More

    ತುಮಕೂರಿನಲ್ಲಿ ಸರಣಿ ಕಳವು

    ತುಮಕೂರು: ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಎಸ್‌ಐಟಿ ಮುಖ್ಯರಸ್ತೆ ಹಾಗೂ ಸೋಮೇಶ್ವರಪುರಂ ಮುಖ್ಯರಸ್ತೆಯ 7 ಅಂಗಡಿಗಳಲ್ಲಿ ಕಳ್ಳರು ಸೋಮವಾರ ರಾತ್ರಿ ಕೈಚಳಕ ತೋರಿದ್ದು, ನಗರವಾಸಿಗಳನ್ನು ಬೆಚ್ಚಿಬೀಳಿಸಿದೆ.

    ಎಸ್‌ಐಟಿ ಮುಖ್ಯರಸ್ತೆಯ ಶ್ರೀರಂಗ ಮೆಡಿಕಲ್, ಹೊನ್ನಾದೇವಿ ಡಯಾಗ್ನೋಸ್ಟಿಕ್, ಎನ್‌ಎಸ್ ಮೆಡಿಕಲ್, ಆನಂದ್ ಅಂಡ್ ಸನ್ಸ್, ಮಂಜು ಮೆಡಿಕಲ್ ಸೇರಿ ವಿವಿಧ ಅಂಗಡಿಗಳ ಬೀಗಮುರಿದು ಕಳವು ಮಾಡಿದ್ದಾರೆ.

    ಎಸ್.ಎಸ್.ಪುರಂ ಮುಖ್ಯರಸ್ತೆಯಲ್ಲಿನ ಹೊನ್ನಾದೇವಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ 50 ಸಾವಿರ ರೂ. ನಗದು ಹಾಗೂ ಕಿರಣ್ ಮೊಬೈಲ್ ಸ್ಟೋರ್‌ನಲ್ಲಿ 20 ಸಾವಿರ ರೂಪಾಯಿ ಕಳವಾಗಿದ್ದು, ಉಳಿದ ಅಂಗಡಿಗಳಲ್ಲಿ ನಗದು ಸಿಗದೆ ಕಳ್ಳರು ನಿರಾಸೆಯಿಂದಲೇ ಪರಾರಿಯಾಗಿದ್ದಾರೆ.

    ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಬರೋಬ್ಬರಿ 45ಕೋಟಿ ರೂ. ವ್ಯಯಿಸಿ ನಗರದೆಲ್ಲೆಡೆ ಅತ್ಯಾಧುನಿಕ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದರೂ ನಿರಂತರವಾಗಿ ಕಳ್ಳತನ ನಡೆಯುತ್ತಿರುವುದು ಪೊಲೀಸ್ ವ್ಯವಸ್ಥೆಯ ಬಗ್ಗೆ ಅನುಮಾನ ಹುಟ್ಟಿಸುವಂತಾಗಿದೆ.

    ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಾರ್ಯದರ್ಶಿ ಡಿ.ಆರ್.ಮಲ್ಲೇಶಯ್ಯ ಪ್ರತಿಕ್ರಿಯಿಸಿ, ಸಂಕಷ್ಟದಲ್ಲಿರುವ ವ್ಯಾಪಾರಿಗಳ ವ್ಯವಹಾರಕ್ಕೆ ರಕ್ಷಣೆ ಅಗತ್ಯವಾಗಿದ್ದು, ನಗರದಲ್ಲಿ ಪೊಲೀಸ್ ವ್ಯವಸ್ಥೆಯ ಸುಧಾರಣೆಯಾಗಬೇಕು, ಬೀಟ್‌ಗಳನ್ನು ಹೆಚ್ಚಿಸಬೇಕು, ಕಳ್ಳರನ್ನು ಪತ್ತೆಹಚ್ಚಿ ವ್ಯಾಪಾರಿಗಳಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಆಗ್ರಹಿಸಿದ್ದಾರೆ.

    ಘಟನೆಯ ವಿಷಯ ತಿಳಿದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸ್ಥಳಕ್ಕಾಗಮಿಸಿ ವ್ಯಾಪಾರಿಗಳಿಗೆ ಧೈರ್ಯ ಹೇಳಿದರು, ಕಳ್ಳರ ಪತ್ತೆಗೆ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ಕೂಡ ನೀಡಿದರು.

    ಪತ್ತೆಯಾಗದ ಕೆಂಕೆರೆ ದೇವಾಲಯ ಕಳ್ಳರ ಸುಳಿವು?: ಚಿಕ್ಕನಾಯಕನಹಳ್ಳಿ ತಾಲೂಕು ಕೆಂಕೆರೆಯ ದೇವಾಲಯದಲ್ಲಿ ದೇವರ ಮೈಮೇಲಿನ 2ಕೋಟಿ ರೂ. ಮೌಲ್ಯದ ಆಭರಣ ಕದ್ದ ಕಳ್ಳರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಕಳ್ಳರ ಪತ್ತೆಯ ಸುಳಿವು ಅರಿಯಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಕಾನೂನು ಸಚಿವ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರೇ ಸ್ಥಳಕ್ಕೆ ಭೇಟಿ ನೀಡಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದರೂ ಕಳ್ಳರ ಸುಳಿವು ಪತ್ತೆಯಾಗದಿರುವುದು ಸ್ಥಳೀಯರಿಗೆ ಪೊಲೀಸರ ಮೇಲಿನ ನಂಬಿಕೆಯನ್ನು ಕಡಿಮೆಯಾಗಿಸುತ್ತಿದೆ. ಈ ಪ್ರಕರಣದ ನಂತರ ಕಂದಿಕೆರೆಯ ದೇವಾಲಯದಲ್ಲಿ ಕಳ್ಳತನವಾಗಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಕಳ್ಳತನ ಪ್ರಕರಣ ಮುಂದುವರಿದಿದೆ.

    ಸರಣಿ ಕಳ್ಳತನವಾಗಿರುವ ತುಮಕೂರಿನ ಎಸ್.ಎಸ್.ಮುಖ್ಯರಸ್ತೆಗೆ ಭೇಟಿ ನೀಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಂಗಡಿ ಮಾಲೀಕರಿಗೆ ಧೈರ್ಯ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts