More

    ಸಂಭ್ರಮಕ್ಕೆ ಸಾಕ್ಷಿಯಾದ ಜಿಲ್ಲೆಯ ಜ್ಞಾನದೇಗುಲಗಳು

    ತಳಿರು, ತೋರಣಗಳ ಸಿಂಗಾರ ಮದುವಣಗಿತ್ತಿಯಂತೆ ಶಾಲೆಗಳ ಅಲಂಕಾರ ವಿದ್ಯಾರ್ಥಿಗಳಿಗೆ ದೊರೆತ ಭವ್ಯ ಸ್ವಾಗತಕ್ಕೆ
    ಚಿತ್ರದುರ್ಗ: ಜಿಲ್ಲೆಯ ಸರ್ಕಾರಿ ಸೇರಿ ಅನೇಕ ಶಾಲೆಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದವು. ಅಕ್ಕರೆಯ ಮುದ್ದು ಮಕ್ಕಳನ್ನು ಭವ್ಯವಾಗಿ ಸ್ವಾಗತಿಸಲು ಆಯಾ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ತುದಿಗಾಲಲ್ಲಿ ಸನ್ನಧರಾಗಿದ್ದರು. ಪುಷ್ಪ ಮಳೆಗೈದು ವಿದ್ಯಾರ್ಥಿಗಳನ್ನು ಆವರಣದೊಳಗೆ ಬರಮಾಡಿಕೊಂಡಾಗ ಸಂತಸಕ್ಕೆ ಪಾರವೇ ಇರಲಿಲ್ಲ…

    ಬುಧವಾರ ಅಧಿಕೃತವಾಗಿ ಆರಂಭವಾದ ಶಾಲೆಗಳಿಗೆ ಪುಟಾಣಿಗಳು, ವಿದ್ಯಾರ್ಥಿಗಳು ಹೆಗಲ ಮೇಲೆ ಚೀಲ (ಬ್ಯಾಗ್) ಏರಿಕೊಂಡು ಮೊದಲ ದಿನ ಅಜ್ಜ-ಅಜ್ಜಿ, ತಂದೆ-ತಾಯಿ, ಪಾಲಕರ ಜತೆಗೆ ಬಂದಿಳಿದಾಗ ಕಂಡ ದೃಶ್ಯವಿದು.

    ಸತತ ಮೂರ‌್ನಾಲ್ಕು ದಿನಗಳಿಂದಲೂ ಶಾಲೆಗಳ ಸ್ವಚ್ಛತೆಯಲ್ಲಿ ತೊಡಗಿದ್ದ ಸಿಬ್ಬಂದಿ ತಳಿರು, ತೋರಣ, ಪುಷ್ಪಗಳಿಂದ ಅತ್ಯಾಕರ್ಷವಾಗಿ ವಿದ್ಯಾರ್ಥಿಗಳ ಗಮನ ಸೆಳೆಯುವಂತೆ ಅಲಂಕರಿಸಿ ಆರಂಭೋತ್ಸವ ಕಾರ್ಯಕ್ಕೆ ಸಾಥ್ ನೀಡಿದರು.

    ರಜೆಯನ್ನು ಸಂತೋಷದಿಂದಲೇ ಕಳೆದ ವಿದ್ಯಾರ್ಥಿ ಸಮೂಹ ಶಾಲೆಗಳಿಗೆ ಬರುವಲ್ಲೂ ಉತ್ಸಾಹ ತೋರಿದ್ದು, ಹಲವೆಡೆ ಕಂಡು ಬಂತು. ಜ್ಞಾನದೇಗುಲಗಳ ಮೆಟ್ಟಿಲೇರುವಾಗ ಪ್ರತಿಯೊಬ್ಬರ ಮೊಗದಲ್ಲೂ ಮಂದಹಾರ ಅರಳಿತ್ತು.

    ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲೂ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಸ್ವಾಗತ ಕಮಾನು ಹಾಕಲಾಗಿತ್ತು. ಗ್ರಾಮೀಣ ಸೊಗಡಿನ ಎತ್ತಿನಗಾಡಿಗಳಿಂದಲೂ ಮೆರವಣಿಗೆ ನಡೆಸಿ ಮಕ್ಕಳನ್ನು ಅಧಿಕಾರಿಗಳು ಕರೆತಂದರು.

    ಜಿಲೇಬಿ, ಮೈಸೂರ್ ಪಾಕ್ ಸೇರಿ ಇತರೆ ಸಿಹಿ ಹಂಚುವ, ಕೈಗಳಿಗೆ ಗುಲಾಬಿ ಹೂ ನೀಡಿ ಶಾಲೆಗಳ ಕುರಿತು ಇನ್ನಷ್ಟು ಒಲವು ಮೂಡುವಂತೆ ಮಾಡಿದ್ದು, ವಿಶೇಷವಾಗಿತ್ತು. ಮಧ್ಯಾಹ್ನದ ಬಿಸಿಯೂಟದ ಜತೆ ಉಗ್ಗಿ ಪಾಯಸ ನಾಲಿಗೆಯ ರುಚಿಯನ್ನು ಹೆಚ್ಚಿಸಿತು.

    ಇದೇ ವೇಳೆ 2023-24ನೇ ಸಾಲಿಗೆ ಮಕ್ಕಳನ್ನು ದಾಖಲಿಸಿಕೊಳ್ಳುವ ಆಂದೋಲನಕ್ಕೆ ಚಾಲನೆಯೂ ದೊರೆಯಿತು. ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು.

    ಗಮನಸೆಳೆದ ಕೋಟೆ ಪ್ರೌಢಶಾಲೆ
    ಕೋಟೆ ನಗರಿಯ ಸರ್ಕಾರಿ ಕೋಟೆ ಪ್ರೌಢಶಾಲೆಯ ಸಿಂಗಾರ ಬುಧವಾರ ವಿದ್ಯಾರ್ಥಿಗಳಷ್ಟೇ ಅಲ್ಲ, ದಾರಿಹೋಕರ ಗಮನ ಸೆಳೆಯುವಲ್ಲೂ ಸಫಲವಾಯಿತು. ಶುಭ ಸಮಾರಂಭಗಳ ಮಾದರಿಯಲ್ಲೇ ಸ್ವಾಗತ ಕಮಾನು ನಿರ್ಮಿಸಲಾಗಿತ್ತು. ಬಲಬದಿಯಲ್ಲಿ ವೀರವನಿತೆ ಒನಕೆ ಓಬವ್ವಳ, ಎಡಬದಿಯಲ್ಲಿ ರಾಜವೀರ ಮದಕರಿನಾಯಕರ ಭಾವಚಿತ್ರ ಕಂಗೊಳಿಸಿತು. ಪ್ರೀತಿಯ ಸ್ವಾಗತ ಎಂಬ ಫಲಕ ಕಣ್ಣಿಗೆ ರಾಚುತ್ತಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts