More

    ಪತ್ಯೇಕ ರಸ್ತೆ ಅಪಘಾತ, ಬಿ.ಇ ಪದವೀಧರ ಸೇರಿ ಇಬ್ಬರು ಸಾವು

    ಬೆಂಗಳೂರು: ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಬಿ.ಇ.ಪದವೀಧರ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
    ರಾಜಾಜಿನಗರದಿಂದ ಯಶವಂತಪುರ ಕಡೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಬಿ.ಇ.ಪದವೀಧರನೊಬ್ಬ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಡಾ.ರಾಜ್‌ಕುಮಾರ್ ಪ್ರತಿಮೆಯ ಪೀಠದ ಕಲ್ಲಿಗೆ ಡಿಕ್ಕಿ ಹೊಡೆದುಕೊಂಡು ಮೃತಪಟ್ಟಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ.
    ರಾಜಾಜಿನಗರ ನಿವಾಸಿ ಯಶಸ್(೨೭) ಮೃತ ಬಿ.ಇ.ಪದವೀಧರ. ಶುಕ್ರವಾರ ತಡರಾತ್ರಿ ೧.೩೦ರ ಸುಮಾರಿಗೆ ದುರ್ಘಟನೆ ನಡೆದಿದೆ. ಮೃತದೇಹವನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
    ಬಿ.ಇ. ಪದವಿಧರನಾಗಿದ್ದ ಯಶಸ್, ಉದ್ಯೋಗ ಹುಡುಕುತ್ತಿದ್ದ. ರಾತ್ರಿ ೧.೩೦ರ ಸುಮಾರಿಗೆ ರಾಜಾಜಿನಗರದ ರಾಜ್‌ಕುಮಾರ್ ರಸ್ತೆ ಮಾರ್ಗವಾಗಿ ಯಶವಂತಪುರ ಕಡೆ ಬೈಕ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ರಸ್ತೆ ತಿರುವು ಪಡೆಯುವಾಗ ನಿಯಂತ್ರಣ ತಪ್ಪಿ ಒರಿಯನ್ ಮಾಲ್ ಸಮೀಪದಲ್ಲಿರುವ ಡಾ. ರಾಜ್‌ಕುಮಾರ್ ಪ್ರತಿಮೆಯ ಪೀಠದ ಕಲ್ಲಿಗೆ ಡಿಕ್ಕಿ ಹೊಡೆದುಕೊಂಡಿದ್ದು, ಆತನ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ಅದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿ ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ, ಮಾರ್ಗ ಮಧ್ಯೆಯೇ ಆತ ಮೃತಪಟ್ಟಿದ್ದಾನೆ. ಬೈಕ್ ಚಾಲನೆ ವೇಳೆ ಯಶಸ್ ಹೆಲ್ಮೆಟ್ ಧರಿಸಿರಲಿಲ್ಲ ಎಂಬುದು ಗೊತ್ತಾಗಿದೆ. ಜತೆಗೆ ಆತ ಮದ್ಯ ಸೇವಿಸಿದ್ದನಾ ಎಂಬುದರ ಬಗ್ಗೆ ವೈದ್ಯಕೀಯ ಪರೀಕ್ಷೆಯ ವರದಿ ಬಂದ ಬಳಿಕ ಸ್ಪಷ್ಟತೆ ಸಿಗಲಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಮಲ್ಲೇಶ್ವರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಖಾಸಗಿ ಕಂಪನಿ ಉದ್ಯೋಗಿ ಸಾವು:
    ಮತ್ತೊಂದು ಪ್ರಕರಣದಲ್ಲಿ ಮುಂದೆ ಹೋಗುತ್ತಿದ್ದ ವಾಹನಕ್ಕೆ ಹಿಂದಿನಿದ ಬಂದ ಬೈಕ್ ಡಿಕ್ಕಿ ಹೊಡೆದುಕೊಂಡ ಪರಿಣಾಮ ಖಾಸಗಿ ಕಂಪನಿ ಉದ್ಯೋಗಿ ಮೃತಪಟ್ಟಿರುವ ಘಟನೆ ಕೆಂಗೇರಿ ಸಮೀಪದಲ್ಲಿ ನಡೆದಿದೆ.
    ಯಶವಂತಪುರ ನಿವಾಸಿ ವಿಜಯ್ (೨೯) ಮೃತರು. ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ವಿಜಯ್, ಶುಕ್ರವಾರ ರಾತ್ರಿ ೯.೩೦ರ ಸುಮಾರಿಗೆ ನೈಸ್ ರಸ್ತೆ ಮಾರ್ಗವಾಗಿ ಯಶವಂತಪುರಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ಉಲ್ಲಾಳ ಸೇತುವೆ ಬಳಿ ಮುಂದೆ ಹೋಗುತ್ತಿದ್ದ ವಾಹನಕ್ಕೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದುಕೊಂಡಿದ್ದಾನೆ. ಪರಿಣಾಮ ಬೈಕ್‌ನಿಂದ ಕೆಳಗೆ ಬಿದ್ದು ತಲೆ ಹಾಗೂ ದೇಹದ ಕೆಲ ಭಾಗಗಳಿಗೆ ಪೆಟ್ಟು ಬಿದ್ದಿತ್ತು. ಅದನ್ನು ಗಮನಿಸಿದರೂ ಮುಂದೆ ಹೋಗುತ್ತಿದ್ದ ವಾಹನ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ.
    ಅದೇ ಮಾರ್ಗದಲ್ಲಿ ಬರುತ್ತಿದ್ದ ಇತರೆ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿ, ವಿಜಯ್‌ನನ್ನು ಆಂಬ್ಯುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ, ಮಾರ್ಗ ಮಧ್ಯೆಯೇ ವಿಜಯ್ ಮೃತಪಟ್ಟಿದ್ದಾನೆ. ಬಳಿಕ ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕೆಂಗೇರಿ ಸಂಚಾರ ಠಾಣೆ ಪೊಲೀಸರು ಮೃತದೇಹವನ್ನು ಆರ್.ಆರ್.ನಗರ ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts