More

    ಕಲ್ಯಾಣದ ಹೆಬ್ಬಾಗಿಲಲ್ಲಿ ಸೀನಿಯರ್-ಜೂನಿಯರ್ ದಂಗಲ್

    | ರೇವಣಸಿದ್ದಪ್ಪ ಪಾಟೀಲ್ ಬೀದರ್

    ಕಾಂಗ್ರೆಸ್-ಬಿಜೆಪಿ ನಡುವಿನ ಜಿದ್ದಾಜಿದ್ದಿಯಿಂದಾಗಿ ಬೀದರ್ ಲೋಕಸಭಾ ಕ್ಷೇತ್ರ ರಣಕಣವಾಗಿ ಮಾರ್ಪಟ್ಟಿದೆ. ಬಿಜೆಪಿಯ ಭಗವಂತ ಖೂಬಾ ಮತ್ತೆ ಕಮಲ ಅರಳಿಸಲು ತಂತ್ರ ಹೆಣೆದರೆ, ಹೇಗಾದರೂ ಕ್ಷೇತ್ರ ಕೈವಶ ಮಾಡಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಪುತ್ರ ಸಾಗರ್​ನನ್ನು ಕಾಂಗ್ರೆಸ್​ನಿಂದ ಕಣಕ್ಕಿಳಿಸಿ ಪ್ರತಿತಂತ್ರ ರೂಪಿಸುತ್ತಿದ್ದಾರೆ. ಸೀನಿಯರ್ (ಖೂಬಾ) -ಜೂನಿಯರ್ (ಸಾಗರ್) ನಡುವಿನ ಕದನ ಜೋರಾಗಿಯೇ ನಡೆದಿದೆ.

    ಬಿಜೆಪಿಗೆ ಮೋದಿ ಅಲೆ ದೊಡ್ಡ ಶಕ್ತಿಯಾದರೆ, ಕಾಂಗ್ರೆಸ್​ಗೆ ಈಶ್ವರ ಖಂಡ್ರೆ ಅವರ ನೆಟ್​ವರ್ಕ್ ಆಧಾರ. ಕಳೆದ ಸಲ ಈಶ್ವರ ಖಂಡ್ರೆ ಅವರನ್ನು ಸೋಲಿಸಿದ್ದ ಖೂಬಾ, ಕಳೆದೈದು ವರ್ಷಗಳಲ್ಲಿ ಕೆಲಸ ಮಾಡಿದ ರಿಪೋರ್ಟ್ ಕಾರ್ಡ್ ಮತ್ತು ಮೋದಿ ಅಸ್ತ್ರ ಹಿಡಿದು ಜೂನಿಯರ್ ಖಂಡ್ರೆ ಮಣಿಸಲು ಕಸರತ್ತು ನಡೆಸಿದ್ದಾರೆ. ಪುತ್ರನನ್ನು ಗೆಲ್ಲಿಸಿಕೊಂಡು ಬರಲು ಈಶ್ವರ ಖಂಡ್ರೆ ತಮ್ಮ ಪ್ರಾಬಲ್ಯ, ವರ್ಚಸ್ಸು, ಪಕ್ಷದ ಗ್ಯಾರಂಟಿ ಅಸ್ತ್ರ ಪ್ರಯೋಗಿಸಿದ್ದಾರೆ.

    ಖಂಡ್ರೆ ಮತ್ತು ಖೂಬಾ ಲಿಂಗಾಯತ/ವೀರಶೈವ ಸಮಾಜದವರು. ಜಾತಿ ಸಮೀಕರಣದಲ್ಲಿ ಎರಡೂ ಪಕ್ಷಗಳು ತಮ್ಮದೇ ಆದ ವೋಟ್​ಬ್ಯಾಂಕ್ ಹೊಂದಿದ್ದು, ಸಮುದಾಯದ ಮತಗಳು ಯಾರ ಪಾಲಾಗಲಿವೆ ಎಂಬುದು ನಿಗೂಢ. ಬಿಜೆಪಿಗೆ ಜೆಡಿಎಸ್ ಸಾಥ್ ನೀಡಿದೆ. ಇಬ್ಬರೂ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.

    ಕ್ಷೇತ್ರದ ಇತಿಹಾಸ ಗಮನಿಸಿದರೆ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. ಮೊದಲು ಕೈ ತೆಕ್ಕೆಯಲ್ಲಿದ್ದ ಕ್ಷೇತ್ರ ಕ್ರಮೇಣ ಬಿಜೆಪಿ ಭದ್ರಕೋಟೆಯಾಗಿ ಬದಲಾಗಿದೆ. 18 ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್ ಗೆದ್ದರೆ, ಏಳು ಸಲ ಕಮಲ ಅರಳಿದೆ.

    ಕಲ್ಯಾಣದ ಹೆಬ್ಬಾಗಿಲಲ್ಲಿ ಸೀನಿಯರ್-ಜೂನಿಯರ್ ದಂಗಲ್

    ಈಶ್ವರ ಖಂಡ್ರೆಗಿದು ಸವಾಲಿನ ಎಲೆಕ್ಷನ್: ಸಾಗರ್ ಖಂಡ್ರೆ ಅವರನ್ನು ಕಣಕ್ಕಿಳಿಸಿದರೂ ಈಶ್ವರ ಖಂಡ್ರೆ ಅವರೇ ಅಭ್ಯರ್ಥಿ ಎನ್ನುವಂತಿದೆ. ಕಳೆದ ಚುನಾವಣೆಯಲ್ಲಿ ಕಣಕ್ಕಿಳಿದು ಸೋತಿದ್ದ ಈಶ್ವರ ಇದೀಗ ಖೂಬಾಗೆ ಪಾಠ ಕಲಿಸಲು ಹಾಗೂ ಪುತ್ರನಿಗೆ ರಾಜಕೀಯ ಗಟ್ಟಿ ನೆಲೆ ಒದಗಿಸಲು ನಾನಾ ತಂತ್ರ ಹೆಣೆಯುತ್ತಿದ್ದಾರೆ. ಖಂಡ್ರೆ ಪಾಲಿಗೆ ಇದು ರಿಸ್ಕ್ ಚುನಾವಣೆ.

    ನರೇಂದ್ರ ಮೋದಿ ಹವಾದ್ದೇ ಕೈ ಪಡೆಗೆ ಭಯ: ಸಂಖ್ಯಾಬಲ ಅವಲೋಕಿಸಿದರೆ ಬಿಜೆಪಿ-ಜೆಡಿಎಸ್ ಮೈತ್ರಿ ಬಲಿಷ್ಠವಿದೆ. ಐವರು ಬಿಜೆಪಿ ಶಾಸಕರಿದ್ದರೆ, ಮೂವರು ಕಾಂಗ್ರೆಸ್ ಶಾಸಕರು. 2014ರಲ್ಲಿ ಮೋದಿ ಅಲೆಯಲ್ಲಿ ಭಗವಂತ ಖೂಬಾ ಅವರು ಮಾಜಿ ಸಿಎಂ ಧರ್ಮಸಿಂಗ್​ರನ್ನು ಸೋಲಿಸಿದ್ದರು. ಕಳೆದ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಅವರನ್ನು ಪರಾಭವಗೊಳಿಸಿದ್ದರು. ಖೂಬಾ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಈಗಲೂ ಕಾಂಗ್ರೆಸಿಗರಿಗೆ ಮೋದಿ ಹವಾ ಭಯ ಒಂದಿಷ್ಟು ಜಾಸ್ತಿಯೇ ಕಾಡುತ್ತಿದೆ.

    ಮರಾಠರ ಶಕ್ತಿ ಹೆಚ್ಚು: ಔರಾದ್, ಬಸವಕಲ್ಯಾಣ, ಭಾಲ್ಕಿ ವಿಧಾನಸಭಾ ಕ್ಷೇತ್ರಗಳಲ್ಲಿ ಮರಾಠರ ಶಕ್ತಿ ಹೆಚ್ಚಿದೆ. ಇವರನ್ನು ಸೆಳೆಯಲು ಎರಡೂ ಪಕ್ಷದ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಮರಾಠ ಸಮಾಜದಿಂದ ಒಬ್ಬರನ್ನು ಕಣಕ್ಕಿಳಿಸುವ ಬಗ್ಗೆ ತೀರ್ವನಿಸಲಾಗಿದೆ. ಕ್ಷೇತ್ರದಲ್ಲಿ 18,57,025 ಮತದಾರರಿದ್ದು, ಲಿಂಗಾಯತರೇ (5.50 ಲಕ್ಷ) ಪ್ರಬಲರು. ನಂತರದ ಸ್ಥಾನದಲ್ಲಿ ಎಸ್ಸಿ, ಎಸ್ಟಿ (4.50 ಲಕ್ಷ), ಅಲ್ಪಸಂಖ್ಯಾತರು (3.50 ಲಕ್ಷ), ಮರಾಠ (2 ಲಕ್ಷ), ಸುಮಾರು ಒಂದೂವರೆ ಲಕ್ಷ ಲಂಬಾಣಿ ಸಮುದಾಯದ ಮತದಾರರಿದ್ದಾರೆ.

     

    ಭಗವಂತ ಖೂಬಾ ಪ್ಲಸ್-ಮೈನಸ್

    1. ಎರಡು ಅವಧಿಯಲ್ಲಿ ಕೇಂದ್ರದ ಯೋಜನೆಗಳ ಜಾರಿ

    2. ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು

    3. ಕಾರ್ಯಕರ್ತರು, ಮುಖಂಡರೊಂದಿಗೆ ಹಳಸಿರುವ ಸಂಬಂಧ

    4. ಪಕ್ಷ ಸಂಘಟನೆಯಲ್ಲಿ ನಿರಾಸಕ್ತಿ, ಸ್ವಪಕ್ಷದವರ ವಿರೋಧ

     

    ಸಾಗರ್ ಖಂಡ್ರೆ ಪ್ಲಸ್-ಮೈನಸ್

    1. ಈಶ್ವರ ಖಂಡ್ರೆ ನೆಟ್​ವರ್ಕ್, ಸಂಘಟನೆಯಲ್ಲಿ ಎತ್ತಿದ ಕೈ

    2. ಯುವ ಉತ್ಸಾಹಿ, ಎಲ್ಲರೊಂದಿಗೆ ಉತ್ತಮ ಒಡನಾಟ

    3. ಹೊಸ ಮುಖ ಹಾಗೂ ಕುಟುಂಬ ರಾಜಕಾರಣ

    4. ವಿವಿಧ ಕ್ಷೇತ್ರದಲ್ಲಿ ಸ್ವಪಕ್ಷದವರ ಅಸಮಾಧಾನ

     

    ನರೇಂದ್ರ ಮೋದಿ ಅವರ ಎರಡು ಅವಧಿಯ ಐತಿಹಾಸಿಕ ಕೆಲಸ, ದೇಶದ ಸುರಕ್ಷತೆ, ಸಂರಕ್ಷಣೆ ಬಗ್ಗೆ ಜನರಲ್ಲಿ ಇರುವ ನಂಬಿಕೆ ಹಾಗೂ ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆ. ಈಗ ಎದ್ದಿರುವುದು ಮೋದಿ ಅಲೆಯಲ್ಲ, ಸುನಾಮಿ. ಭಾರತವೀಗ ಕಾಂಗ್ರೆಸ್​ವುುಕ್ತದತ್ತ ದಾಪುಗಾಲಿಟ್ಟಿದೆ.

    | ಭಗವಂತ ಖೂಬಾ ಬಿಜೆಪಿ ಅಭ್ಯರ್ಥಿ

     

    ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ದಿಕ್ಕು ತಪ್ಪಿಸುವುದೇ ಬಿಜೆಪಿಯವರ ಕೆಲಸ. ಮತಕ್ಕಾಗಿ ಜಾತಿ, ಧರ್ಮದ ಹೆಸರಿನಲ್ಲಿ ಜಗಳ ಹಚ್ಚುವ ಮತ್ತು ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜನ ನಿರ್ಧರಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಜಯ ಖಚಿತ.

    | ಸಾಗರ್ ಖಂಡ್ರೆ ಕಾಂಗ್ರೆಸ್ ಅಭ್ಯರ್ಥಿ

     

    ಶ್ರೀರಾಮನವಮಿ ಆಚರಿಸಿ ಹೋಗುತ್ತಿದ್ದವರನ್ನ ಅಡ್ಡಗಟ್ಟಿ ಅನ್ಯಕೋಮಿನ ಯುವಕರಿಂದ ಬೆದರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts