More

    ನಿಷೇಧಕ್ಕೆ ಸಾಕ್ಷ್ಯ ಶೋಧ: ಎಸ್​ಡಿಪಿಐ, ಪಿಎಫ್​ಐ, ಕೆಎಫ್​ಡಿ ಕೃತ್ಯದ ದಾಖಲೆಗೆ ಶೋಧ

    ರುದ್ರಣ್ಣ ಹರ್ತಿಕೋಟೆ
    ಬೆಂಗಳೂರು: ರಾಜ್ಯವನ್ನು ಆತಂಕಕ್ಕೆ ತಳ್ಳಿರುವ ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯು ಎಸ್​ಡಿಪಿಐ, ಪಿಎಫ್​ಐ ಹಾಗೂ ಕೆಎಫ್​ಡಿ ಸಂಘಟನೆಗಳನ್ನು ನಿಷೇಧಿಸಬೇಕೆಂಬ ಕೂಗಿಗೆ ಬಲ ನೀಡಿದ್ದರೂ ಇದಕ್ಕೆ ಅಗತ್ಯ ಸಾಕ್ಷ್ಯಗಳ ಸಂಗ್ರಹವಾಗಬೇಕಿದೆ. ಈ ಮುನ್ನವೂ ರಾಜ್ಯದಲ್ಲಿ ನಡೆದಿರುವ ವಿವಿಧ ಘಟನೆಗಳಲ್ಲಿ ಈ ಸಂಘಟನೆಗಳ ಕೈವಾಡವಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಂಗ್ರಹವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಅಗತ್ಯವಾಗಿರುವ ದಾಖಲೆಗಳ ಸಂಗ್ರಹದ ಕೊನೆಯ ಹಂತದ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.

    ಯಾವುದೇ ಸಂಘಟನೆ ನಿಷೇಧಕ್ಕೆ ಶಿಫಾರಸು ಮಾಡುವುದು ದೀರ್ಘ ಪ್ರಕ್ರಿಯೆ. ಮಂಗಳೂರು ಘಟನೆಯ ನಂತರ ಈ ಪ್ರಕ್ರಿಯೆ ಚುರುಕಾಗಿದೆ. ಎಲ್ಲ ದಾಖಲೆ ಸಂಗ್ರಹಿಸಿ ದೇಶದ್ರೋಹಿ ಸಂಘಟನೆಗಳ ಹೆಡೆಮುರಿ ಕಟ್ಟುತ್ತೇವೆ.
    -ಬಸವರಾಜ ಬೊಮ್ಮಾಯಿ
    ಗೃಹ ಸಚಿವ

    ಕರಾವಳಿ, ಬೆಂಗಳೂರಿನಲ್ಲಿ ನಡೆದ ಕೆಲ ಕೊಲೆಗಳಲ್ಲಿ ಎಸ್​ಡಿಪಿಐ ಪಾತ್ರ ಇದೆ ಎಂಬುದು ಸರ್ಕಾರದ ವಾದ. ಆದರೆ ಸಂಗ್ರಹಿಸಿರುವ ಸಾಕ್ಷ್ಯ ಸಾಲುತ್ತಿಲ್ಲ ಎಂದು ಮೂಲಗಳು ಹೇಳುತ್ತವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮುಂಚಿನಿಂದಲೂ ಎಸ್​ಡಿಪಿಐ, ಪಿಎಫ್​ಐ ಹಾಗೂ ಕೆಎಫ್​ಡಿಗಳನ್ನು ನಿಷೇಧಿಸಬೇಕೆಂಬ ಬೇಡಿಕೆ ಇದೆ. ಆದರೆ ಅಗತ್ಯವಾದ ದಾಖಲೆಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಸರ್ಕಾರದ ಮುಂದೆ ಇಲ್ಲ ಎಂಬುದನ್ನು ಉನ್ನತ ಮೂಲಗಳು ಖಚಿತಪಡಿಸಿವೆ. ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಹೋರಾಟದ ಸಂದರ್ಭದಲ್ಲಿನ ಘಟನೆಗಳನ್ನು ಆಧಾರವಾಗಿಟ್ಟು ಈ ಸಂಘಟನೆಗಳ ನಿಷೇಧಕ್ಕೆ ಒತ್ತಡ ಹೆಚ್ಚಾಗಿದೆ. ಆಡಳಿತ ಪಕ್ಷ ಬಿಜೆಪಿಯಲ್ಲೂ ಹೆಚ್ಚಿನ ಒತ್ತಾಯವಿದೆ. ಆದರೆ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ನಿಧಾನಗತಿ ಧೋರಣೆ ಅನುಸರಿಸುತ್ತಿದೆ.

    ಸಂಘಟನೆಗಳ ವಿರುದ್ಧದ ಆರೋಪ

    1 ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರಾವಳಿಯಲ್ಲಿ ನಡೆದಿದ್ದ ಹತ್ಯೆಗಳು

    2 ಬೆಂಗಳೂರಿನಲ್ಲಿ ಆರ್​ಎಸ್​ಎಸ್ ಮುಖಂಡ ರುದ್ರೇಶ್ ಹತ್ಯೆ

    3 ಮಡಿಕೇರಿಯಲ್ಲಿ ಪುಟ್ಟಪ್ಪ ಕೊಲೆ ಪ್ರಕರಣ

    4 ಮೈಸೂರಿನ ಕ್ಯಾತಮಾರನಹಳ್ಳಿ ರಾಜು ಹತ್ಯೆ, ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನ

    5 ಕೊಡಗಿನ ಕುಶಾಲ್​ನಗರದ ಪ್ರವೀಣ್ ಪೂಜಾರಿ ಹತ್ಯೆ

    6 ಬಂಟ್ವಾಳದ ಶರತ್ ಮಡಿವಾಳ ಕೊಲೆ

    7 ಬೆಂಗಳೂರಿನಲ್ಲಿ ಸಿಎಎ ವಿರುದ್ಧ ಹೋರಾಟ

    8 ಪಾದರಾಯನಪುರದಲ್ಲಿ ನಡೆದ ಗಲಭೆ

    9 ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಗಲಭೆ

    10 ಈ ಹಿಂದೆ ನಡೆದಿದ್ದ ಆರ್​ಎಸ್​ಎಸ್ ಕಾರ್ಯಕರ್ತರ ಸರಣಿ ಹತ್ಯೆ

    11 ಏಪ್ರಿಲ್​ನಲ್ಲಿ ಕರೊನಾ ವಾರಿಯರ್​ಗಳಾದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ

    ದಾಖಲೆ ಏಕೆ ಅಗತ್ಯ?: ಯಾವುದೇ ಸಂಘಟನೆಯನ್ನು ನಿಷೇಧಿಸಬೇಕಾದಲ್ಲಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಹೀಗೆಮಾಡಲು ಸರ್ಕಾರದ ಬಳಿ ಗಟ್ಟಿ ದಾಖಲೆಗಳು ಬೇಕಾಗುತ್ತದೆ. ಕೇಂದ್ರ ಗೃಹ ಸಚಿವಾಲಯ ನಿಷೇಧ ನಿರ್ಧಾರ ಕೈಗೊಳ್ಳಲು ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯ್ದೆ 1967 ಹಾಗೂ ಕ್ರಿಮಿನಲ್ ಕಾಯ್ದೆ ಬಳಸುತ್ತದೆ. ಆ ಕಾಯ್ದೆಯಲ್ಲಿನ ಅಂಶಗಳಿಗೆ ಪೂರಕ ದಾಖಲೆಗಳು ಇಲ್ಲ ಎಂದಾದಲ್ಲಿ ಪ್ರಸ್ತಾವನೆ ತಿರಸ್ಕೃತವಾಗುತ್ತದೆ. ಒಂದು ವೇಳೆ ಕೇಂದ್ರ ಸರ್ಕಾರ ಒಪ್ಪಿದರೂ ನ್ಯಾಯಾಲಯದಲ್ಲಿ ತಿರಸ್ಕೃತವಾಗುವ ಸಾಧ್ಯತೆಗಳಿರುತ್ತದೆ. ಆದ್ದರಿಂದಲೇ ರಾಜ್ಯ ಸರ್ಕಾರ ದುಡುಕದೆ ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದೆ.

    ಪ್ರತ್ಯೇಕ ದಾಖಲೆ ಬೇಕು: ಎಸ್​ಡಿಪಿಐ 10 ವರ್ಷದ ಹಿಂದೆ ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿರುವ ರಾಜಕೀಯ ಪಕ್ಷ. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ 20ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಪಿಎಫ್​ಐ ಹಾಗೂ ಕೆಎಫ್​ಡಿ ರಾಜಕೀಯೇತರ ಸಂಘಟನೆಗಳಾಗಿವೆ. ರಾಜಕೀಯ ಹಾಗೂ ರಾಜಕೀಯೇತರ ಸಂಘಟನೆಗಳಿಗೆ ಪ್ರತ್ಯೇಕವಾದ ದಾಖಲೆ ಸಂಗ್ರಹಿಸಬೇಕಾಗುತ್ತದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.

    ವಿಚಾರಣೆ ಅವಧಿ ವಿಸ್ತರಣೆ: ಕಳೆದ ಡಿಸೆಂಬರ್​ನಲ್ಲಿ ಸಿಎಎ ವಿರುದ್ಧ ಮಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿಯನ್ನು ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಜಿಲ್ಲಾಧಿಕಾರಿ ಏಪ್ರಿಲ್​ನಲ್ಲೇ ವರದಿ ಸಲ್ಲಿಸಬೇಕಾಗಿತ್ತು. ಈಗ ಮತ್ತೆ ಅವಧಿ ವಿಸ್ತರಣೆ ಮಾಡಲಾಗಿದೆ. ಕರೊನಾ ಹಾಗೂ ಇತರೆ ಕಾರಣದಿಂದ ಪೂರ್ಣ ಪ್ರಮಾಣದಲ್ಲಿ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಆದ್ದರಿಂದ ಅವಧಿ ವಿಸ್ತರಣೆ ಮಾಡಲಾಗಿದೆ ಎಂಬುದು ಸರ್ಕಾರದ ವಾದ. ಆದರೆ ವಾಸ್ತವವಾಗಿ ಇಂತಹ ಘಟನೆಗಳ ಸಂದರ್ಭದಲ್ಲಿ ಅವಧಿ ವಿಸ್ತರಣೆ ಮಾಮೂಲು. ಅವಧಿ ವಿಸ್ತರಣೆ ಮಾಡುತ್ತ ಪ್ರಕರಣಗಳನ್ನು ಮುಚ್ಚಿಹಾಕುವುದು ಎಲ್ಲ ಸರ್ಕಾರಗಳಲ್ಲಿಯೂ ನಡೆದಿದೆ ಎಂದು ಹೇಳಲಾಗುತ್ತಿದೆ.

    ಏನೇನು ಸಾಕ್ಷ್ಯಗಳಿರಬೇಕು?

    *ಯಾವ ಸಂಘಟನೆಯ ಸದಸ್ಯರು ಎಷ್ಟು ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ? ಸದಸ್ಯರೆಂಬುದಕ್ಕೆ ಸಾಕ್ಷಿಗಳೇನು?

    *ಎಲ್ಲೆಲ್ಲಿ ಭಯೋತ್ಪಾದನೆ ಚಟುವಟಿಕೆಗಳಲ್ಲಿ ಭಾಗಿ?

    *ಕಾನೂನುಬಾಹಿರ ಚಟುವಟಿಕೆಗಳಿಗೆ ದೇಣಿಗೆ ನೀಡಲಾಗುತ್ತಿದೆಯೇ?

    *ದೇಶದ್ರೋಹಿ ಪ್ರಕಟಣೆಗಳನ್ನು ಹೊರತಂದಿದೆಯೇ?

    *ಅಕ್ರಮ ಚಟುವಟಿಕೆಗಳನ್ನು ಎಲ್ಲಿ, ಹೇಗೆ ನಡೆಸಿದೆ?

    *ಸಂವಿಧಾನಬಾಹಿರ ಹಾಗೂ ದೇಶದ್ರೋಹಿ ಚಟುವಟಿಕೆಗಳನ್ನು ನಡೆಸಿದೆಯೆ?

    *ಕೋಮು ಭಾವನೆ ಕೆರಳಿಸುವಂತಹ ಚಟುವಟಿಕೆಗಳನ್ನು ನಡೆಸಿರುವ ಬಗ್ಗೆ ಸಾಕ್ಷ್ಯವೇನು?

    ಈಗ ತನಿಖಾಧಿಕಾರಿ ನೇಮಕ: ಬೆಂಗಳೂರು ಡಿ.ಜೆ. ಹಳ್ಳಿ ಘಟನೆಗೆ ಸಂಬಂಧಿಸಿದಂತೆ ತನಿಖಾಧಿಕಾರಿ ನೇಮಕವಾಗಿದ್ದು ಅವರಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಮುಂದೆ ಅವರ ಅವಧಿಯೂ ಒಂದೆರಡು ಬಾರಿ ವಿಸ್ತರಣೆಯಾಗುತ್ತದೆ. ಅಲ್ಲಿಗೆ ಪ್ರಕರಣದ ತೀವ್ರತೆ ಕಡಿಮೆಯಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಮೈಸೂರಿನ ಶಾಸಕ ತನ್ವಿರ್ ಸೇಠ್ ಹತ್ಯೆ ಯತ್ನದ ಬಗ್ಗೆ ಪೊಲೀಸ್ ಎಫ್​ಐಆರ್ ಆಗಿದೆ. ಮಂಗಳೂರು ಮತ್ತು ಬೆಂಗಳೂರು ಘಟನೆಗೆ ಸಂಬಂಧಿಸಿ ಇಬ್ಬರು ಜಿಲ್ಲಾಧಿಕಾರಿಗಳು ವಿಚಾರಣೆ ಪೂರ್ಣ ಮಾಡಿ ಸರ್ಕಾರಕ್ಕೆ ವರದಿ ನೀಡಬೇಕು. ಸೂಕ್ತ ಸಾಕ್ಷ್ಯಗಳನ್ನು ಪೊಲೀಸರು ಒದಗಿಸಬೇಕಾಗುತ್ತದೆ. ಆ ನಂತರವಷ್ಟೇ ಗೃಹ ಇಲಾಖೆ ಸಚಿವ ಸಂಪುಟದ ಮುಂದೆ ಮಂಡಿಸಿ ಕೇಂದ್ರಕ್ಕೆ ಶಿಫಾರಸು ಮಾಡುವ ನಿರ್ಧಾರ ಮಾಡಬಹುದು.

    ಜಾರ್ಖಂಡ್​ನಲ್ಲಿ ಕೋರ್ಟ್ ತಡೆ: ಜಾರ್ಖಂಡ್ ಸರ್ಕಾರ ಪಿಎಫ್​ಐ ಸಂಘಟನೆಯನ್ನು ನಿಷೇಧಿಸಿತ್ತು. ಆದರೆ ಅಲ್ಲಿನ ಹೈಕೋರ್ಟ್ ಕ್ರಿಮಿನಲ್ ಕಾಯ್ದೆಯ ಸೆಕ್ಷನ್ 16ರ ಪ್ರಕಾರ ನಿಷೇಧಕ್ಕೆ ಸೂಕ್ತ ಸಾಕ್ಷಿಗಳಿಲ್ಲ ಎಂದು ರದ್ದು ಮಾಡಿತ್ತು. ಆ ನಂತರ ಮತ್ತೆ ಆದೇಶ ಮಾಡಲಾಗಿತ್ತು. ಪಿಎಫ್​ಐ ನಿಷೇಧಕ್ಕೆ ಉತ್ತರ ಪ್ರದೇಶ ಸರ್ಕಾರ ಜನವರಿಯಲ್ಲಿಯೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರೆ ಇನ್ನೂ ನಿಷೇಧ ಮಾಡಿಲ್ಲ.

    ಮೊದಲು ಹೇಳಿದ್ದು ಯಾವಾಗ: ಎಸ್​ಡಿಪಿಐ ಮತ್ತು ಪಿಎಫ್​ಐ ನಿಷೇಧಕ್ಕೆ ಜನವರಿಯಿಂದಲೇ ಅನೇಕ ಸಚಿವರು ಒಲವು ತೋರಿಸಿದ್ದಾರೆ. ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಜನವರಿಯಲ್ಲಿ ಸಿಎಂ ನೇತೃತ್ವದಲ್ಲಿ ದೆಹಲಿಗೆ ನಿಯೋಗ ಹೋಗಿ ಗೃಹ ಸಚಿವರನ್ನು ಭೇಟಿ ಮಾಡುವುದಾಗಿ ಹೇಳಿದ್ದರು.

    ರಾಜ್ಯಕ್ಕೆ ಸೀಮಿತ: ಸಾಕ್ಷ್ಯಗಳು ಬಲವಾಗಿದ್ದಲ್ಲಿ ಕೇಂದ್ರ ಗೃಹ ಸಚಿವಾಲಯ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಪ್ರಕಾರ ರಾಜ್ಯಕ್ಕೆ ಸೀಮಿತವಾಗಿ ನಿಷೇಧ ಮಾಡಬಹುದು.

    42 ಸಂಘಟನೆ ನಿಷೇಧ: ಕೇಂದ್ರ ಗೃಹ ಸಚಿವಾಲಯ ಈವರೆಗೆ ಖಲಿಸ್ತಾನ್ ಕಮಾಂಡೋ ಫೋರ್ಸ್, ಇಂಟರ್​ನ್ಯಾಷನಲ್ ಸಿಖ್ ಫೆಡರೇಷನ್, ಎಲ್​ಟಿಟಿಇ, ಹಿಜ್ಬುಲ್ ಮುಜಾಹಿದೀನ್, ಸಿಪಿಐಎಂಎಲ್, ಮಾವೋಯಿಸ್ಟ್ ಸೆಂಟರ್, ಟಿಎನ್​ಎಲ್​ಎ, ಜಮಾತೆ ಉಲ್ ಮುಜಾಹಿದೀನ್ ಸೇರಿದಂತೆ 42 ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಿದೆ. ಆದರೆ ನಿಷೇಧವಾದ ಸಂಸ್ಥೆಗಳು ಬೇರೆ ಹೆಸರಲ್ಲಿ ಮರುಹುಟ್ಟು ಪಡೆಯುವುದೂ ಇದೆ.

    ಪಿಎಫ್​ಐ ನಿಷೇಧಕ್ಕೆ 2 ಬಾರಿ ಮನವಿ: ಪಿಎಫ್​ಐ ನಿಷೇಧಕ್ಕಾಗಿ ರಾಜ್ಯ ಸರ್ಕಾರ, ಕೇಂದ್ರ ಗೃಹ ಇಲಾಖೆಗೆ ಕಳೆದ 1 ವರ್ಷದಲ್ಲಿ 2 ಬಾರಿ ಮನವಿ ಮಾಡಿದೆ. ಉತ್ತರ ಪ್ರದೇಶ, ರಾಜಸ್ಥಾನ, ಕೇರಳ, ಅಸ್ಸಾಂ ಸರ್ಕಾರಗಳೂ ಕೇಂದ್ರಕ್ಕೆ ಮನವಿ ಸಲ್ಲಿಸಿವೆ.

    ಈ ಬೈಕ್​ಗೆ ಪೆಟ್ರೋಲ್ ಬೇಡ, ನೀರಿದ್ದರೆ ಸಾಕಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts