More

    ನಮಗೆ ಬೇಕಾಗಿದ್ದು ಕೊಡ್ತೀರೋ ಇಲ್ವೊ ..?

     

    ವಿಜಯವಾಣಿ ಸುದ್ದಿಜಾಲ ಹಾಸನ
    ಕರೊನಾ ಸೋಂಕಿತರಾಗಿ ನಗರದ ಕೋವಿಡ್-19 ಆಸ್ಪತ್ರೆಯಲ್ಲಿರುವ ಮುಂಬೈವಾಲಾಗಳು ಐಸೋಲೇಷನ್ ವಾರ್ಡ್‌ನಲ್ಲಿ ನೀಡುತ್ತಿರುವ ಸೌಲಭ್ಯಗಳಿಂದ ತೃಪ್ತರಾಗದೆ ವೈದ್ಯಕೀಯ ಸಿಬ್ಬಂದಿಯನ್ನು ದಬಾಯಿಸಲು ಆರಂಭಿಸಿದ್ದಾರೆ.
    ಎಲ್ಲ 30 ಸೋಂಕಿತರು ಮುಂಬೈ ವಾಸಿಗಳಾಗಿದ್ದು, ಬಹುತೇಕರು ಆರ್ಥಿಕವಾಗಿ ಸುಸ್ಥಿತಿಯ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ನಿತ್ಯವೂ ಹಿಮ್ಸ್‌ನ ಐಸೋಲೇಷನ್ ವಾರ್ಡ್‌ನಲ್ಲಿ ಅವರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪ್ರೊಟೀನ್‌ಯುಕ್ತ ಸಸ್ಯಹಾರ ನೀಡಲಾಗುತ್ತಿದೆ. ಇದಕ್ಕೆ ಅತೃಪ್ತಿ ವ್ಯಕ್ತಪಡಿಸುತ್ತಿರುವ ಸೋಂಕಿತರು ತಮಗೆ ಇಂತಹದ್ದೇ ಆಹಾರ ಬೇಕು ಎಂದು ಹಟ ಹಿಡಿಯುತ್ತಿದ್ದಾರೆ. ಅಲ್ಲದೆ ನಮಗೆ ಬೇಕಾಗಿದ್ದು ಕೊಡ್ತೀರೋ ಇಲ್ವೊ ಎಂದು ದಬಾಯಿಸುವುದು ಮಾಮೂಲಾಗಿದೆ. ಅವರ ಆರೈಕೆ ಹೊಣೆ ಹೊತ್ತಿರುವ ಸಿಬ್ಬಂದಿ ಸಾವಧಾನದಿಂದ ವರ್ತಿಸುವಂತೆ ಅವರಿಗೆ ಮನವಿ ಮಾಡಿ ಸಾಕಾಗುತ್ತಿದ್ದಾರೆ.
    ಹಾಸಿಗೆ, ದಿಂಬು, ಶೌಚಗೃಹ ಸೌಲಭ್ಯಗಳ ಬಗ್ಗೆಯೂ ಐಸೋಲೇಷನ್‌ನಲ್ಲಿರುವ ರೋಗಿಗಳು ದೂರುಪಟ್ಟಿ ಹಿಡಿದು ನಿಲ್ಲುತ್ತಿದ್ದಾರೆ. ಎಲ್ಲರೂ ಮನೆಯ ಮಾದರಿಯ ಸೌಲಭ್ಯ ನಿರೀಕ್ಷಿಸುತ್ತಾರೆ. ಇದಕ್ಕಾಗಿ ಏರು ಧ್ವನಿಯಲ್ಲಿ ಮಾತನಾಡುತ್ತಾರೆ. ಹಾಗೆಂದು ನಾವು ಬೇಸರಪಟ್ಟುಕೊಳ್ಳುವುದಿಲ್ಲ. ಅವರನ್ನು ಸಮಾಧಾನಗೊಳಿಸಿ ಔಷಧ, ಆಹಾರ ನೀಡುತ್ತಿದ್ದೇವೆ ಎನ್ನುತ್ತಾರೆ ವೈದ್ಯರು.
    ರೋಗ ಲಕ್ಷಣಗಳಿಲ್ಲ: ಸೋಂಕಿತರಾಗಿರುವ 30 ಜನರ ಪೈಕಿ ಇಬ್ಬರನ್ನು ಹೊರತುಪಡಿಸಿದರೆ ಉಳಿದವರಲ್ಲಿ ರೋಗ ಲಕ್ಷಣಗಳಾದ ಕೆಮ್ಮು, ಶೀತ, ತೀವ್ರ ಜ್ವರದಂತಹ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ಅವರಿಗೆ ತಜ್ಞರ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ಮಾರ್ಗಸೂಚಿಯನ್ವಯ ಚಿಕಿತ್ಸೆ ನೀಡಲಾಗುತ್ತಿದೆ. ಕ್ಲೋರೋಕ್ವಿನ್ ಮಾತ್ರೆಗಳು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಒದಗಿಸಲಾಗುತ್ತಿದೆ. ಯಾರಲ್ಲಿಯೂ ರೋಗ ಗಂಭೀರವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಅಧಿಕಾರಿಗಳು ವಿಜಯವಾಣಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts