More

    ಶಾಲೆ ಅಂಗಳದಲ್ಲಿ ಕೇಳಲಿದೆ ಮಕ್ಕಳ ಕಲರವ ; 30ರೊಳಗೆ ದಾಖಲಾತಿ ಪೂರ್ಣ ;  ಜುಲೈ 1 ರಿಂದ ಆನ್‌ಲೈನ್ ಅಥವಾ ಆಫ್‌ಲೈನ್‌ಗೆ ಸಿದ್ಧತೆ

    ತುಮಕೂರು: ಕರೊನಾ ಆರ್ಭಟ ತಗ್ಗಿರುವುದರಿಂದ ಜು.1 ರಿಂದ ಶಾಲೆಗಳ ಅಂಗಳದಲ್ಲಿ ಮಕ್ಕಳ ಕಲರವ ಕೇಳಿಸುವ ನಿರೀಕ್ಷೆ ಹೆಚ್ಚಿದೆ. ಮಧುಗಿರಿ ಹಾಗೂ ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಶಾಲೆಗಳನ್ನು ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

    ಕರೊನಾ 3ನೇ ಅಲೆ ಮಕ್ಕಳನ್ನು ಬಾಧಿಸುವ ಆತಂಕದ ನಡುವೆಯೂ ತಜ್ಞರ ಅಭಿಪ್ರಾಯ ಪಡೆದು ಮಕ್ಕಳ ಕಲಿಕೆಗೆ ಹಿನ್ನಡೆಯಾಗದಂತೆ ಶಾಲೆಗಳ ಬಾಗಿಲು ತೆರೆಯಲು ಈಗಾಗಲೇ ಸರ್ಕಾರ ದೃಢವಾದ ನಿಲುವು ತಳೆದಿದೆ. ಈ ಹಿನ್ನೆಲೆಯಲ್ಲಿ ಜೂ.21ರಿಂದ ಆರಂಭಿಸಿರುವ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು 30ರೊಳಗೆ ಪೂರ್ಣಗೊಳಿಸಲಾಗುತ್ತಿದೆ.

    ಎಲ್ಲ ಶಾಲಾ ಮುಖ್ಯ ಶಿಕ್ಷಕರು ಸಮೀಪದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ 1ನೇ ತರಗತಿಗೆ ಅರ್ಹ ಮಕ್ಕಳ ಪಟ್ಟಿ ಪಡೆದು, ಪಾಲಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಅರ್ಹ ಮಕ್ಕಳನ್ನು ಜೂ.30 ರೊಳಗೆ ದಾಖಲಾತಿ ಮಾಡಿಕೊಂಡು ಎಸ್‌ಎಟಿಎಸ್ (ಸ್ಟೂಡೆಂಟ್ ಟ್ರಾೃಕಿಂಗ್ ಸಿಸ್ಟ್‌ಂ)ನಲ್ಲಿ ಅಪ್ಡೇಟ್ ಮಾಡಬೇಕಿದೆ. ಇನ್ನುಳಿದಂತೆ 2 ರಿಂದ 10ನೇ ತರಗತಿಗೆ ಜೂ.30ರೊಳಗೆ ದಾಖಲಾತಿಯನ್ನೂ ಪೂರ್ಣಗೊಳಿಸಲು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಕ್ರಮವಹಿಸಲು ಸೂಚನೆ ಇದೆ.

    ಆನ್‌ಲೈನ್ ಅಥವಾ ಆಫ್‌ಲೈನ್: ಶಾಲೆಗಳ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದರೂ ಮಕ್ಕಳಿಗೆ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ತರಗತಿ ನಡೆಸುವ ಬಗ್ಗೆ ಇನ್ನೂ ಸ್ಪಷ್ಟ ಸೂಚನೆ ಸರ್ಕಾರದಿಂದ ಹೊರಬಿದ್ದಿಲ್ಲ. ವಿದ್ಯಾಗಮಕ್ಕೂ ಸಕಲ ಸಿದ್ಧತೆಗಳನ್ನು ಶಿಕ್ಷಕರು ಮಾಡಿಕೊಳ್ಳುತ್ತಿದ್ದಾರೆ. ಆಯುಕ್ತರ ಮುಂದಿನ ನಿರ್ದೇಶನದ ಮೇರೆಗೆ ಶಾಲಾ ಶೈಕ್ಷಣಿಕ ಚಟುವಟಿಕೆಗಳು ನಿಂತಿವೆ. ಇದೆಲ್ಲದರೆ ನಡುವೆ ಕರೊನಾ ಲಸಿಕೆ ಪಡೆದಿರುವ ಶಿಕ್ಷಕ ಸಮುದಾಯ ಮಕ್ಕಳ ಸ್ವಾಗತಕ್ಕೆ ಸಜ್ಜಾಗಿದೆ.

    ಶಾಲೆಗಳಿಗೆ ಸ್ಯಾನಿಟೈಸೇಷನ್ : ಜು.1ರಿಂದ ಶಾಲೆಗಳ ಬಾಗಿಲು ತೆರೆಯಲು ಪುರಸಭೆ ಮುಖ್ಯಾಧಿಕಾರಿ, ನಗರಪಾಲಿಕೆ ಆಯುಕ್ತರು, ಗ್ರಾಪಂ ಪಿಡಿಒ ಸಹಕಾರದಲ್ಲಿ ಶಾಲೆಗಳಿಗೆ ಸ್ಯಾನಿಟೈಸೇಷನ್ ಮಾಡಿಸಿ ಶಾಲಾ ಆವರಣಗಳನ್ನು ಸ್ವಚ್ಛಗೊಳಿಸಬೇಕು. ಸುರಕ್ಷತಾ ಕ್ರಮ ಅನುಸರಿಸಿ ಎಲ್ಲ ಮೂಲಸೌಕರ್ಯಗಳ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಇಲಾಖೆಯ ಆದೇಶ/ನಿರ್ದೇಶನಗಳನ್ನು ಅನುಸರಿಸಿ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿಕೊಳ್ಳುವಂತೆ ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ.

    3.64 ಲಕ್ಷ ವಿದ್ಯಾರ್ಥಿಗಳು: 1 ರಿಂದ 10ನೇ ತರಗತಿ ವರೆಗೆ ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 2.32 ಲಕ್ಷ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 1.32 ಲಕ್ಷ ಒಟ್ಟು 3.64 ವಿದ್ಯಾರ್ಥಿಗಳಿದ್ದು, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ 4021 ಶಾಲೆಗಳು ಮಕ್ಕಳ ಸ್ವಾಗತಕ್ಕೆ ಸಜ್ಜಾಗಿವೆ. 13450 ಶಿಕ್ಷಕರು ಈಗಾಗಲೇ ಶಾಲೆಗಳ ಬಾಗಿಲು ತೆರೆಯಲು ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರೆ.

    ಶೇ.90ರಷ್ಟು ಲಸಿಕೆ: ಕರೊನಾ 2ನೇ ಅಲೆಯಲ್ಲಿ ಶಿಕ್ಷಕ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದು, ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 172 ಶಿಕ್ಷಕರಿಗೆ ಸೋಂಕು ತಗುಲಿದ್ದು, ಎಲ್ಲರೂ ಸಂಪೂರ್ಣ ಗುಣಮುಖರಾಗಿದ್ದಾರೆ. 6 ಶಿಕ್ಷಕರು ಕರೊನಾದಿಂದ ಮೃತಪಟ್ಟಿದ್ದಾರೆ. ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 246 ಶಿಕ್ಷಕರಲ್ಲಿ ಸೋಂಕು ಕಾಣಿಸಿಕೊಂಡಿತ್ತು. 14 ಶಿಕ್ಷಕರನ್ನು ಕರೊನಾ ಬಲಿಪಡೆದಿತ್ತು. ಈ ಹಿನ್ನೆಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗಿತ್ತು. ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 8150 ಶಿಕ್ಷಕರಲ್ಲಿ ಇನ್ನೂ 1400 ಶಿಕ್ಷಕರು ಲಸಿಕೆ ಹಾಕಿಸಿಕೊಳ್ಳಬೇಕಿದೆ. ಅದೇ ರೀತಿ ಮಧುಗಿರಿಯಲ್ಲಿ 5300 ಶಿಕ್ಷಕರ ಪೈಕಿ 1200 ಶಿಕ್ಷಕರು ಇನ್ನೂ ಲಸಿಕೆ ಹಾಕಿಸಿಕೊಳ್ಳಬೇಕಿದೆ.

    ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ ಸೂಚನೆ ಹಿನ್ನೆಲೆಯಲ್ಲಿ ಜು.1 ರಿಂದಲೇ ಶಾಲೆಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜೂ.30ರೊಳಗೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಎಲ್ಲ ಶಾಲಾ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಸರ್ಕಾರದ ನಿರ್ದೇಶನದ ಬಳಿಕ ಆನ್‌ಲೈನ್ ಅಥವಾ ಆಫ್‌ಲೈನ್ ತರಗತಿ ನಿರ್ಧಾರವಾಗಲಿದೆ.
    ಸಿ.ನಂಜಯ್ಯ, ಡಿಡಿಪಿಐ, ತುಮಕೂರು ಶೈಕ್ಷಣಿಕ ಜಿಲ್ಲೆ

    ಶಾಲೆಗಳಲ್ಲಿ ಮಕ್ಕಳ ಆಟಪಾಠಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ನಿರ್ದೇಶನದಂತೆ ಶಾಲೆಗಳನ್ನು ಪ್ರಾರಂಭ ಮಾಡಲಾಗುವುದು. ಈಗಾಗಲೇ ಶೇ.90ರಷ್ಟು ಶಿಕ್ಷಕರಿಗೆ ಲಸಿಕೆ ಹಾಕಿಸಲಾಗಿದೆ. ತಿಂಗಳಾಂತ್ಯಕ್ಕೆ ಎಲ್ಲರೂ ಲಸಿಕೆ ಪಡೆಯಲಿದ್ದಾರೆ. ಭೌತಿಕ ತರಗತಿಗಳ ಜತೆಗೆ ಆನ್‌ಲೈನ್ ತರಗತಿಗಳು ಸಿದ್ಧತೆ ಮಾಡಿಕೊಳ್ಳಲಾಗಿದೆ.
    ಎಂ.ರೇವಣಸಿದ್ದಪ್ಪ, ಡಿಡಿಪಿಐ, ಮಧುಗಿರಿ ಶೈಕ್ಷಣಿಕ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts