More

    ಹಲಗೇರಿ ಗ್ರಾಮಸ್ಥರಿಂದ ಸ್ವಯಂ ನಿರ್ಬಂಧ

    ರಾಣೆಬೆನ್ನೂರ: ತಾಲೂಕಿನ ಹಲಗೇರಿ ಜನತಾ ಪ್ಲಾಟ್​ನಲ್ಲಿ ಮಹಿಳೆಯೊಬ್ಬಳಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಹಲಗೇರಿ ಗ್ರಾಮಸ್ಥರು ಬುಧವಾರದಿಂದ ಸ್ವಯಂ ಪ್ರೇರಿತ ಲಾಕ್​ಡೌನ್ ಘೊಷಿಸಿದ್ದಾರೆ.

    ಗ್ರಾಮಸ್ಥರು ಹಿರಿಯರ ಸಮ್ಮುಖದಲ್ಲಿ ಸಭೆ ನಡೆಸಿ ತೀರ್ಮಾನ ತೆಗೆದುಕೊಂಡಿದ್ದಾರೆ. ದಿನಸಿ ಅಂಗಡಿ, ಗೊಬ್ಬರ ಮತ್ತು ಕೀಟನಾಶಕ, ಹಿಟ್ಟಿನ ಗಿರಣಿ, ಹಾರ್ಡ್​ವೇರ್ ಹಾಗೂ ಮೋಟರ್ ವೈಂಡಿಂಗ್, ತರಕಾರಿ ಮಾರುಕಟ್ಟೆಯನ್ನು ಬೆಳಗ್ಗೆ 6ರಿಂದ 10 ರವರೆಗೆ ಮಾತ್ರ ತೆರೆಯಲು ಅವಕಾಶ ಕಲ್ಪಿಸಿದ್ದಾರೆ. ಔಷಧ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಪೂರ್ಣ ದಿನ ತೆರೆಯಲು ಮನವಿ ಮಾಡಿದ್ದಾರೆ. ಇನ್ನುಳಿದಂತೆ ಎಲ್ಲ ಅಂಗಡಿ, ಮುಂಗಟ್ಟುಗಳು ಕಡ್ಡಾಯವಾಗಿ 10 ದಿನಗಳ ಕಾಲ ಬಂದ್ ಮಾಡಲು ಸೂಚಿಸಿದ್ದಾರೆ. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಬುಧವಾರ ಗ್ರಾಮದ ಮುಖ್ಯರಸ್ತೆ ಸೇರಿ ಯಾವ ಬಡಾವಣೆಯಲ್ಲೂ ಅಂಗಡಿಗಳನ್ನು ತೆರೆದಿಲ್ಲ.

    ಉಲ್ಲಂಘಿಸಿದರೆ ಕ್ರಮ: ಗ್ರಾಮದ ಮಠ, ಮಂದಿರ ಹಾಗೂ ಮಸೀದಿಗಳಲ್ಲಿ ಮೂರು ಜನರು ಮಾತ್ರ ತೆರಳಿ ಪೂಜೆ ಸಲ್ಲಿಸಬೇಕು. ಮನೆಯಿಂದ ಅನವಶ್ಯಕವಾಗಿ ಯಾರೂ ಹೊರಗೆ ಬರಬಾರದು. ಅಗತ್ಯ ಕೆಲಸವಿರುವವರು ಮಾಸ್ಕ್ ಧರಿಸಿಕೊಂಡು ಬರಬೇಕು. ಈ ಎಲ್ಲ ನಿಯಮಗಳನ್ನು ಪಾಲಿಸಬೇಕು ಎಂದು ಗ್ರಾಮದಲ್ಲಿ ಡಂಗುರ ಹೊಡೆಸಿದ್ದಾರೆ. ಗ್ರಾಮದ ಹಿರಿಯರು ತೆಗೆದುಕೊಂಡ ನಿರ್ಧಾರದ ವಿರುದ್ಧವಾಗಿ ಯಾರಾದರೂ ನಡೆದುಕೊಂಡರೆ ಅಂಥವರ ಮೇಲೆ ಹಿರಿಯರ ಸಮ್ಮುಖದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

    ಮದ್ಯದಂಗಡಿಗಳನ್ನು ಸಂಜೆ 4ರಿಂದ ರಾತ್ರಿ 8ರವರೆಗೆ ಮಾತ್ರ ತೆರೆಯಬೇಕು. ಅಂಗಡಿಗಳಲ್ಲಿ ಜನರನ್ನು ಗುಂಪಾಗಿ ಸೇರಿಸದೆ ಗ್ರಾಹಕರಿಗೆ ಪಾರ್ಸಲ್ ಕೊಟ್ಟು ಕಳುಹಿಸಬೇಕು ಎಂದು ಸೂಚಿಸಲಾಗಿದೆ.

    ಬೆಳ್ಳುಳ್ಳಿ ಸಂತೆ ಬಂದ್: ಗ್ರಾಮದಲ್ಲಿ ಪ್ರತಿ ಗುರುವಾರ ನಡೆಯುವ ಬೆಳ್ಳುಳ್ಳಿ ಮಾರುಕಟ್ಟೆಯು ಜು. 2ರಂದು ಬಂದ್ ಇರುತ್ತದೆ. ಬೆಳ್ಳುಳ್ಳಿ ಮಾರುಕಟ್ಟೆಗೆ ಸಾವಿರಾರು ಜನ ಸೇರುವ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ರೈತರು, ವ್ಯಾಪಾರಸ್ಥರು ಸಹಕರಿಸಬೇಕು ಎಂದು ಗ್ರಾಮದ ಹಿರಿಯರು ಮನವಿ ಮಾಡಿದ್ದಾರೆ.

    ನಮ್ಮ ಗ್ರಾಮದಲ್ಲಿ ಒಬ್ಬ ಮಹಿಳೆಗೆ ಕರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಕರೊನಾ ಹರಡುವಿಕೆ ತಡೆಯುವ ಹಿನ್ನೆಲೆಯಲ್ಲಿ ಸ್ವಯಂ ಲಾಕ್​ಡೌನ್ ಘೊಷಿಸಿದ್ದೇವೆ. ಈ ಬಗ್ಗೆ ಈಗಾಗಲೇ ಗ್ರಾಮದಲ್ಲಿ ಡಂಗುರ ಹೊಡೆಸಿದ್ದೇವೆ. ಎಲ್ಲವನ್ನೂ ಸರ್ಕಾರ, ಅಧಿಕಾರಿಗಳೇ ಮಾಡಬೇಕು ಎಂದರೆ ಆಗುವುದಿಲ್ಲ. ನಮ್ಮ ಸಹಕಾರವೂ ಅತಿಮುಖ್ಯವಾಗಿದೆ.

    | ಶಿವಪುತ್ರಪ್ಪ ಹರಿಯಾಳದವರ, ಹಲಗೇರಿ ಗ್ರಾಮದ ಹಿರಿಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts