More

    ಐಸಿಸಿ ಚೇರ್ಮನ್ ಆಗಿ ಗ್ರೇಗ್ ಬಾರ್ಕ್ಲೆ ಆಯ್ಕೆ

    ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ನೂತನ ಚೇರ್ಮನ್ ಆಗಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ (ಎನ್‌ಝೆಡ್‌ಸಿ) ಗ್ರೇಗ್ ಬಾರ್ಕ್ಲೆ ಆಯ್ಕೆಯಾಗಿದ್ದಾರೆ. ಹಂಗಾಮಿ ಚೇರ್ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಿಂಗಪುರದ ಇಮ್ರಾನ್ ಖವಾಜ ಅವರನ್ನು 11-5 ಮತಗಳಿಂದ ಮಣಿಸಿ, ಭಾರತದ ಶಶಾಂಕ್ ಮನೋಹರ್ ಬಳಿಕ ಸ್ವತಂತ್ರ ಚೇರ್ಮನ್ ಆಗಿ ಆಯ್ಕೆಯಾದರು. ಮಂಗಳವಾರ ನಡೆದ ಐಸಿಸಿ ತ್ರೈಮಾಸಿಕ ಸಭೆಯಲ್ಲಿ ನಡೆದ ಮತದಾನದಲ್ಲಿ 16 ಮಂಡಳಿ ನಿರ್ದೇಶಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 12 ಮಂದಿ ಪೂರ್ಣ ಸದಸ್ಯತ್ವ (ಟೆಸ್ಟ್ ಆಡುವ ರಾಷ್ಟ್ರಗಳು), ಮೂವರು ಸಹಾಯಕ ಸದಸ್ಯರು ಹಾಗೂ ಒಂದು ಸ್ವತಂತ್ರ ಮಹಿಳಾ ನಿರ್ದೇಶಕರು (ಪೆಪ್ಸಿಕೋದ ಇಂದ್ರಾ ನೂಯಿ) ಮತದಾನದ ಹಕ್ಕು ಹೊಂದಿದ್ದರು.

    ಐಸಿಸಿ ಚೇರ್ಮನ್ ಆಗಿ ಆಯ್ಕೆಯಾಗಿದ್ದು ಒಂದು ದೊಡ್ಡ ಗೌರವ. ನನಗೆ ಬೆಂಬಲ ನೀಡಿದ ಐಸಿಸಿಯ ಎಲ್ಲ ನಿರ್ದೇಶಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಎಲ್ಲರೂ ಒಟ್ಟಿಗೆ ಕ್ರೀಡಾಭಿವೃದ್ಧಿಗೆ ಕೈಜೋಡಿಸೋಣ ಎಂದು ಗೆಲುವಿನ ಬಳಿಕ ಬಾರ್ಕ್ಲೆ ಪ್ರತಿಕ್ರಿಯಿಸಿದರು. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಶ್ವ ಮಟ್ಟದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಶ್ರಮಿಸುವುದಾಗಿ ಬರ್ಕ್ಲೆ ಹೇಳಿದರು.
    ಕಳೆದ ವಾರ ನಡೆದ ಮೊದಲ ಹಂತದ ಮತದಾನದಲ್ಲಿ ಗ್ರೇಗ್ ಬಾರ್ಕ್ಲೆ 10 ಹಾಗೂ ಖವಾಜ 6 ಮತ ಪಡೆದಿದ್ದು, ಆದರೆ, ಐಸಿಸಿ ನಿಯಮದ ಪ್ರಕಾರ 16 ಸದಸ್ಯರ ಪೈಕಿ ಎರಡನೇ ಮೂರಷ್ಟು ಬೆಂಬಲ ಹೊಂದಿದ್ದರಷ್ಟೇ ಆಯ್ಕೆ ಸಿಂಧುವಾಗಲಿದೆ. ಮಂಗಳವಾರ 11 ಮಂದಿ ಬಾರ್ಕ್ಲೆ ಪರ ಮತ ಚಲಾಯಿಸಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಬಿಗ್ ಥ್ರೀ ಖ್ಯಾತಿಯ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಗೂ ಬರ್ಕ್ಲೆ ಬೆಂಬಲ ನೀಡಿದ್ದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಖವಾಜ ಅವರನ್ನು ಬೆಂಬಲಿಸಿತ್ತು.

    * ಯಾರು ಗ್ರೇಗ್ ಬಾರ್ಕ್ಲೆ..?
    ನ್ಯೂಜಿಲೆಂಡ್‌ನ ಅಕ್ಲೇಂಡ್ ಮೂಲದ ವಕೀಲರೂ ಆದ ಬಾರ್ಕ್ಲೆ 2012ರಿಂದ ಎನ್‌ಝೆಡ್‌ಸಿ ನಿರ್ದೇಶಕರಾಗಿದ್ದಾರೆ. ಸದ್ಯ ಐಸಿಸಿಯಲ್ಲಿ ಎನ್‌ಝೆಡ್‌ಸಿಯ ಪ್ರತಿನಿಧಿಯಾಗಿದ್ದರು. 2015ರ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಬಾರ್ಕ್ಲೆ, ಮಾಜಿ ಮಂಡಳಿ ಸದಸ್ಯ ಹಾಗೂ ನಾಥರ್ನ್ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಚೇರ್ಮನ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಖಾಸಗಿ ಕಂಪನಿಗಳಿಗೆ ನಿರ್ದೇಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts