಹೆಸರಿನಲ್ಲಿ ಅರ್ಹರಿಂದ ವಸೂಲಿಗೆ ಇಳಿದಿರುವ ದೂರುಗಳು ಅಲ್ಲಲ್ಲಿ ಕೇಳಿಬರುತ್ತಿವೆ.

    ಗೃಹಲಕ್ಷ್ಮೀ ಯೋಜನೆಯ ವೆಬ್‌ಸೈಟ್ ಲಾಗ್‌ಇನ್ ಐಡಿ ಅನಧಿಕೃತವಾಗಿ ಬೇರೆಯವರಿಗೆ ಕೊಟ್ಟಿರುವುದನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕಿದೆ.

    ಗೃಹಲಕ್ಷ್ಮೀ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ನೋಂದಣಿಗೆ ಸೋಮವಾರ ಬೆಳಗ್ಗೆ ಹೊಸದುರ್ಗದ ಮುಖ್ಯರಸ್ತೆಯ ಕಂಪ್ಯೂಟರ್ ಕೇಂದ್ರದ ಬಳಿ ಮಹಿಳೆಯರ ದಂಡು ನೆರೆದಿತ್ತು.

    ಆದರೆ ಆ ಕೇಂದ್ರದ ಸಿಬ್ಬಂದಿ ಇಲ್ಲಿ ಯಾವುದೇ ಅರ್ಜಿ ಹಾಕುತ್ತಿಲ್ಲ ಎಂದು ನಿರಾಕರಿಸಿದರು.

    ಗ್ರಾಮ- ಒನ್ ಕೇಂದ್ರದಲ್ಲಿ ಉಚಿತವಾಗಿ ಅರ್ಜಿ ಹಾಕುವ ಬದಲು ಫಲಾನುಭವಿಗಳು 70 ರೂ. ನೀಡಿ ನೋಂದಣಿ ಮಾಡುತ್ತಿದ್ದಾರೆ. ಇದರ ಲಾಭವನ್ನು ಕಂಪ್ಯೂಟರ್ ಸಿಬ್ಬಂದಿ ಪಡೆಯುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

    ರಾಜ್ಯಸರ್ಕಾರ ಪ್ರತಿ ಅರ್ಜಿಗೆ 12 ರೂ. ಸೇವಾ ಶುಲ್ಕ ಭರಿಸುವುದಾಗಿ ತಿಳಿಸಿದ್ದರೂ ಫಲಾನುಭವಿಗಳಿಂದ ಹಣ ಪಡೆಯಲಾಗುತ್ತಿದೆ ಎನ್ನುವ ಆರೋಪಗಳು ವ್ಯಾಪಕವಾಗಿವೆ.

    ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಕಚೇರಿ, ಬಾಪೂಜಿ ಸೇವಾಕೇಂದ್ರ, ಗ್ರಾಮ-ಒನ್ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೆಲ ಖಾಸಗಿ ಕಂಪ್ಯೂಟರ್ ಕೇಂದ್ರಗಳು ಜನರಿಂದ ಹಣ ಪಡೆದು ಅರ್ಜಿ ಹಾಕುತ್ತಿದ್ದಾರೆ.

    ಯೋಜನೆ ಅನುಷ್ಠಾನಕ್ಕಾಗಿ ಸರ್ಕಾರ ನಿಯೋಜಿಸಿರುವ ನೋಡಲ್ ಅಧಿಕಾರಿಗಳು ಕೂಡ ಈ ಬಗ್ಗೆ ಮೌನಕ್ಕೆ ಜಾರಿದ್ದರಿಂದ ನೋಂದಣಿ ಹಳ್ಳ ಹಿಡಿಯುತ್ತಿದೆ. ಪುರಸಭೆ ಹಾಗೂ ಗ್ರಾಪಂ ಅಧಿಕಾರಿಗಳು ಕೂಡ ಬದ್ಧತೆ ತೋರದ ಕಾರಣ ಸಮಸ್ಯೆ ಉಲ್ಬಣಿಸಿದೆ.

    ಸರ್ವರ್ ಸಮಸ್ಯೆ: ಅಧಿಕೃತ ಕೇಂದ್ರಗಳಲ್ಲಿ ಜನಗಳ ಒತ್ತಡ, ಸರ್ವರ್ ಸಮಸ್ಯೆಯ ಲಾಭ ಮಾಡಿಕೊಳ್ಳಲು ಕೆಲವು ಅನಧಿಕೃತ ಕೇಂದ್ರಗಳು ಪ್ರಯತ್ನಿಸುತ್ತಿವೆ.

    ಅರ್ಜಿದಾರರು ನೋಂದಣಿಗೆ ಮುಗಿಬಿದ್ದ ಪರಿಣಾಮ ಸರ್ವರ್ ಡೌನ್ ಆಗಿದೆ. ಇದರಿಂದ ರಾಜ್ಯದ ಹಲವು ಗ್ರಾಮೀಣ ಪ್ರದೇಶಗಳ ಕೇಂದ್ರಗಳಲ್ಲಿ ದಿನಕ್ಕೆ 10-15 ನೋಂದಣಿ ಮಾತ್ರ ಸಾಧ್ಯವಾಗುತ್ತಿದೆ.

    ಗೃಹಲಕ್ಷ್ಮೀ ಯೋಜನೆಯ ಅರ್ಜಿ ನೋಂದಣಿ ವೇಳೆ ಸರ್ವರ್ ಸಮಸ್ಯೆ ಆಗುತ್ತಿರುವ ಕುರಿತು ದೂರುಗಳಿವೆ. ಖಾಸಗಿ ಕಂಪ್ಯೂಟರ್ ಕೇಂದ್ರಗಳಲ್ಲಿ ಹಣ ಪಡೆದು ಅರ್ಜಿ ಹಾಕುತ್ತಿರುವ ಕುರಿತು ಪರಿಶೀಲಿಸಲಾಗುವುದು. ಹಣ ಪಡೆಯುವುದು ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು.
    ಅಭಿಲಾಷ, ಸಿಡಿಪಿಒ

    ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಶುಲ್ಕ ಇರುವುದಿಲ್ಲ. ಆದರೆ, ಕೆಲ ಕಿಡಿಗೇಡಿಗಳು ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳ ಸಿಬ್ಬಂದಿ ಬಳಿ ಮಾತ್ರ ನೋಂದಣಿ ಮಾಡಿಸಿಕೊಳ್ಳಬೇಕಿದೆ. ಶುಲ್ಕ ಕೇಳಿದರೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕು.
    ಲಕ್ಷ್ಮೀಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ

    ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಬಳಿ ಯೂಸರ್ ಐಡಿ ಪಡೆದು ಫಲಾನುಭವಿಗಳಿಂದ ಹಣ ಪಡೆದು ಅರ್ಜಿ ನೋಂದಣಿ ಮಾಡುತ್ತಿರುವುದು ನಿಜ. ಸ್ವೀಕೃತಿ ಪತ್ರವನ್ನು ಲ್ಯಾಮಿನೆಷನ್ ಮಾಡಿ ಅದಕ್ಕೂ ಹಣ ಪಡೆಯಲಾಗುತ್ತಿದೆ.
    ಹೆಸರು ಹೇಳಲಿಚ್ಚಿಸದ ಕಂಪ್ಯೂಟರ್ ಸೆಂಟರ್ ಮಾಲೀಕ

    ಗ್ರಾಮ ಒನ್ ಸೆಂಟರ್‌ನಲ್ಲಿ ಹೆಚ್ಚು ಜನರಿರುತ್ತಾರೆ. ಹೀಗಾಗಿ ಕಂಪ್ಯೂಟರ್ ಸೆಂಟರ್‌ನಲ್ಲಿ ನೋಂದಣಿ ಮಾಡುವ ವಿಷಯ ತಿಳಿದು ಇಲ್ಲಿಗೆ ಬಂದು 70 ರೂ. ನೀಡಿ ನೋಂದಣಿ ಮಾಡಿಸಿದ್ದೇನೆ. ನಮ್ಮ ಸಮಯಕ್ಕೆ ಕೆಲಸ ಅಗಿದೆ. ಮನೆ ಕೆಲಸ ಬಿಟ್ಟು ದಿನಗಟ್ಟಲೆ ಕಾಯಲು ಅಗುವುದಿಲ್ಲ.
    ಟಿ.ಮಂಜುಳಾ, ಫಲಾನುಭವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts