More

    ದೇಶದ ಮೊದಲ ಸೀಪ್ಲೇನ್​ಗೆ ಪ್ರಧಾನಿ ಮೋದಿ ಚಾಲನೆ

    ಗಾಂಧಿನಗರ: ರಾಷ್ಟ್ರೀಯ ಏಕತಾ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ದೇಶದ ಮೊದಲ ಸೀಪ್ಲೇನ್ ಸೇವೆಗೆ ಶನಿವಾರ ಚಾಲನೆ ನೀಡಿದ್ದಾರೆ. ಏಕತಾ ಪ್ರತಿಮೆ ಸಮೀಪದ ಕೆವಾಡಿಯಾ ಮತ್ತು ಸಬರಮತಿ ನಡುವೆ ಈ ವಿಮಾನ ಸಂಚರಿಸಲಿದೆ. ಡಬಲ್ ಇಂಜಿನ್​ನ ಈ ಸೀಪ್ಲೇನ್​ನಲ್ಲಿ ಮೋದಿ, ಕೆವಾಡಿಯಾದಿಂದ ಸಬರಮತಿಗೆ ಪ್ರಯಾಣಿಸಿದರು. ಇದಕ್ಕೂ ಮುನ್ನ ಸರ್ದಾರ್ ಪಟೇಲರ 182 ಮೀಟರ್ ಎತ್ತರದ ಬೃಹತ್ ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ನಮಿಸಿದರು.

    ಕೆವಾಡಿಯಾ ಮತ್ತು ಸಬರಮತಿ ನಡುವೆ ಸುಮಾರು 200 ಕಿ.ಮೀ ಅಂತರವಿದ್ದು, ರಸ್ತೆ ಮೂಲಕ ಈ ದೂರವನ್ನು ಕ್ರಮಿಸಲು ಕನಿಷ್ಠ 2 ತಾಸು ಬೇಕಾಗುತ್ತದೆ. ಸೀಪ್ಲೇನ್ ಸೇವೆಯಿಂದ ಈ ಅಂತರ 45 ನಿಮಿಷಗಳಿಗೆ ತಗ್ಗಲಿದೆ. 19 ಆಸನಗಳ ಸೀಪ್ಲೇನ್ ಪ್ರಯಾಣಕ್ಕೆ ಉಡಾನ್ ಯೋಜನೆಯಡಿ 1,500 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ಕೆವಾಡಿಯಾದಲ್ಲಿ ವಿಮಾನ ನಿಲ್ದಾಣವಿಲ್ಲವಾದರೂ, ಸರ್ದಾರ್ ಸರೋವರ ಅಣೆಕಟ್ಟಿನಲ್ಲಿ ನೀರು ವರ್ಷದ ಬಹುಕಾಲ ಇರುವುದರಿಂದ ಸೀಪ್ಲೇನ್ ವ್ಯವಸ್ಥೆ ಪ್ರಾರಂಭಿಸಲಾಗಿದೆ. ಅಣೆಕಟ್ಟಿನ ಪಾಂಡ್-3 ಬಳಿ ಏರೋಡ್ರೋಮ್ ಸ್ಥಾಪಿಸಲಾಗಿದೆ. ಸೀಪ್ಲೇನ್​ನ ಸಂಪೂರ್ಣ ನಿರ್ವಹಣೆ ಸ್ಪೈಸ್​ಜೆಟ್​ನ ಒಡೆತನದಲ್ಲಿದ್ದು, ಪ್ರತಿದಿನ ಎರಡು ವಿಮಾನಗಳು ಸಂಚರಿಸಲಿವೆ. ಟಿಕೆಟ್ ಬುಕಿಂಗ್ ಅ.30ರಿಂದ www.spiceshuttle.com ವೆಬ್​ಸೈಟ್​ನಲ್ಲಿ ಲಭ್ಯವಿದೆ.

    ಮಾಜಿ ಉಪ ಪ್ರಧಾನಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನಾಚರಣೆ ನಿಮಿತ್ತ ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಆಯುರ್ವೆದ ಗಿಡ ಮೂಲಿಕೆಗಳ ಬಗ್ಗೆ ಅರಿವು ಮೂಡಿಸಲು 17 ಎಕರೆ ಜಾಗದಲ್ಲಿ ನಿರ್ವಿುಸಲಾಗಿರುವ ಆರೋಗ್ಯ ವನ ಸೇರಿ ಹಲವು ಯೋಜನೆಗಳನ್ನು ಮೋದಿ ಉದ್ಘಾಟಿಸಿದ್ದರು. ಜಂಗಲ್ ಸಫಾರಿ ಪಾರ್ಕ್, ಏಕ್ತಾ ಮಾಲ್, ಬೋಟ್​ರೈಡ್, ಮಕ್ಕಳ ನ್ಯೂಟ್ರಿಷನ್ ಪಾರ್ಕ್ ಸೇರಿ ಅನೇಕ ಯೋಜನೆಗಳನ್ನು ಕೆವಾಡಿಯಾದಲ್ಲಿ ಪ್ರಾರಂಭಿಸಲಾಗಿದೆ.

    ಸೀಪ್ಲೇನ್ ವೈಶಿಷ್ಟ್ಯ: ಕೆವಾಡಿಯಾ- ಸಬರಮತಿ ನದಿ ನಡುವೆ ಸಂಚಾರ, 200 ಕಿ.ಮೀ. ಅಂತರ 45 ನಿಮಿಷದಲ್ಲಿ ಪ್ರಯಾಣ, 19 ಆಸನ ವ್ಯವಸ್ಥೆ, ವಿಮಾನದ ತೂಕ 3,377 ಕೆ.ಜಿ., ತಲಾ -1500 ರೂ. ಟಿಕೆಟ್ ದರ, ಇಂಧನ ಸಾಮರ್ಥ್ಯ 1419 ಲೀಟರ್, 5670 ಕೆ.ಜಿ. ತೂಕ ತಡೆದುಕೊಳ್ಳುವ ಸಾಮರ್ಥ್ಯ.

    ದೇಶದ ಮೊದಲ ಸೀಪ್ಲೇನ್​ಗೆ ಪ್ರಧಾನಿ ಮೋದಿ ಚಾಲನೆಪುಲ್ವಾಮಾ ದಾಳಿ ನೆನಪು: ಕೇಂದ್ರ ಸಶಸ್ತ್ರ ಪಡೆ ಮತ್ತು ಗುಜರಾತ್ ಪೊಲೀಸರ ಪರೇಡ್ ವೀಕ್ಷಣೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಪುಲ್ವಾಮಾ ದಾಳಿ ಕುರಿತು ವಿಪಕ್ಷಗಳು ಮಾಡಿದ್ದ ಆರೋಪಗಳ ಬಗ್ಗೆ ತೀವ್ರ ಕಿಡಿಕಾರಿದರು. ‘ಅಧಿಕಾರಿಗಳ ಪರೇಡ್ ನೋಡುವಾಗ ನನ್ನ ಮನಸ್ಸಿನಲ್ಲಿ ಪುಲ್ವಾಮಾ ದಾಳಿಯ ಚಿತ್ರ ಮೂಡಿತು. ಆ ಘಟನೆಯನ್ನು ಎಂದಿಗೂ ಮರೆಯಲಾಗುವುದಿಲ್ಲ. ಆದರೆ ಅಂತಹ ಪರಿಸ್ಥಿತಿಯಲ್ಲಿ ಕೆಲವರು ದುಃಖಿತರಾಗಿರಲಿಲ್ಲ, ಸ್ವಾರ್ಥದ ರಾಜಕೀಯ ಲಾಭ ಹುಡುಕುತ್ತಿದ್ದರು. ಪುಲ್ವಾಮಾ ದಾಳಿ ಬಗ್ಗೆ ಪಾಕಿಸ್ತಾನ ಸಂಸತ್​ನಲ್ಲಿ ಸತ್ಯ ಹೊರಬಿದ್ದಿದ್ದು, ಇದರಿಂದ ನಮ್ಮ ವೀರ ಯೋಧರ ತ್ಯಾಗವನ್ನು ಪ್ರಶ್ನಿಸಿದವರ ನಿಜವಾದ ಮುಖ ಬಹಿರಂಗವಾಗಿದೆ’ ಎಂದು ಮೋದಿ ಹೇಳಿದರು.

    ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸುವುದು ಸರ್ದಾರ್ ಪಟೇಲರ ಕನಸಾಗಿತ್ತು. ಇಂದು ಅದು ಈಡೇರಿದೆ. ರಾಮಮಂದಿರದ ನಿರ್ವಣವನ್ನು ದೇಶ ನೋಡುತ್ತಿದೆ. ಕಾಶ್ಮೀರ ಈಗ ಅಭಿವೃದ್ಧಿಯ ಹಾದಿಯಲ್ಲಿದೆ. ಭಯೋತ್ಪಾದನೆ ವಿರುದ್ಧ ವಿಶ್ವದ ಎಲ್ಲ ರಾಷ್ಟ್ರಗಳೂ ಒಂದಾಗಬೇಕಿದೆ ಎಂದರು.

    ಗಣ್ಯರಿಂದ ಪಟೇಲರಿಗೆ ನಮನ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 145ನೇ ಜನ್ಮ ದಿನಾಚರಣೆ ನಿಮಿತ್ತ ರಾಷ್ಟ್ರಪತಿ ರಾಮನಾಥ ಕೋವಿಂದ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಗೃಹ ಸಚಿವ ಅಮಿತ್ ಷಾ ಸೇರಿ ದೇಶದ ಅನೇಕ ಗಣ್ಯರು ನಮನ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts