More

    ಶುರುವಾಗುತ್ತಿವೆ ಶಾಲೆಗಳು: ಮಕ್ಕಳನ್ನು ಮಾನಸಿಕವಾಗಿ ರೆಡಿ ಮಾಡೋದು ಹೇಗೆ?

    | ರೇಖಾ ಬೆಳವಾಡಿ, ಆಪ್ತಸಲಹೆಗಾರರು

    ಪ್ರಿಯಾಂಕಾ ಮತ್ತು‌ ಮನು ದಂಪತಿಗಳು ಬಹಳ ಖುಷಿಯಾಗಿದ್ದಾರೆ. ತಮ್ಮ ಮಗು ತಾವು ಇಷ್ಟ ಪಟ್ಟ ಶಾಲೆಗೆ ಓದಲು ಹೋಗುತ್ತಾನೆ ಎಂದು ಹೊಸ ಬ್ಯಾಗ್, ಪುಸ್ತಕಗಳು, ಸಮವಸ್ತ್ರ, ಊಟದ ಡಬ್ಬಿಗಳು, ವ್ಯಾನ್ ಮುಂತಾದ ವ್ಯವಸ್ಥೆಗಳ ತಯಾರಿ ಭರದಿಂದ ಸಾಗಿದೆ.

    ಮೊಮ್ಮಗಳು ಶಾಲೆಗೆ ಹೋಗುತ್ತಾಳೆ ಎಂಬ ಖುಷಿ ಒಂದು ಕಡೆಯಾದರೆ, ಕೆಲಸದಿಂದ ನಿವೃತ್ತಿ ಹೊಂದಿದ ಬಳಿಕ ಮೊಮ್ಮಗಳ ಆಟ ಪಾಲನೆಯಲ್ಲಿ ತೊಡಗಿದ್ದ ಶ್ಯಾಮರಾಯ ದಂಪತಿಗಳಿಗೆ, ಮಗು ಶಾಲೆಗೆ ಹೋದ ಮೇಲೆ ತಾವು ಹೇಗಪ್ಪಾ ಸಮಯ ಕಳೆಯುವುದು? ಎಂಬ ಯೋಚನೆ ಒಂದು ಕಡೆ.

    ತನ್ನ ತಂಗಿ, ತನ್ನ ಜೊತೆ, ತನ್ನ ಶಾಲೆಗೇ ಸೇರಿದ್ದಾಳೆ ಎಂದು ಅಖಿಲ್ ಬಹಳ ಖುಷಿಯಲ್ಲಿದ್ದರೆ, ಇನ್ನೊಂದಡೆ ಮನೆಯಲ್ಲಿ ಜೊತೆಗಿರುವುದಲ್ಲದೆ ಶಾಲೆಗೂ ಸಹ ತನ್ನ ಜೊತೆಗೇ ಬರುತ್ತಾನೆ ತಮ್ಮ ಎಂಬ ಬೇಸರ ಶರಧಿಗೆ.

    ಇನ್ನೇನು ಸ್ವಲ್ಪ ದಿನಗಳಲ್ಲೇ ಶಾಲೆಗಳು ಪ್ರಾರಂಭವಾಗುತ್ತಿವೆ. ಇನ್ನು ಇಷ್ಟು ವರ್ಷ ಮನೆಯಲ್ಲೇ ಅಪ್ಪ ಅಮ್ಮ ಅಜ್ಜಿ ತಾತ ಸಹೋದರ ಸಹೋದರಿಯೊಂದಿಗೆ ಆಡಿಕೊಂಡು, ಅವರನ್ನು ಎಲ್ಲೂ ಹೆಚ್ಚಾಗಿ ಬಿಟ್ಟಿರದ ಮಗು, ಈಗ ತಾನೊಂದೇ ಮೊದಲ ಬಾರಿಗೆ ಸುಮಾರು ಐದರಿಂದ ಆರು ತಾಸುಗಳು ಮನೆಯಿಂದ ಹೊರಗೆ ಓದಲು, ತನ್ನಷ್ಟೇ ಉದ್ದದ ಬ್ಯಾಗ್ ಬೆನ್ನೇರಿಸಿಕೊಂಡು ಶಾಲೆಗೆ ಹೋಗುವ ಸಮಯ ಬಂದೇ ಬಿಟ್ಟಿದೆ. ಇದೊಂದು ಮಗುವಿನ ಬೆಳವಣಿಗೆ ಹಾಗು ವಿಕಸನದ ಮತ್ತೊಂದು ಹಂತ.

    ಬಹುತೇಕ ಮಕ್ಕಳು ಶಾಲೆ ಪ್ರಾರಂಭವಾದ ಮೊದಲ ಕೆಲವು ದಿನಗಳಲ್ಲಿ ಅಳುವುದನ್ನು ಕಾಣಬಹುದು.
    ಕಾರಣಗಳು
    * ಭಯ – ಹೊಸ ಜಾಗ, ಜನರು
    * ಊಟ/ ನಿದ್ರೆ/ ಶೌಚ ಸಮಯದಲ್ಲಿನ ಬದಲಾವಣೆ.
    * ಮನೆ ಇಂದ ಶಾಲೆಗೆ – ಪ್ರಯಾಣ
    * ಆತಂಕ – ಪೋಷಕರಿಂದ ದೂರವಿರುವ ಕಾರಣ
    * ಶಾಲೆಗೆ ಏಕೆ ಹೋಗಬೇಕು?
    * ಶಾಲೆಯಲ್ಲಿ ಏನು ನಡೆಯುವುದು ಎಂದು ಸುಳಿವಿಲ್ಲದಿರುವುದು.
    * ಒತ್ತಡ – ವೇಳಾಪಟ್ಟಿ/ ಸಮಯ/ ಹೊಸ ನಿಯಮಗಳ ಅನುಸರಣೆ
    * ಶಿಕ್ಷಕರ ಸೂಚನೆಗಳಂತೆ ಚಟುವಟಿಗೆಗಳನ್ನು ಮಾಡಬೇಕು. ಇತ್ಯಾದಿ

    ಒಂದು ವೇಳೆ ಮಗು ಮೊದಲ ದಿನ/ಕೆಲವು ದಿನಗಳು ಅಳದಿದ್ರೂ ಸಹ, ಮುಂದಿನ ದಿನಗಳಲ್ಲಿ ಅಳುತ್ತಿರುವ ಇತರ ಮಕ್ಕಳನ್ನು ನೋಡಿ‌ ಅಥವಾ ಬಹಳ ಕಾಲದವರೆಗೂ ಶಾಲೆಯಲ್ಲಿ ಸಮಯ ಕಳೆಯಬೇಕು ಎಂದು ಅರಿವಾಗಿ ಅಳಬಹುದು. ಮಗುವಿನ ಜೊತೆ ತಂದೆ ತಾಯಿ ಅಜ್ಜಿ ತಾತರಲ್ಲೂ ಭಯ, ಪ್ರತ್ಯೇಕತೆಯ ಆತಂಕ (separation anxiety) ಬೇಸರದಲ್ಲಿರುವುದನ್ನು ಕಾಣಬಹುದು.

    ಈ ಹಂತದಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಮುಖ್ಯವಾದ ಅಂಶಗಳು
    1 ತಾಳ್ಮೆ (Patience )
    2. ಹೊಸ ಸ್ಥಳ ಮತ್ತು ಜನರ ಆತಂಕ (Anxiety of new place)
    3. ಹೊಂದಾಣಿಕೆಯ ಸಮಸ್ಯೆಗಳು (Adjustment issues)
    4. ಮಕ್ಕಳನ್ನು ಶಾಲೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿಧ್ಧಪಡಿಸುವುದು (Preparing children mentally to the school)

    ತಂದೆ – ತಾಯಿ/ಪೋಷಕರ‌ ಎದುರಿಸುವ ಸವಾಲುಗಳು
    * ಮಕ್ಕಳ ಜೊತೆ ತಾವೂ ಸಹ ದುಃಖಿಸುವುದು.
    * ಶಾಲೆಗೆ ಹೋಗುವಾಗ ಮಗು ಅಳುತ್ತಾ ಹೋಗುವುದನ್ನು ನೆನಸಿಕೊಂಡಾಗ ಪೋಷಕರಿಗೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆ ಯಾಗಬಹುದು.
    * ಅಳುತ್ತಿರುವ ಮಗುವನ್ನು ಹಾಗೆಯೇ ಬಿಟ್ಟು ತನ್ನ ಕೆಲಸದತ್ತ ಹೋಗುತ್ತಿದ್ದೆನಲ್ಲಾ ಎಂಬ ಅಪರಾಧ ಮನೋಭಾವನೆ ಕಾಡಬಹುದು (ಹೆಚ್ಚಾಗಿ ತಾಯಂದಿರಲ್ಲಿ)
    * ಮಗು ಊಟ ಮಾಡಿತೋ ಇಲ್ಲವೋ ಎಂದು‌, ತಂದೆತಾಯಿ/ ಮನೆಯವರ ಆಹಾರ ಸೇವನೆಯಲ್ಲಿ ವ್ಯತ್ಯಾಸವಾಗುತ್ತದೆ.
    * ಮಗು ಅಳುವುದನ್ನು ನೋಡಲಾಗದೆ, ಪೋಷಕರು ಮುಂದಿನ ದಿನಗಳಲ್ಲಿ ” ಸರಿ ನಾಳೆ ಶಾಲೆಗೆ ಹೋಗುವುದು ಬೇಡ” ಎನ್ನುತ್ತಾ ಶಾಲೆಗೆ ಕಳುಹಿಸದಿದ್ದರೆ, ಮಗುವಿಗೆ ಅದೇ ಅಭ್ಯಾಸವಾಗಿ ಶಾಲೆಯ ಹಾಜರಾತಿಯಲ್ಲಿ ಏರುಪೇರಾಗುತ್ತದೆ. ಹೊಂದಾಣಿಕೆ ಸಮಯ, ಕಲಿಕೆಯ ಹಾಗು ಇತರ ಕೌಶಲ್ಯಗಳ ಮೇಲೆ ಪರಿಣಾಮ ಬೀರುತ್ತದೆ‌.
    * ಅದಲ್ಲದ ಮಗು ಶಾಲೆಗೆ ಹೋಗುವುದಿಲ್ಲ ಎಂದು ಹಟ ಹಿಡಿದಾಗ, ಶಾಲೆ ಬೇಡ, ಪಾರ್ಕ್ ಗೆ ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾ ಶಾಲೆಗೆ ಕರೆತಂದು ಬಿಟ್ಟಾಗ, ಮಗುವಿಗೆ ತಂದೆ ತಾಯಿ ಸುಳ್ಳು ಹೇಳುತ್ತಾರೆ ( ಅಪನಂಬಿಕೆ) ಎಂದು ಮುಂದೆ ತಂದೆ ತಾಯಿಯರ ಮಾತಿನಲ್ಲಿ ಸಂಶಯ ಉಂಟಾಗಬಹುದು.
    * ಈಗಾಗಲೇ ಶಾಲೆಗೆ ಹೋಗುವ ಮಗು ಮನೆಯಲ್ಲಿದ್ದರೆ , ಎಲ್ಲರೂ ತನಗಿಂತ ತನ್ನ ತಂಗಿ ಅಥವಾ ತಮ್ಮನಿಗೆ ಹೆಚ್ಚಿನ ಸಮಯ/ ಪ್ರಾಶಸ್ತ್ಯ ನೀಡುತ್ತಿದ್ದಾರೆ ಎಂದು ಮೊದಲ ಮಗು ಮಂಕಾಗುವ ಸಾಧ್ಯತೆ ಇದೆ. ಹಾಗಾಗಿ ಮಕ್ಕಳೊಂದಿಗೆ ಮಾತಾಡುವುದೂ ಸಹ ಮುಖ್ಯ.

    ಬದಲಾವಣೆಗಳು – ಎದುರಾಗಬಹುದಾದ ಸನ್ನಿವೇಶಗಳು
    *ನಿದ್ರೆಯ ಮಾದರಿಯಲ್ಲಿ ಏರುಪೇರು ( sleep pattern) ಬೆಳಗ್ಗೆ ಬೇಗ ಏಳುವುದು/ ರಾತ್ರಿಯ ನಿದ್ರಾ ಸಮಯದಲ್ಲಿ ಆಗುವ ಬದಲಾವಣೆಗಳಿಂದ ಇರುಸುಮುರುಸು.
    * ಆಹಾರ ಸೇವನೆ/ ಹಸಿವು/ ಅಜೀರ್ಣದ ಆರೋಗ್ಯ ಸಮಸ್ಯೆಗಳು – ಶಾಲೆಯ ಮೊದಲ ದಿನಗಳಲ್ಲಿ ಬೆಳಿಗ್ಗೆ ಹಸಿವಿಲ್ಲದಿದ್ದರೂ ಶಾಲೆಗೆ ತಡವಾಗುವುದೆಂದು, ಏನಾದರೂ ತಿನ್ನಲಿ ಎಂದು ಅವಸರದಲ್ಲಿ ಬಲವಂತವಾಗಿ ಆಹಾರ ತಿನ್ನಿಸುವುದರಿಂದ, ಮಗುವಿಗೆ ಆಹಾರದ ಮೇಲೆ ತಿರಸ್ಕೃತ (aversion) ಭಾವನೆ ಮೂಡುವ ಸಾಧ್ಯತೆ ಇದೆ‌. ಆಗ ತಾನೇ ಸ್ವಂತವಾಗಿ ತಿನ್ನಲು ಕಲಿತುಕೊಳ್ಳುತ್ತಿರುವ ( ಅಥವಾ ಅಭ್ಯಾಸವಿಲ್ಲದ ) ಮಕ್ಕಳು ಹಸಿವು ಹಾಗು ಸರಿಯಾದ ಪೌಷ್ಟಿಕ ಆಹಾರ ಪೊರೈಕೆಯಾಗದ ಕಾರಣ ಸದಾ ಅಳು, ಇರುಸುಮುರುಸು ಹಾಗು ತರಗತಿಯ ಯಾವುದೇ ಚಟುವಟಿಕೆಯಲ್ಲಿ ಅಷ್ಟಾಗಿ ಗಮನ ಕೊಡಲು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
    * ಶೌಚಾಲಯ ತರಬೇತಿ – ತರಬೇತಿ ಇದ್ರೂ ಸಹ, ಶಾಲೆಯಲ್ಲಿ ಮೌಖಿಕವಾಗಿ ಹೇಳುವಲ್ಲಿ ಅಡೆತಡೆ ಆಗಬಹುದು.
    * ಶಾಲೆಯಲ್ಲಿ ಏನಾಯಿತು? ಮಗು ಏನೂ ಹೇಳುತ್ತಿಲ್ಲ ಎಂದು ಆತಂಕಪಡದಿರಿ. ಹಾಗೂ ಮಗು ಏನಾದರೂ ಹೇಳಲು ಬಂದಾಗ (ಕಲಿಕಾ ಮಾಧ್ಯಮ ಉದಾಹರಣೆಗೆ ಇಂಗ್ಲೀಷಿನಲ್ಲೇ) ಮಾತಾಡು ಎಂದು ಒತ್ತಡ ಹೇರಬೇಡಿ. ಇದರಿಂದ ಮಗು ತನ್ನ ಯೋಚನೆ/ ಭಾವನೆಗಳನ್ನು ವ್ಯಕ್ತಪಡಿಸಲಾಗದೇ ಇರಬಹುದು.
    * ಮಗುವಿಗೆ ಇನ್ನೂ ಯಾವುದೇ ಸ್ನೇಹಿತರಿಲ್ಲ, ಗೆಳೆಯ ಗೆಳತಿಯರ ಹೆಸರನ್ನು ಹೇಳುವುದಿಲ್ಲ ಎಂದು ಹೆದರುವುದು ಬೇಡ. ಆಗಾಗ ಶಾಲಾ ಶಿಕ್ಷಕಿಯೊಂದಿಗೆ ಮಗುವಿನ ಬಗ್ಗೆ ವಿಚಾರಿಸಿ.
    * ಬೇರೆ ಮಗುವಿಗೆ ಆಗಲೇ ಅಕ್ಷರಗಳು ಬರುತ್ತದೆ, ಚುರುಕಾಗಿ ಕೇಳಿದ ತಕ್ಷಣ ಹಾಡುತ್ತದೆ, ತನ್ನ ಮಗು ಇನ್ನೂ ಅಕ್ಷರ ಕಲಿಯುತ್ತಿದೆ ಬಹಳ ನಿಧಾನ ಎಂದು ,ಇತರ ಮಕ್ಕಳೊಂದಿಗೆ ಹೋಲಿಸದಿರಿ. ಪ್ರತಿಯೊಂದು ಮಗುವಿನ ಕಲಿಕಾ ವಿಧಾನ ಹಾಗು ವೇಗದಲ್ಲಿ ವ್ಯತ್ಯಾಸವಿರುತ್ತದೆ.

    ಆದರೆ ಮೇಲಿನ ಅಂಶಗಳು ಮಗು ಶಾಲೆಗೆ ನಿಧಾನವಾಗಿ ಹೊಂದಿಕೊಂಡಂತೆ, ಅಭ್ಯಾಸವಾಗುತ್ತದೆ. ಸಮಸ್ಯೆಗಳು ದೂರವಾಗುತ್ತವೆ.
    ಶಾಲೆಯ ಮೊದಲ‌ ದಿನಗಳಲ್ಲಿ ಮಕ್ಕಳು‌ ಅಳುವುದು ಸಹಜ. ಅದಲ್ಲದೆ ನಿಮ್ಮ ಮಗುವಿನ ಕಲಿಕೆ/ವರ್ತನೆಗಳ ಬಗ್ಗೆ ವ್ಯತ್ಯಾಸ ನಿಮ್ಮ ಗಮನಕ್ಕೆ ಬಂದು (concerns – ಕಾಳಜಿ) ಸಹಾಯ ಬೇಕು ಎನ್ನಿಸಿದಾಗ, ಶಾಲೆಯ ಆಪ್ತಸಮಾಲೋಚಕರನ್ನು ಸಂಪರ್ಕಿಸಿ.

    * ಮಗು ಮತ್ತು ಕುಟುಂಬದ ಮಾನಸಿಕ ತಯಾರಿ ಅಗತ್ಯ.
    * ಮಗು ಮತ್ತು ಕುಟುಂಬದವರಿಗೆ ಈ ಬದಲಾವಣೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ತಾಳ್ಮೆ ಇರಲಿ.
    * ಮಗು ತಂದೆ-ತಾಯಿ/ ಪೋಷಕರನ್ನು ಅನುಕರಿಸಿ ( imitate) ಕಲಿಯುತ್ತದೆ. ( ಭಾಷೆ, ವರ್ತನೆಗಳು – language and behaviour ಇತ್ಯಾದಿ) ಹಾಗಾಗಿ ಧೈರ್ಯದಿಂದ, ಆತ್ಮವಿಶ್ವಾಸದಿಂದ ಮಾತಾಡಿ.
    * ಶಾಲೆಗೆ ಕಳುಹಿಸುವ ಮೊದಲ ಪೂರ್ವ ತಯಾರಿಯಾಗಿ, ಶಾಲೆಯ ಬಗ್ಗೆ ಸರಳವಾಗಿ ಮಾಹಿತಿ ನೀಡಿ.
    * ಶಾಲೆ/ ಕಲಿಕೆ ಬಗ್ಗೆ ಧನಾತ್ಮಕವಾಗಿ ಮಾತಾಡಿ.
    * ಸ್ವಲ್ಪ ದಿನಗಳ ಮೊದಲೇ ನಿದ್ರಾ ಮಾದರಿಯನ್ನು ಅಭ್ಯಾಸ ಮಾಡಿಸುವುದು ಉತ್ತಮ.
    * ಶೌಚ ತರಬೇತಿ
    * ಶಾಲೆಯ ಸಮಯದ ನಂತರ, ಗುಣಮಟ್ಟದ ಸಮಯ ಕಳೆಯಿರಿ.
    * ಮಾತೃಭಾಷೆ ಹಾಗು ಇತರ (ಶಾಲಾ ಭಾಷಾ ಮಾಧ್ಯಮ) ಕಲಿಕೆಯನ್ನು ಉತ್ತೇಜಿಸಿ.
    * ಕೋವಿಡ್ -19, ಕಾರಣ, ಮೊಬೈಲ್ ಬಳಕೆ ಹೆಚ್ಚಾಗಿದೆ, ಹಾಗಾಗಿ ತಕ್ಷಣದಲ್ಲಿ ಮಕ್ಕಳಿಗೆ ದೈಹಿಕ ತರಗತಿಗೆ ಹೊಂದಿಕೊಳ್ಳಲು ಸಮಯ ಹಿಡಿಯಬಹುದು. ಹಂತ ಹಂತವಾಗಿ ದೈಹಿಕ /ಇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿದಾಗ ಮೊಬೈಲ್ ಬಳಕೆ ಕ್ರಮೇಣವಾಗಿ ಕಡಿಮೆಯಾಗುತ್ತದೆ.
    * ಹೆಚ್ಚು ಪುಸ್ತಕಗಳನ್ನು ಓದಿ, ಇದರಿಂದ ಮಕ್ಕಳ ಭಾಷೆ ( ಶಬ್ದ ಕೋಶ – vocabulary) ಉತ್ತಮಗೊಳ್ಳುತ್ತದೆ.
    * ಇದರಿಂದ ಮಕ್ಕಳು ತಮ್ಮ ಭಾವನೆ ಮತ್ತು ಯೋಚನೆಗಳನ್ನು ಉತ್ತಮವಾಗಿ ವ್ಯಕ್ತಪಡಿಸಬಹುದು.

    ಶಾಲೆ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಮೊದಲ ಔಪಚಾರಿಕ ಹಂತ. ಕೇವಲ ಅಕ್ಷರ , ಸಂಖ್ಯಾ ಕಲಿಕೆಗೆ ಒತ್ತು ಕೊಡದೆ, ಮಕ್ಕಳ ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಕೌಶಲಗಳ ಬೆಳವಣಿಗೆಗೆ ಹೆಚ್ಚಿನ ಗಮನ ಕೊಡಿ. ಇದು ಸ್ಪರ್ಧಾತ್ಮಕ ಜಗತ್ತು ಹೌದು ಆದರೆ ಮಗುವಿನ “ಬಾಲ್ಯ” ಜಗತ್ತೂ ಸುಂದರವಾಗಿರಲಿ. ಬಾಲ್ಯದ ಅಂಗಳದ ತುಂಬಾ ನಗುವಿರಲಿ. ಮಗುವನ್ನು ಮಗುವಿನಂತೆ ಕಾಣೋಣ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಹಾಗು ಸುಂದರ ಜೀವನಕ್ಕೆ‌ ಹಾರೈಸೋಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts