More

    ಶಾಲೆಯ ಅಂಗಳದಲ್ಲಿ ಅಕ್ಷರ ಕೈತೋಟ

    ಬೆಳಗಾವಿ: ‘ನೋಡಿ ನಲಿ ಮಾಡಿ ಕಲಿ’ ಎಂಬ ಮಾತಿನಂತೆ ಶಾಲಾ ಮಕ್ಕಳಲ್ಲಿ ಸ್ವಾವಲಂಬನೆ ಹಾಗೂ ಉತ್ಪಾದನಾ ಮನೋಧರ್ಮ ಬೆಳೆಸಲು ಸರ್ಕಾರವು ಶೈಕ್ಷಣಿಕವಾಗಿ ಹಲವು ಕ್ರಮ ಕೈಗೊಂಡಿದೆ. ಆ ನಿಟ್ಟಿನಲ್ಲಿ ಕಲಿಕೆ ಜತೆಗೆ ಮಕ್ಕಳಿಗೆ ಪೌಷ್ಟಿಕ ಆಹಾರ ತಯಾರಿಕೆ, ಕೃಷಿ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲು ‘ಅಕ್ಷರ ಕೈತೋಟ’ ನಿರ್ಮಿಸಲು ಮುಂದಾಗಿದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಡಿ ಈಗಾಗಲೇ 100ಕ್ಕೂ ಅಧಿಕ ಶಾಲೆ, ವಸತಿ ನಿಲಯಗಳ ಆವರಣದಲ್ಲಿ ‘ಅಕ್ಷರ ಕೈತೋಟ’ ನಿರ್ಮಾಣ ಕೆಲಸ ಆರಂಭವಾಗಿದೆ.

    ಮುಖ್ಯ ಶಿಕ್ಷಕರಿಗೆ ಹೊಣೆ: ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯ 4,367 ಪ್ರಾಥಮಿಕ ಮತ್ತು ಪ್ರೌಢಶಾಲೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ವ್ಯಾಪ್ತಿಯಲ್ಲಿರುವ 68 ಮುರಾರ್ಜಿ ದೇಸಾಯಿ ವಸತಿ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್. ಅಂಬೇಡ್ಕರ್, ಏಕಲವ್ಯ, ವಾಜಪೇಯಿ ಹಾಗೂ ಇಂದಿರಾ ವಸತಿ ಶಾಲೆಗಳು, ವಸತಿ ನಿಲಯಗಳ ಆವರಣದಲ್ಲಿ ಕೈತೋಟ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಮುಖ್ಯ ಶಿಕ್ಷಕರಿಗೆ ಕ್ರಿಯಾಯೋಜನೆ ಸಿದ್ಧಪಡಿಸುವ ಜವಾಬ್ದಾರಿ ನೀಡಿದೆ.

    ಹಳೆಯ ಪದ್ಧತಿ: 1985 ರಿಂದ 2002ರ ಅವಧಿಯಲ್ಲಿ ಸರ್ಕಾರಿ ಶಾಲೆಯ ಆವರಣದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಸ್ವ- ಆಸಕ್ತಿಯಿಂದ ಕೈತೋಟ ಮಾಡುತ್ತಿದ್ದರು. ಅದರಲ್ಲಿ ನಿಂಬೆ, ಪಪ್ಪಾಯ, ಕರಿಬೇವು, ಮೆಣಸಿನಕಾಯಿ ಸೇರಿ ವಿವಿಧ ಹಣ್ಣು-ಹಂಪಲ, ತರಕಾರಿ ಬೆಳೆಯಲು ಕೈತೋಟ ನಿರ್ಮಿಸುತ್ತಿದ್ದರು. ಬಳಿಕ ಈ ಪದ್ಧತಿ ಮರೆಯಾಗಿತ್ತು. ಶಿಕ್ಷಕರ ನಿರಾಸಕ್ತಿ, ಶಿಕ್ಷಕರ, ಮಕ್ಕಳ ಕೊರತೆ, ಆವರಣದಲ್ಲಿ ಕೊಠಡಿಗಳ ನಿರ್ಮಾಣ ಇನ್ನಿತರ ಅಡೆತಡೆಗಳು ಕೈತೋಟ ಪ್ರಕ್ರಿಯೆಗೆ ಅಡ್ಡಿಯಾಗಿದ್ದವು. ಇದೀಗ ನರೇಗಾ ಯೋಜನೆಯಡಿ ಮತ್ತೆ ಕೈತೋಟ ನಿರ್ಮಾಣಕ್ಕೆ ಮುಂದಾಗಿರುವುದು ಹಳೇ ಪದ್ಧತಿ ಮುನ್ನೆಲೆಗೆ ಬಂದಂತಾಗಿದೆ.

    ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಲಿ: ಶಾಲೆಗಳ ಆವರಣದಲ್ಲಿ ಕೃಷಿಗೆ ಪೂರಕವಾದ ಚಟುವಟಿಕೆ ಕೈಗೊಳ್ಳುವುದರಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚುತ್ತದೆ. ಜತೆಗೆ ಕೃಷಿ ಬೆಳೆಗಳ ಬಗ್ಗೆ ಜ್ಞಾನ ಬರುತ್ತದೆ. ಇದರಿಂದ ಶಾಲೆಯ ಆವರಣದಲ್ಲಿ ಸುಂದರ ಪರಿಸರ ನಿರ್ಮಾಣವಾಗುತ್ತದೆ. ಜತೆಗೆ ಸರ್ಕಾರಿ ಶಾಲಾ ಆವರಣ ಸಂರಕ್ಷಣೆ ಮಾಡಿದಂತಾಗುತ್ತದೆ. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕೈತೋಟ ನಿರ್ಮಾಣ ಕಡ್ಡಾಯಗೊಳಿಸಬೇಕು ಎನ್ನುತ್ತಾರೆ ಸರ್ಕಾರಿ ಶಾಲಾ ಶಿಕ್ಷಕರಾದ ಮಂಜುನಾಥ ಪಾಟೀಲ, ಅಶೋಕ ಹರಿಜನ ಹಾಗೂ ಆರತಿ ನಾಯಕ್.

    ಮಧ್ಯಾಹ್ನದ ಬಿಸಿಯೂಟಕ್ಕೆ ತರಕಾರಿ ಬಳಕೆ: ಶಾಲೆಗಳ ಕೈತೋಟದಲ್ಲಿ ಮಾವು, ಚಿಕ್ಕು, ಕರಿಬೇವು, ಪಪ್ಪಾಯಿ, ಪೇರಲೆ, ನಿಂಬೆ ಸೇರಿ ವಿವಿಧ ತರಕಾರಿ ಬೆಳೆಯುವುದು. ಅಲ್ಲದೆ, ಆವರಣದಲ್ಲಿ ಹೆಚ್ಚು ಜಾಗವಿದ್ದರೆ ಬಾಳೆಗಿಡ, ತೆಂಗು ಸೇರಿ ವಿವಿಧ ವಾಣಿಜ್ಯ ಬೆಳೆಗಳನ್ನೂ ಬೆಳೆದು ವರಮಾನ ಪಡೆದುಕೊಳ್ಳಬಹುದು. ಅಲ್ಲದೆ, ಮಕ್ಕಳಿಗೆ ಪೌಷ್ಟಿಕ ಆಹಾರ ಕಲ್ಪಿಸುವ ನಿಟ್ಟಿನಲ್ಲಿ ತರಕಾರಿಯನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಕೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

    ನರೇಗಾ ಯೋಜನೆಯಡಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಆವರಣ ಮತ್ತು ವಸತಿ ಶಾಲೆಗಳ ಆವರಣದಲ್ಲಿ ಕೈತೋಟ ನಿರ್ಮಿಸಲಾಗುತ್ತಿದೆ. ಈಗಾಗಲೇ 100ಕ್ಕೂ ಅಧಿಕ ಶಾಲೆಗಳಲ್ಲಿ ಈ ಕೆಲಸ ಆರಂಭವಾಗಿದೆ. ಆಯಾ ಶಾಲೆಯ ಮುಖ್ಯೋಪಾಧ್ಯಾಯರು ಕ್ರಿಯಾಯೋಜನೆ ಸಿದ್ಧಪಡಿಸುತ್ತಾರೆ.
    | ಎಸ್.ಬಿ.ಮುಳ್ಳಳ್ಳಿ, ಜಿಪಂ ಉಪ ಕಾರ್ಯದರ್ಶಿ

    ಜಿಲ್ಲೆಯಲ್ಲಿ 340 ಸರ್ಕಾರಿ ಶಾಲೆಗಳಲ್ಲಿ ನರೇಗಾ ಯೋಜನೆಯಡಿ ಕೈತೋಟ ನಿರ್ಮಾಣದ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ ಕೆಲ ಶಾಲೆಗಳಲ್ಲಿ ಕ್ರಿಯಾ ಯೋಜನೆ ರೂಪಿಸಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ವಸತಿ ನಿಲಯಗಳಲ್ಲಿ ಕೈತೋಟ ಆರಂಭಿಸಲಾಗುವುದು.
    |ಎಚ್.ವಿ. ದರ್ಶನ, ಜಿಪಂ ಸಿಇಒ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts