More

    ರೋಗಿಯನ್ನು ದೇವರಂತೆ ನೋಡಿ

    ಧಾರವಾಡ: ಜೀವನದ ಅಂತಿಮ ಕ್ಷಣದವರೆಗೂ ದುಡಿಯುವ ಅವಕಾಶ ವೈದ್ಯಕೀಯ ಕ್ಷೇತ್ರದಲ್ಲಿ ಇದೆ. ಹೀಗಾಗಿ, ರೋಗಿಗಳನ್ನು ಪ್ರೀತಿಯಿಂದ ಆರೈಕೆ ಮಾಡಿ ಆರೋಗ್ಯಯುತ ಸಮಾಜ ನಿರ್ವಣಕ್ಕೆ ಮುಂದಾಗಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿವಿ ಕುಲಾಧಿಪತಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

    ಸತ್ತೂರಿನ ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್​ಡಿಎಂ ವೈದ್ಯಕೀಯ ವಿಜ್ಞಾನ ಕಾಲೇಜಿನ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ಆನ್​ಲೈನ್ ಮೂಲಕ ಅವರು ಮಾತನಾಡಿದರು.

    ಕೋವಿಡ್ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಸುಖ ಸಂತೋಷ ಬದಿಗೊತ್ತಿ ರೋಗಿಗಳ ಆರೈಕೆಯಲ್ಲಿ ತೊಡಗಿದ ವೈದ್ಯರು ಹಾಗೂ ಸಿಬ್ಬಂದಿ ನಿಜವಾದ ಯೋಧರು. ಕೋವಿಡ್​ನಿಂದ ವೈದ್ಯರ ಸೇವೆ ಎಷ್ಟು ಮುಖ್ಯ ಎಂಬುದು ಜನರಿಗೆ ತಿಳಿದಿದೆ. ಹೀಗಾಗಿ ಈ ಸೇವೆಗೆ ಸೇರುವವರ ಸಂಖ್ಯೆ ಹೆಚ್ಚಳವಾಗಿದೆ. ಪದವಿ ಪಡೆಯುವ ಯುವ ವೈದ್ಯರು ರೋಗಿಗಳನ್ನು ದೇವರು ಎಂಬ ಭಾವನೆಯಿಂದ ಆರೈಕೆ ಮಾಡುವುದರ ಜತೆಗೆ, ನಿರಂತರ ಅಧ್ಯಯನಶೀಲರಾಗಬೇಕು ಎಂದರು.

    ಎಸ್​ಡಿಎಂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯು ಡಾ. ರತ್ನಮಾಲಾ ದೇಸಾಯಿ, ಎಸ್​ಡಿಎಂ ಸಿಇಟಿ ಕಾರ್ಯದರ್ಶಿ ಡಾ. ಜೀವಂಧರಕುಮಾರ, ಪದ್ಮಲತಾ ನಿರಂಜನಕುಮಾರ, ಡಾ. ಕಿರಣ ಹೆಗಡೆ, ಪ್ರೊ. ಸಿ.ಎಂ. ಶೆಟ್ಟರ್, ಇತರರು ಇದ್ದರು. ಉಪ ಕುಲಪತಿ ಡಾ. ನಿರಂಜನಕುಮಾರ ಸ್ವಾಗತಿಸಿದರು. ಡಾ. ಗಿರೀಶ ಭಾಗವತ, ಡಾ. ಜಿ. ರಚಿತಾ, ಡಾ. ಅಂಕಿತಾ ಅಡಿಗ, ಡಾ. ಹೃದಯ ಪೆರುಮಾಳ ರೆಡ್ಡಿ, ಡಾ. ಮೇಘನಾ ಪಿ. ರಾವ್, ಡಾ. ಕೆ.ಎಸ್.ಅಂಕುಶ ಚಿನ್ನದ ಪದಕಗಳನ್ನು ಪಡೆದರು. ಫಿಸಿಯೋ ಥೆರಪಿ ವಿಭಾಗದಲ್ಲಿ ಡಾ. ವಿತಿಕಾ ಎಸ್. ರೈ ಗರಿಷ್ಠ ಚಿನ್ನದ ಪದಕಗಳೊಂದಿಗೆ ಅತ್ಯುತ್ತಮ ಹುಡುಗಿ ಸ್ಥಾನ ಪಡೆದರು. ಉಳಿದಂತೆ ಡಾ. ಪ್ರಿಯಾಂಕಾ ರಾಮಚಂದಾನಿ, ಡಾ. ವಂದನಾ ಓಝಾ, ಡಾ. ಅಪೂರ್ವಾ ಕದಂ, ಡಾ. ಸೈಲಿ ಶೆಟ್ಕರ್ ಚಿನ್ನದ ಪದಕ ಪಡೆದರು.

    ದೇಸಾಯಿ ಚಿನ್ನದ ಹುಡುಗ: ಎಂಬಿಬಿಎಸ್ ವಿಭಾಗದ ಡಾ. ರಾಘವೇಂದ್ರ ದೇಸಾಯಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬಂಗಾರದ ಪದಕ ಸೇರಿ ಒಟ್ಟು 16 ಪದಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈತ ಧಾರವಾಡ ನುಗ್ಗಿಕೇರಿಯವರು.

    ನಾನು ಸಣ್ಣವನಿದ್ದಾಗಲೇ ವೈದ್ಯನಾಗುವ ಆಸೆ ಹೊಂದಿದ್ದೆ. ವೈದ್ಯನಾಗುವ ಆಶಯದೊಂದಿಗೆ ಇಲ್ಲಿ ಒಂದೊಂದೇ ಸಾಧನೆಯ ಮಟ್ಟಿಲೇರಿದ್ದೇನೆ. ಇದಕ್ಕೆ ಪ್ರಾಧ್ಯಾಪಕರು, ಪಾಲಕರು, ಸಹಪಾಠಿಗಳು, ಹಿರಿಯರ ಸಹಕಾರವೇ ಕಾರಣ. ಚಿನ್ನದ ಪದಕಗಳನ್ನು ಪಡೆಯಲು ತಂದೆ- ತಾಯಿ ಆಶೀರ್ವಾದ, ಪ್ರೋತ್ಸಾಹವೇ

    ಮುಖ್ಯ ಕಾರಣ.

    |ಡಾ. ರಾಘವೇಂದ್ರ ದೇಸಾಯಿ ಚಿನ್ನದ ಹುಡುಗ

    ಮಗನ ಸಾಧನೆ ಖುಷಿ ಕೊಟ್ಟಿದ್ದು, ಮುಂದೆ ಎಲ್ಲಿ ಹೋಗಿ ಕಲಿತರೂ ಮರಳಿ ಊರಿಗೆ ಬಂದು ಜನರ ಸೇವೆ ಮಾಡುವಂತೆ ತಿಳಿಸಿದ್ದೇನೆ. ಮುಂದಿನದ್ದು ಅವನ ವಿವೇಚನೆಗೆ ಬಿಟ್ಟಿದ್ದು. ಮುಂದೆ ನೀಟ್ ಪರೀಕ್ಷೆ ಬರೆಯಲಿದ್ದು, ಸಾವಿರದೊಳಗೆ ರ್ಯಾಂಕ್ ಬಂದರೆ ಎಂಡಿ ಜನರಲ್ ಮೆಡಿಸಿನ್​ನಲ್ಲಿ ಅಧ್ಯಯನ ಮಾಡಿ ಹೃದ್ರೋಗ ತಜ್ಞನಾಗುವ ಆಶಯ ಹೊಂದಿದ್ದಾನೆ.

    | ಪ್ರಲ್ಹಾದ ಆರ್.ದೇಸಾಯಿ

    (ರಾಘವೇಂದ್ರ ದೇಸಾಯಿ ತಂದೆ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts