More

    ಮೆಡಿಕಲ್ ಕಾಲೇಜ್​ಗೆ ಮತ್ತೆ 3 ಜಾಗ ಶೋಧ

    ಹಾವೇರಿ: ತಾಲೂಕಿನ ದೇವಗಿರಿ-ಯಲ್ಲಾಪುರ ಗ್ರಾಮದ ಬಳಿಯ ಜಾಗದಲ್ಲಿ ಮೆಡಿಕಲ್ ಕಾಲೇಜ್ ಕಟ್ಟಡ ಕಾಮಗಾರಿ ಆರಂಭಗೊಂಡಿದ್ದರೂ ಜಾಗದ ವಿವಾದ ಇನ್ನೂ ಮುಂದುವರಿದಿದೆ.

    ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಪರ್ಯಾಯ ಜಾಗದ ಹುಡುಕಾಟ ಪ್ರಕ್ರಿಯೆ ನಡೆದಿದೆ. ಅದರಂತೆ ಮೂರು ಪರ್ಯಾಯ ಸ್ಥಳಗಳ ವೀಕ್ಷಣೆಯನ್ನು ಅಧಿಕಾರಿಗಳು ನಡೆಸಿದ್ದಾರೆ. ಲೋಕೋಪಯೋಗಿ ಹಾಗೂ ಕೆಆರ್​ಡಿಸಿಎಲ್ ಅಧಿಕಾರಿಗಳು ಜಾಗದ ವೀಕ್ಷಣೆ ನಡೆಸಿದ್ದು, ಅದರಲ್ಲೂ ಒಂದಿಲ್ಲೊಂದು ತಾಂತ್ರಿಕ ಸಮಸ್ಯೆ ಇರುವ ಕುರಿತು ಜಿಲ್ಲಾಧಿಕಾರಿಗೆ ವರದಿ ನೀಡಿರುವ ಕುರಿತು ‘ವಿಜಯವಾಣಿ’ಗೆ ಮಾಹಿತಿ ಲಭ್ಯವಾಗಿದೆ.

    ಕಾಡುತ್ತಿದೆ ಜಾಗದ ಸಮಸ್ಯೆ: ಜಿಲ್ಲೆಗೆ ಮೆಡಿಕಲ್ ಕಾಲೇಜ್ ಮಂಜೂರಾಗಿ ಬರೋಬ್ಬರಿ 8 ವರ್ಷಗಳ ನಂತರ ಕಾಲೇಜ್ ನಿರ್ವಣಕ್ಕೆ ಅನುದಾನ ಬಿಡುಗಡೆಯಾಗಿದೆ. ಕಾಲೇಜ್ ನಿರ್ವಣದ ಕನಸು ನನಸಾಗುವ ಸಮಯದಲ್ಲಿ ಇದೀಗ ಜಾಗದ ಸಮಸ್ಯೆ ತಲೆದೋರಿರುವುದು ಆತಂಕ ತಂದಿದೆ.

    ದೇವಗಿರಿ-ಯಲ್ಲಾಪುರ ಜಾಗವು ತಗ್ಗು ಪ್ರದೇಶ ಹಾಗೂ ನಗರ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ದೂರದಲ್ಲಿರುವ ಕಾರಣ ವೈದ್ಯಕೀಯ ಸಚಿವ ಡಾ. ಸುಧಾಕರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸರ್ಕಾರದ ಹಣವನ್ನು ಈ ಪ್ರದೇಶದಲ್ಲಿ ಸುರಿಯಬೇಡಿ. ಪರ್ಯಾಯ ಜಾಗವನ್ನು ಗುರುತಿಸಿ ಎಂದು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅದರಂತೆ ಜಿಲ್ಲಾಡಳಿತ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನೆಲೋಗಲ್ಲ, ಗುತ್ತಲ ರಸ್ತೆಯ ಕಡೆಗಿರುವ ಮಾಳಾಪುರ ಹಾಗೂ ಹಾನಗಲ್ಲ ರಸ್ತೆಯಲ್ಲಿರುವ ಗೌರಾಪುರದ ಬಳಿಯ ಸರ್ಕಾರಿ ಜಾಗವನ್ನು ಪರಿಶೀಲಿಸಿದೆ. ಇದರಲ್ಲಿ ನೆಲೋಗಲ್ಲ ಬಳಿಯ ಜಾಗ ಸಂಪರ್ಕದ ದೃಷ್ಟಿಯಿಂದ ಉತ್ತಮವಾಗಿದ್ದರೂ ಅಲ್ಲಿ ಕಲ್ಲು ಕ್ವಾರಿಗಾಗಿ ಭೂಮಿಯನ್ನು ಅಗೆಯಲಾಗಿದೆ. ಅಲ್ಲದೆ, ಅದು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಎಲ್ಲವನ್ನು ಸಮತಟ್ಟು ಮಾಡಬೇಕಿದೆ. ಇದಕ್ಕೆ ಮತ್ತೆ ಪ್ರತ್ಯೇಕ ಅನುದಾನದ ಅವಶ್ಯಕತೆಯಿದೆ. ಇನ್ನು ಗೌರಾಪುರದ ಬಳಿಯ ಜಾಗ ಸೂಕ್ತವಾಗಿದ್ದರೂ ಸರ್ಕಾರದ ದಾಖಲೆಯ ಪ್ರಕಾರವಿರುವ 56 ಎಕರೆಯ ಜಾಗದಲ್ಲಿ ಕೆಲ ಪ್ರದೇಶ ಅತಿಕ್ರಮಣವಾಗಿ ಸಾಗುವಳಿ ನಡೆಯುತ್ತಿದೆ. ಅವರನ್ನೆಲ್ಲ ಒಕ್ಕಲೆಬ್ಬಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಹೀಗಾಗಿ ಪರ್ಯಾಯ ಜಾಗದ ಹುಡುಕಾಟದಲ್ಲಿ ತೊಡಗಿರುವ ಜಿಲ್ಲಾಡಳಿತಕ್ಕೆ ಅಲ್ಲಿಯೂ ನಾನಾ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ.

    ರಾಷ್ಟ್ರೀಯ ಹೆದ್ದಾರಿ ಕಡೆಗೆ ಬರುವುದೇ ಕಾಲೇಜ್…?

    ಸರ್ಕಾರದ ಯೋಜನೆಗಳು ಜನರಿಗೆ ಅನುಕೂಲ ಕಲ್ಪಿಸುವಂತಿರಬೇಕು. ಮೆಡಿಕಲ್ ಕಾಲೇಜ್ ಕೇವಲ ಹಾವೇರಿ ನಗರಕ್ಕಷ್ಟೇ ಅಲ್ಲ. ಜಿಲ್ಲೆಯ ಎಲ್ಲ ತಾಲೂಕಿನವರಿಗೂ ಅನುಕೂಲ ಕಲ್ಪಿಸಬೇಕು. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಾಗದಲ್ಲಿ ಕಾಲೇಜ್ ಕಟ್ಟಡ ನಿರ್ವಣವಾದರೆ ಅನುಕೂಲ ಎಂಬ ಭಾವನೆಯನ್ನು ವೈದ್ಯಕೀಯ ಸಚಿವ ಡಾ. ಸುಧಾಕರ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ. ಅದಕ್ಕಾಗಿಯೇ ಪರ್ಯಾಯ ಜಾಗದ ಹುಡುಕುವಂತೆ ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ. ಒಂದೊಮ್ಮೆ ನೆಲೋಗಲ್ಲ ಗುಡ್ಡದ ಜಾಗ ಸೂಕ್ತವಾಗದೇ ಇದ್ದರೆ ಹೆದ್ದಾರಿ ಪಕ್ಕದಲ್ಲಿ ಖಾಸಗಿ ಜಮೀನು ಖರೀದಿಸಿ ಕಾಲೇಜ್ ನಿರ್ವಿುಸುವ ಚಿಂತನೆಯೂ ನಡೆದಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

    ಕಟ್ಟಡ ಸುಭದ್ರವಾಗುವುದು ಅನುಮಾನ

    ಸದ್ಯ ಕಾಮಗಾರಿ ಆರಂಭಗೊಂಡಿರುವ ದೇವಗಿರಿ-ಯಲ್ಲಾಪುರ ಗ್ರಾಮದ ಬಳಿಯ ಜಾಗದಲ್ಲಿ ತಳಪಾಯದಲ್ಲಿ ಭೂಮಿ ಅಗೆದಂತೆಲ್ಲ ನೀರಿನ ಬುಗ್ಗೆ ಏಳುತ್ತಿದೆ. ಈ ಸ್ಥಳವು ನಗರದಿಂದ ಆರೇಳು ಕಿಮೀ ದೂರದಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ 478.75 ಕೋಟಿ ರೂ.ಗಳ ವೆಚ್ಚದಲ್ಲಿ 56.10 ಎಕರೆ ಜಾಗದಲ್ಲಿ ಕಾಲೇಜ್ ಕಟ್ಟಡ ನಿರ್ವಣಕ್ಕೆ ಈಗಾಗಲೇ ಸರ್ಕಾರದಿಂದ ಅನುಮತಿಯೂ ದೊರೆತಿದೆ. ಅದರಂತೆ ಮೊದಲ ಹಂತದಲ್ಲಿ 37.23 ಕೋಟಿ ರೂ. ಅನುದಾನವೂ ಬಿಡುಗಡೆಗೊಂಡು ಕಾಮಗಾರಿಯನ್ನು ಕೆಬಿಆರ್ ಇನ್ಪ್ರಾಟೆಕ್ ಕಂಪನಿಯು ಗುತ್ತಿಗೆ ಪಡೆದು ಕಾಮಗಾರಿ ಆರಂಭಿಸಿದೆ. ಆದರೆ, ಕಾಮಗಾರಿ ಸ್ಥಳದಲ್ಲಿ ಅಡಿಪಾಯ ಹಾಕಲು ಭೂಮಿಯನ್ನು ಅಗೆದಂತೆಲ್ಲ ನೀರು ಏಳತೊಡಗಿವೆ. ಈ ಜಾಗದಲ್ಲಿ ಮೊದಲಿನಿಂದಲೂ ನೀರು ನಿಲ್ಲುತ್ತ ಬಂದಿದ್ದು, ಕಟ್ಟಡವು ಸುಭದ್ರವಾಗುವ ಅನುಮಾನಗಳಿವೆ. ಆದ್ದರಿಂದ ಇಂತಹ ಜಾಗದಲ್ಲಿ ಮೆಡಿಕಲ್ ಕಾಲೇಜ್ ನಿರ್ವಿುಸುವುದು ಸರಿಯಲ್ಲ ಎಂಬ ಕೂಗು ಕೇಳಿಬರುತ್ತಿದೆ.

    ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಹಾನಗಲ್ಲ ಹಾಗೂ ದೇವಗಿರಿ ಸೇತುವೆ ಬಳಿಯಲ್ಲಿ ರೈತರು 50ರಿಂದ 60 ಎಕರೆ ಜಮೀನು ನೀಡಲು ಸಿದ್ಧರಿದ್ದಾರೆ. ಇದೇ ಅನುದಾನದ ಜೊತೆಗೆ ಇನ್ನಷ್ಟು ಸರ್ಕಾರದಿಂದ ಅನುದಾನ ತಂದು ಜಮೀನು ಖರೀದಿಸಿ ಅಲ್ಲಿಯೇ ಕಾಲೇಜ್ ನಿರ್ವಿುಸಿದರೆ ಸೂಕ್ತ ಎಂಬುದು ನನ್ನ ಅಭಿಪ್ರಾಯ.
    | ಸಂಜೀವಕುಮಾರ ನೀರಲಗಿ, ನಗರಸಭೆ ಅಧ್ಯಕ್ಷ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts