ದೇವದುರ್ಗ: ಪವಾಡಗಳು ಮನರಂಜನೆ ಉದ್ದೇಶ ಹೊಂದಿದ್ದು, ಅದರಲ್ಲಿ ವಿಶೇಷ ಇರುವುದಿಲ್ಲ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ ಹೇಳಿದರು.
ನಾಗಡದಿನ್ನಿ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಯಚೂರು ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಆಯೋಜಿಸಿದ್ದ ಪವಾಡ ಬಯಲು ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ವಿದ್ಯಾರ್ಥಿಗಳು ವಿಜ್ಞಾನದ ವಿಸ್ಮಯಗಳನ್ನು ಅಧ್ಯಯನ ಮಾಡಬೇಕು. ಪವಾಡದ ಹಿಂದೆ ವಿಜ್ಞಾನವಿದ್ದು, ಈ ಬಗ್ಗೆ ಶಿಕ್ಷಕರಿಂದ ತಿಳಿದುಕೊಳ್ಳಬೇಕು ಎಂದರು.
ಭೌತವಿಜ್ಞಾನಿ ಕೆ.ಎಂ.ರವಿಪ್ರಸಾದ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಆಸಕ್ತಿ ಮೂಡಿಸಲು ಪವಾಡ ಬಯಲು ಕಾರ್ಯಕ್ರಮ ಆಯೋಜಿಸಲಾಗಿದೆ. ಪವಾಡದಲ್ಲಿ ಯಾವುದೇ ದೈವಶಕ್ತಿ ಇರುವುದಿಲ್ಲ. ವಿಜ್ಞಾನದ ರಾಸಾಯನಿಕ ಕ್ರಿಯೆಯಲ್ಲಿ ನಡೆಯುವ ಸಾಮಾನ್ಯ ಬದಲಾವಣೆಯನ್ನು ಪ್ರವಾಡದಲ್ಲಿ ದೊಡ್ಡದಾಗಿ ಬಿಂಬಿಸಲಾಗುತ್ತದೆ. ತಂತ್ರಜ್ಞಾನ ಯುಗದಲ್ಲಿ ಮಾಟ-ಮಂತ್ರಗಳಿಗೆ ಮರಳು ಆಗದೆ ಅದರ ಹಿಂದಿನ ವಿಜ್ಞಾನ ಅರಿಯಬೇಕು ಎಂದರು.