More

    ಒಳ್ಳೆಯ ಮನಸ್ಸಿನಿಂದ ಸಮಾಜ ಸೇವೆ ಮಾಡಿ

    ಬಾಳೆಹೊನ್ನೂರು: ಸಂಘ, ಸಂಸ್ಥೆಯ ಪದಾಧಿಕಾರಿಗಳು ಒಳ್ಳೆಯ ಮನಸ್ಸಿನಿಂದ ನಿಸ್ವಾರ್ಥವಾಗಿ ಸಮಾಜ ಸೇವಾ ಕಾರ್ಯಕ್ರಮಗಳನ್ನು ಮಾಡಬೇಕು. ಆಗ ಅದಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಜಿಲ್ಲಾ ಚೇರ್ಮನ್ ಪೂರ್ಣಿಮಾ ರವಿ ಹೇಳಿದರು.
    ಇನ್ನರ್‌ವ್ಹೀಲ್ ಕ್ಲಬ್ ಗುರುವಾರ ಆಯೋಜಿಸಿದ್ದ ಜಿಲ್ಲಾ ಚೇರ್ಮನ್‌ರ ಅಧಿಕೃತ ಭೇಟಿ ಸಮಾರಂಭದಲ್ಲಿ ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸಿ ಮಾತನಾಡಿದ ಅವರು, ಮಹಿಳೆಯರು ಸಮಾಜ ಸೇವೆ ನಡೆಸಲು ಇನ್ನರ್‌ವ್ಹೀಲ್ ಕ್ಲಬ್ ಪೂರಕ ವೇದಿಕೆ ಒದಗಿಸುತ್ತಿದೆ. ವಿಶ್ವದಾದ್ಯಂತ ಕ್ಲಬ್ ತನ್ನದೇ ಆದ ಕಾರ್ಯ ಚಟುವಟಿಕೆ ನಡೆಸುತ್ತ ಸಮಾಜಮುಖಿಯಾಗಿದೆ. ಒಳ್ಳೆಯ ಮನಸ್ಸಿನಿಂದ ಸೇವಾ ಕಾರ್ಯಗಳನ್ನು ಮಾಡುವಾಗ ದೇವರಿಗೂ ಭಯಪಡದೇ ಕಾರ್ಯ ನಿರ್ವಹಿಸಬೇಕು ಎಂದರು.
    ಇನ್ನರ್‌ವ್ಹೀಲ್ ಕ್ಲಬ್ ಪ್ರಸ್ತುತ ವರ್ಷ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ವಿಶ್ವದಲ್ಲಿ 1.20 ಲಕ್ಷ ಮಹಿಳೆಯರು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಭಾರತದಲ್ಲಿಯೇ 55 ಸಾವಿರ ಮಹಿಳೆಯರು ಈ ಸಂಸ್ಥೆ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ 100 ಕ್ಲಬ್‌ಗಳು ಪ್ರಸ್ತುತ ವರ್ಷ 26 ಸಾವಿರಕ್ಕೂ ಅಧಿಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದ್ದು, ಬಾಳೆಹೊನ್ನೂರು ಕ್ಲಬ್ 25 ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇನ್ನರ್‌ವ್ಹೀಲ್ ಜಿಲ್ಲೆ 318ರ ವತಿಯಿಂದ ವಿದ್ಯಾರ್ಥಿಗಳಿಗಾಗಿ 100 ಬೈಸಿಕಲ್, ಟ್ಯಾಬ್‌ಗಳನ್ನು ನೀಡಿದೆ ಎಂದರು.
    ರೋಟರಿ ಅಧ್ಯಕ್ಷ ಎ.ಆರ್.ಸುರೇಂದ್ರ ಶತಮುಖಿ ಎಂಬ ಕ್ಲಬ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಸ್ಥಳೀಯ ಇನ್ನರ್‌ವ್ಹೀಲ್ ಸಂಸ್ಥೆ ರೋಟರಿ ಸಂಸ್ಥೆಯೊಂದಿಗೆ ಸೇರಿ ಮೌಲ್ಯಾಧಾರಿತ ಶಿಕ್ಷಣ, ರೈತಮಿತ್ರ ಕಾರ್ಯಕ್ರಮಕ್ಕೆ ಹೆಚ್ಚಿನ ಸಹಕಾರ ನೀಡಿದೆ. ಕ್ಲಬ್‌ನಿಂದ ಶಾಶ್ವತ ಯೋಜನೆಯಾಗಿ ಪ್ರಯಾಣಿಕರ ತಂಗುದಾಣ ಮಾಡಿರುವುದು ಸಂಸ್ಥೆಯ ಕಾರ್ಯಕ್ಕೆ ಇನ್ನಷ್ಟು ಹೆಸರು ತಂದಿದೆ ಎಂದರು.
    ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ಇನ್ನರ್‌ವ್ಹೀಲ್ ಜಿಲ್ಲಾ ಉಪಾಧ್ಯಕ್ಷೆ ವೈಶಾಲಿ ಕುಡ್ವ, ಗ್ರಾಪಂ ಮಾಜಿ ಅಧ್ಯಕ್ಷೆ ಹೂವಮ್ಮ, ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಣಾಧಿಕಾರಿ ಎ.ಪಿ.ಶೈಲಾ, ಹ್ಯಾಮರ್ ಥ್ರೋನಲ್ಲಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ಸಾಲೀಮ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇನ್ನರ್‌ವ್ಹೀಲ್ ಕಾರ್ಯದರ್ಶಿ ಕಾಂಚನಾ ಸುಧಾಕರ್, ಬುಲೆಟಿನ್ ಎಡಿಟರ್ ನಿಶ್ಚಿತ, ಸಮತಾ ಮಿಸ್ಕಿತ್, ಜಾಹ್ನವಿ, ಸಹನಾ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts