More

    ಸಾರ್ವಜನಿಕರಿಗೆ ತೊಂದರೆಯಾಗುವಂತೆ ವರ್ತಿಸುವಂತಿಲ್ಲ, ರಸ್ತೆ ತಡೆ ಮಾಡುವಂತಿಲ್ಲ- ಶಾಹೀನ್ ಬಾಘ್ ಪ್ರತಿಭಟನಾಕಾರರಿಗೆ ಸುಪ್ರೀಂ ಕೋರ್ಟ್​ ಎಚ್ಚರಿಕೆ

    ನವದೆಹಲಿ: ಶಾಹೀನ್ ಬಾಘ್​ನಲ್ಲಿರುವ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿ ಪ್ರತಿಭಟನಾಕಾರರು ಸಾರ್ವಜನಿಕರಿಗೆ ತೊಂದರೆಯಾಗುವಂತೆ ರಸ್ತೆ ತಡೆ ಮಾಡುವುದಾಗಲೀ, ಇನ್ನಾವುದೇ ರೀತಿ ತೊಂದರೆ ಕೊಡುವುದಾಗಲೀ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

    ಶಾಹೀನ್ ಬಾಘ್​ನಿಂದ ಪ್ರತಿಭಟನಾಕಾರರನ್ನು ತೆರವುಗೊಳಿಸುವ ವಿಚಾರವಾಗಿ ಸಲ್ಲಿಕೆಯಾದ ದಾವೆಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ಈ ಸೂಚನೆ ನೀಡಿದ್ದು, ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.

    ನ್ಯಾಯಮೂರ್ತಿಗಳಾದ ಎಸ್​.ಕೆ.ಕೌಲ್​ ಮತ್ತು ಕೆ.ಎಂ.ಜೋಸೆಫ್​ ಅವರನ್ನು ಒಳಗೊಂಡ ನ್ಯಾಯಪೀಠ ಈ ವಿಚಾರಣೆ ನಡೆಸುತ್ತಿದ್ದು, ಅಲ್ಲೊಂದು ಕಾನೂನು ಇದೆ. ಅದರ ವಿರುದ್ಧ ಜನರಿಗೆ ದೂರು ಕೂಡ ಇದೆ. ಪ್ರಕರಣ ಕೋರ್ಟ್​ನಲ್ಲಿ ಬಾಕಿ ಇದೆ. ಹೀಗಿರುವಾಗ ಕೆಲವರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಪ್ರತಿಭಟನೆ ನಡೆಸುವುದಕ್ಕಾಗಿಯೇ ಇರುವವರು ಎಂದು ಅಭಿಪ್ರಾಯ ಪಟ್ಟಿತು.

    ಆದರೆ, ಪ್ರತಿಭಟನೆ ನಡೆಸುವ ವೇಳೆ ಸಾರ್ವಜನಿಕ ರಸ್ತೆ ತಡೆ ನಡೆಸುವಂತಿಲ್ಲ. ಅಂತಹ ಪ್ರದೇಶದಲ್ಲಿ ಅನಿಶ್ಚಿತಾವಧಿ ಪ್ರತಿಭಟನೆಯನ್ನೂ ನಡೆಸುವುದಕ್ಕೆ ಅವಕಾಶವಿಲ್ಲ. ಒಂದೊಮ್ಮೆ ನಿಮಗೆ ಪ್ರತಿಭಟನೆ ನಡೆಸಬೇಕು ಎಂದೇ ಇದ್ದಲ್ಲಿ, ಅದಕ್ಕೆಂದೇ ಮೀಸಲಿರುವ ಪ್ರದೇಶವಿದೆ. ಅಲ್ಲಿ ಪ್ರತಿಭಟನೆ ನಡೆಸಿ ಎಂದು ನ್ಯಾಯಪೀಠ ಹೇಳಿತು. ಆದರೆ, ಮುಂದಿನ ವಿಚಾರಣೆ 17ಕ್ಕೆ ನಡೆಸಲಿದ್ದು, ವಾದ-ಪ್ರತಿವಾದ ಆಲಿಸದ ಹೊರತು ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts