More

    ಕೃಷಿಯಲ್ಲಿ ವೈಜ್ಞಾನಿಕ ಮಾದರಿ ಬಳಸಿ

    ವಿಜಯವಾಣಿ ಸುದ್ದಿಜಾಲ ವಿಜಯಪುರ
    ರೈತರು, ವೈಜ್ಞಾನಿಕ ಮಾದರಿಯಲ್ಲಿ ಕೃಷಿ ಕೈಗೊಳ್ಳುವತ್ತ ಗಮನಹರಿಸಬೇಕು. ಬೆಳೆಗಳನ್ನು ನಾಟಿ ಮಾಡುವ ಮೊದಲು ಪೂರ್ವ ತಯಾರಿ ಮಾಡಿಕೊಳ್ಳಬೇಕು. ಗುಣಮಟ್ಟದ ಬೀಜೋಪಚಾರ ಮಾಡಿದ ಬೀಜಗಳ ಬಿತ್ತನೆ, ಮಾರುಕಟ್ಟೆಯ ಸೌಲಭ್ಯದ ಕುರಿತು ಚಿಂತನೆ ನಡೆಸಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಸವರಾಜೇಗೌಡ ಹೇಳಿದರು.
    ಹೋಬಳಿಯ ದಂಡಿಗಾನಹಳ್ಳಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ‘ಹಸಿರ ಮಲ್ಲಾರ’ ಕೃಷಿ ಮೇಳ, ಕೃಷಿ ವಸ್ತು ಪ್ರದರ್ಶನ ಮತ್ತು ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
    ರೈತರು, ಸ್ವತಃ ನೇರ ಮಾರುಕಟ್ಟೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಾಧ್ಯವಾದಷ್ಟು ಸಾವಯವ ಪದ್ಧತಿಯಲ್ಲಿ ಬೆಳೆಗಳು ಬೆಳೆದರೆ, ಉತ್ತಮ ಮಾರುಕಟ್ಟೆಯ ಸೌಲಭ್ಯ ಸಿಗುತ್ತವೆ ಎಂದರು.
    ರೇಷ್ಮೆ ಇಲಾಖೆ ಉಪನಿರ್ದೇಶಕ ಎನ್.ಕೆ.ಪ್ರಭಾಕರ್ ಮಾತನಾಡಿ, ರೇಷ್ಮೆ ಉತ್ಪಾದನೆಯಲ್ಲಿ ಚೀನಾಗಿಂತಲೂ ನಮ್ಮ ದೇಶವು ಗುಣಮಟ್ಟ ಕಾಯ್ದುಕೊಳ್ಳುವ ಜತೆಗೆ ಮಾರುಕಟ್ಟೆ ಮಾಡುವಂತಹ ದಿನಗಳು ಸಮೀಪದಲ್ಲಿವೆ. ಶೇ.70 ಉತ್ಪಾದನೆಯನ್ನು ಚೀನಾ ನಿಲ್ಲಿಸಿದೆ. ನಮ್ಮಲ್ಲಿನ ರೈತರು ಹೆಚ್ಚು ಉತ್ಪಾದನೆ ಕಡೆಗೆ ಗಮನಹರಿಸಿದ್ದಾರೆ. ಸುಸ್ಥಿರ ಬೇಸಾಯ, ಮಿಶ್ರಬೆಳೆ ಬೆಳೆಯುವ ಕಡೆಗೆ ಚಿಂತನೆ ನಡೆಸಬೇಕು. ಕೃಷಿಯ ಬಗ್ಗೆ ಯುವಕರಲ್ಲಿ ತಾತ್ಸಾರ ಮನೋಭಾವನೆ ಇದೆ. ಅದನ್ನು ಹೋಗಲಾಡಿಸಬೇಕು ಎಂದರು.
    ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನಾ ಇಲಾಖೆಗಳಿಂದ ಸಿಗುವಂತಹ ಸೌಲಭ್ಯಗಳ ಕುರಿತು ರೈತರಿಗೆ ಮಾಹಿತಿ ನೀಡಲು ಮಳಿಗೆ ತೆರೆಯಲಾಗಿತ್ತು. ಕೃಷಿ, ತೋಟಗಾರಿಕೆ, ಪಶುಪಾಲನೆಯಲ್ಲಿ ಬಳಕೆ ಮಾಡಿಕೊಳ್ಳುವ ಯಂತ್ರೋಪಕರಣ ಪರಿಚಯಿಸಲಾಯಿತು. ಸ್ಥಳೀಯ ರೈತರ ಜಮೀನುಗಳಲ್ಲಿ ಸಂಗ್ರಹಿಸಿದ್ದ ಮಣ್ಣನ್ನು ಪರೀಕ್ಷೆಗೆ ಕಳುಹಿಸಿದ್ದ ವಿದ್ಯಾರ್ಥಿಗಳು, ಮಣ್ಣಿನ ವರದಿಯನ್ನು ರೈತರಿಗೆ ವಿತರಣೆ ಮಾಡಿದರು.
    ರಾಜ್ಯ ಪ್ರಶಸ್ತಿ ವಿಜೇತ, ರೈತ ಬೀಡಿಗಾನಹಳ್ಳಿ ಬಿ.ಆರ್.ಮಂಜುನಾಥ್, ಹಳ್ಳಿಕಾರ್ ತಳಿ ಎತ್ತುಗಳನ್ನು ಪೋಷಣೆ ಮಾಡುತ್ತಿರುವ ರೈತ ಮರವೇ ನಾರಾಯಣಪ್ಪ ಅವರನ್ನು ಸನ್ಮಾನಿಸಿದರು.
    ಗ್ರಾಪಂ ಸದಸ್ಯರಾದ ಮಂಜುಳಾ ಅಂಬರೀಶ್, ಕಿರಣ್, ಧನಂಜಯ, ದೇವರಾಜ್, ಮುಖಂಡ ಚಿನ್ನಪ್ಪ, ಸುಧಾಕರ್, ಅಂಬರೀಶ್, ವೀರೇಗೌಡ, ನಾರಾಯಣಸ್ವಾಮಿ, ಬೈರಾಪುರ ರಾಜಣ್ಣ, ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಪ್ರಾಧ್ಯಾಪಕಿ ಡಾ.ಸಿ.ಎಂ.ಸವಿತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts