More

    ಕಡಲಲ್ಲಿ ಮೀನು ಆಕರ್ಷಕ ದಿಬ್ಬ; ದಡದಲ್ಲಿ ಹಸಿರು ಕವಚ- ಸಮುದ್ರ ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ, ಮತ್ಸ್ಯಸಂತತಿ ವೃದ್ಧಿ ಉದ್ದೇಶ

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಕಡಲ ತೀರದ ಜನರನ್ನು ದೀರ್ಘಕಾಲದಿಂದ ಕಾಡುತ್ತಿರುವ ಸಮಸ್ಯೆಗಳು ಅಂದರೆ ಮಳೆಗಾಲದಲ್ಲಿ ತೀವ್ರವಾಗಿ ಬಾಧಿಸುವ ಕಡಲ್ಕೊರೆತ ಹಾಗೂ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿರುವ ಮತ್ಸೃ ಸಂತತಿ.


    ಸಮುದ್ರ ದಡದಿಂದ ನಿರ್ದಿಷ್ಟ ದೂರ ನೀರಿನಲ್ಲಿ ಮೀನುಗಳನ್ನು ಆಕರ್ಷಿಸುವ ಕೃತಕ ದಿಬ್ಬಗಳನ್ನು (ಫಿಶ್ ಅಗ್ರಿಗೇಟಿಂಗ್ ಡಿವೈಸ್) ನಿರ್ಮಿಸುವ ಯೋಜನೆಯೊಂದನ್ನು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ದಿಬ್ಬಗಳಲ್ಲಿ ಆಶ್ರಯ ಪಡೆದು ಮೀನುಗಳು ವೇಗವಾಗಿ ಸಂತಾನ ಅಭಿವೃದ್ಧಿ ಪಡೆಯಲು ಅವಕಾಶ ಒದಗಿಸುವುದು ಯೋಜನೆಯ ಉದ್ದೇಶ. ಪ್ರಧಾನಮಂತ್ರಿಯವರ ಮತ್ಸೃ ಸಂಪದ ಯೋಜನೆಯಡಿ ಈ ಯೋಜನೆ ಅನುಷ್ಠಾನಕ್ಕೆ ಆರ್ಥಿಕ ನೆರವು ದೊರೆಯಲಿದೆ.


    ಸಮುದ್ರದ ನೀರಿನ ತೆರೆ ದಡ ತಲುಪುವ ಮೊದಲು ನಿರ್ದಿಷ್ಟ ಒಂದು ಕಡೆ ನೀರಿನ ನಡುವೆಯೇ ಹೊಡೆಯುತ್ತದೆ. ಇಂಥ ವೇವ್ ಬ್ರೇಕಿಂಗ್ ಜೋನ್ ಗುರುತಿಸಿ ಇದಕ್ಕೂ ಸ್ವಲ್ಪ ಹಿಂದೆ ಫಿಶ್ ಅಗ್ರಿಗೇಟಿಂಗ್ ಡಿವೈಸ್ (ಎಫ್‌ಎಡಿ) ನಿರ್ಮಿಸಬೇಕು. ಇದರಿಂದ ಕಡಲ ಅಲೆಗಳ ವೇಗ ದಡ ತಲುಪುವ ಮೊದಲೇ ಕಡಿಮೆಯಾಗುತ್ತದೆ.


    ಸಮುದ್ರ ತೀರದ ಮರಳಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿರುವ ಬಳ್ಳಿ, ಕುರುಚಲು ಗಿಡ, ಮರಗಳು ಭೂಮಿಯ ಕಡೆಗೆ ಏರುಗತಿಯಲ್ಲಿ ವೈಜ್ಞಾನಿಕ ರೀತಿ ಬೆಳೆಸಬೇಕು. ಜಂಟಿ ಕಾರ್ಯಕ್ರಮಗಳು ಜತೆಯಾಗಿ ಅನುಷ್ಠಾನಗೊಳಿಸುವುದರಿಂದ ಕಡಿಮೆ ವೆಚ್ಚದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸಾಧ್ಯ ಎನ್ನುವುದು ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಡಾ.ದಿನೇಶ್ ಕುಮಾರ್ ಅವರ ದೃಢ ವಿಶ್ವಾಸ. ಮುಖ್ಯಮಂತ್ರಿಯವರ ಸೂಚನೆ ಹಿನ್ನೆಲೆಯಲ್ಲಿ ಈ ಬಗ್ಗೆ ಸರ್ಕಾರಕ್ಕೆ ಸಲ್ಲಿಸಲು ವಿಸ್ತೃತವಾದ ಯೋಜನಾ ವರದಿಯೊಂದನ್ನು ಅವರು ಸಿದ್ಧಪಡಿಸಿದ್ದಾರೆ.


    ಕಡಲ ತೀರದಲ್ಲಿ ರಕ್ಷಣಾ ಕವಚವಾಗಿ ಭೂಮಿಯ ಕಡೆಗೆ ಕ್ರಮವಾಗಿ ಐಫೋಮಿಯಾ, ಸ್ಟೈನಿಫ್ಲೆಕ್ಸ್, ನಂತರ ಸ್ಕಾೃವಿಯೋಲ, ಪ್ರಮ್ನಾ, ಕ್ಲೀರೋ, ವೈಟೆಕ್ಸ್‌ಡೆಂಡ್ರಂ, ನೋನಿ, ಬುಗರಿ ಮರ, ಕ್ಯಾಲೋಫಿಲ್ಲಂ, ಕೊನೆಯಲ್ಲಿ ಅಲ್ವೇನಿಯಾ ಕ್ಯಾಚುರಿನ್ ಹಾಗೂ ಪೈಕಸ್ ಸಸ್ಯ ಪ್ರಭೇದಗಳನ್ನು ಬೆಳೆಸಬೇಕು. ಈ ಸಸ್ಯ ಪ್ರಭೇದಗಳನ್ನು ಅರಣ್ಯ ಇಲಾಖೆಯ ನರ್ಸರಿಯಲ್ಲೇ ಬೆಳೆಸಬಹುದು ಎನ್ನುತ್ತಾರೆ ತಜ್ಞರು.

    ಇತ್ತೀಚೆಗೆ ಮಂಗಳೂರಿನಲ್ಲಿ ಪ್ರಗತಿ ಪರಿಶೀಲನೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಡಲ ತೀರದಲ್ಲಿ ಹಸಿರು ಕವಚ ರಚಿಸಿ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಚರ್ಚೆಯಲ್ಲಿರುವ ಫಿಶ್ ಅಗ್ರಿಗೇಟಿಂಗ್ ಡಿವೈಸ್ ಮತ್ತು ಕಡಲ ತೀರದ ಹಸಿರು ಕವಚ ಯೋಜನೆ ಜತೆಯಾಗಿ ಅನುಷ್ಠಾನಗೊಳಿಸುವ ಸಾಧ್ಯತೆಗಳಿಗೆ ಮಹತ್ವ ಬಂದಿದೆ. ವರ್ಷಂಪ್ರತಿ ಕಡಲು ತೀರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಕಡಲಿಗೆ ಕಲ್ಲು ಸುರಿಯುವ ಕಾಮಗಾರಿಗಳಿಗೆ ಹೋಲಿಸಿದರೆ ಪ್ರಸ್ತಾವಿತ ಯೋಜನೆ ವೆಚ್ಚ ದುಬಾರಿಯಾಗದು.
    ——-
    * ಎಫ್‌ಎಡಿ ಅಂದರೆ ಏನು?:
    ಫಿಶ್ ಅಗ್ರಿಗೇಟಿಂಗ್ ಡಿವೈಸ್ (ಎಫ್‌ಎಡಿ) ಅಂದರೆ ಕೃತಕ ರೀಫ್. ಕೃತಕ ದಿಬ್ಬಗಳು ಎಂದು ಕೂಡ ಹೇಳಬಹುದು. ದಡದಿಂದ ನಿರ್ದಿಷ್ಟ ದೂರದಲ್ಲಿ ನೀರಿನಲ್ಲಿ ಮುಳುಗಿಸುವ ಸಿಮೆಂಟ್‌ನಿಂದ ನಿರ್ಮಿಸಿದ ತ್ರಿಕೋನ ಆಕೃತಿಯನ್ನು ಹೋಲುವ ರಚನೆಗಳು. ಇದು ಸ್ಥಾನಪಲ್ಲಟ ಆಗದಂತೆ ವೈಜ್ಞಾನಿಕ ರೀತಿಯಲ್ಲಿ ಜೋಡಿಸಲಾಗುತ್ತದೆ.

    — ಕೋಟ್ —
    ಮತ್ಸೃ ಸಂಪತ್ತು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಮುದ್ರ ತೀರದಲ್ಲಿ ಫಿಶ್ ಅಗ್ರಿಗೇಟಿಂಗ್ ಡಿವೈಸ್ ಅಳವಡಿಸುವ ಯೋಜನೆ ಜಾರಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಯೋಜನೆ ಅನುಷಾನ ಕುರಿತು ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ತಜ್ಞರ ಜತೆಯಲ್ಲಿ ಶೀಘ್ರವೇ ಒಂದು ಸಭೆ ನಡೆಯಲಿದೆ.
     ಹರೀಶ್ ಕುಮಾರ್, ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಮಂಗಳೂರು
    …………..

    — ಕೋಟ್ —
    ಸೂಕ್ತ ಸಸ್ಯ ಪ್ರಭೇದಗಳ ಹಸಿರು ಕವಚ ಇರುವ ಕಡಲ ತೀರ ಸುರಕ್ಷಿತವಾಗಿ ಇರುತ್ತದೆ ಎನ್ನುವುದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದೆಯೇ ಇವೆ. ದಡದಿಂದ ನಿರ್ದಿಷ್ಟ ದೂರದಲ್ಲಿ ಕಡಲಿನಲ್ಲಿ ಫಿಶ್ ಅಗ್ರಿಗೇಟಿಂಗ್ ಡಿವೈಸ್ ಜೋಡಣೆ ಹಾಗೂ ಕಡಲ ತೀರದಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಹಸಿರು ಕವಚದಿಂದ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ಮತ್ಸೃ ಸಂತತಿ ವೃದ್ಧಿ ಎರಡು ಉದ್ದೇಶಗಳು ಏಕಕಾಲದಲ್ಲಿ ನೆರವೇರುತ್ತದೆ.
     ಡಾ.ದಿನೇಶ್ ಕುಮಾರ್, ಪ್ರಾದೇಶಿಕ ನಿರ್ದೇಕರು, ಪರಿಸರ ಇಲಾಖೆ, ಮಂಗಳೂರು

    ಕಡಲಲ್ಲಿ ಮೀನು ಆಕರ್ಷಕ ದಿಬ್ಬ; ದಡದಲ್ಲಿ ಹಸಿರು ಕವಚ- ಸಮುದ್ರ ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ, ಮತ್ಸ್ಯಸಂತತಿ ವೃದ್ಧಿ ಉದ್ದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts