More

    ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶ: ಕಾನೂನು ವ್ಯಾಪ್ತಿಯ ವಿಚಾರ ಪರಾಮರ್ಶೆ ಆರಂಭಿಸಿದ ಸುಪ್ರೀಂ ಕೋರ್ಟ್

    ನವದೆಹಲಿ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಕಾನೂನು ವ್ಯಾಪ್ತಿಯ ವಿಚಾರ ಪರಾಮರ್ಶೆಯನ್ನು ಸುಪ್ರೀಂ ಕೋರ್ಟ್​ನ ಒಂಭತ್ತು ಸದಸ್ಯರ ಪೀಠ ಗುರುವಾರ ಆರಂಭಿಸಿದೆ.
    ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಒಂದು ವಿಚಾರವಷ್ಟೆ. ಅದು, ಈ ರೀತಿ ದೇಶದ ಬೇರೆ ಬೇರೆ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಮಹಿಳೆಯರಿಗೆ ಆಗುತ್ತಿರುವ ತಾರತಮ್ಯದ ವಿಚಾರವನ್ನು ಮುಂದೆ ತಂದಿಟ್ಟಿದೆ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ತಿಳಿಸಿತ್ತು. ಬೆಳಗ್ಗೆ 10.40ಕ್ಕೆ ವಿಚಾರಣೆ ಆರಂಭಿಸಿದ ನ್ಯಾಯಪೀಠ ಆರಂಭದಲ್ಲಿ ಸಾಲಿಸಿಟರ್​ ಜನರಲ್ ತುಷಾರ್ ಮೆಹ್ತಾ ಅವರ ವಾದವನ್ನು ಆಲಿಸಿತು. ತುಷಾರ್ ಮೆಹ್ತಾ ಅವರು, ಕಾನೂನಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದೊಡ್ಡ ಪೀಠಕ್ಕೆ ವರ್ಗಾಯಿಸುವ ಅಪೆಕ್ಸ್ ಕೋರ್ಟ್​ ಅಭಿಪ್ರಾಯ ಸರಿಯಾದುದೇ ಆಗಿದೆ. ಮೂಲಭೂತ ಹಕ್ಕುಗಳ ಸಂರಕ್ಷಕ ಎಂಬ ನೆಲೆಯಲ್ಲಿ ಕಾನೂನಿನ ಇಂತಹ ಪ್ರಶ್ನೆಗಳಿಗೆ ಅಧಿಕಾರಯುತವಾಗಿ ಉತ್ತರ ಕಂಡುಕೊಳ್ಳಬೇಕಾದುದು ಕೋರ್ಟ್​​ನ ಉತ್ತರದಾಯಿತ್ವವೂ ಹೌದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
    ಮುಕ್ಕಾಲು ಗಂಟೆ ಮೆಹ್ತಾ ವಾದ ಮಂಡನೆ ನಡೆಸಿದ್ದು, ಬಳಿಕ ಹಿರಿಯ ನ್ಯಾಯವಾದಿ ಫಾಲಿ ಎಸ್.ನಾರಿಮನ್ ಅವರ ವಾದ ಆಲಿಸಲು ನ್ಯಾಯಪೀಠ ಒಲವು ತೋರಿತು. ದೊಡ್ಡ ನ್ಯಾಯಪೀಠದ ಗಾತ್ರದ ವಿಚಾರ ಇಂದಿನ ವಿಚಾರಣೆಯ ಪ್ರಮುಖ ಅಂಶವಾಗಿತ್ತು. ನಾರಿಮನ್ ಅವರು ಸಂವಿಧಾನದ ಸೆಕ್ಷನ್ 145(3) ಉಲ್ಲೇಖಿಸಿ ಸಾಂವಿಧಾನಿಕ ನ್ಯಾಯಪೀಠವಾದರೆ ಗರಿಷ್ಠ ನ್ಯಾಯಮೂರ್ತಿಗಳ ಸಂಖ್ಯೆ 5 ಎಂದು ಹೇಳಿದರು. ಮುಂಧೆ ಅನುಚ್ಚೇದ 25ರ ಪ್ರಕಾರ ಶಿರೂರು ಮಠದ ಕೇಸಿನಲ್ಲಿ ಸುಪ್ರೀಂ ಕೋರ್ಟ್​ ನ್ಯಾಯಪೀಠದ ಸದಸ್ಯರ ಸಂಖ್ಯೆ 8 ಆಗಿತ್ತು ಎಂಬುದನ್ನು ನೆನಪಿಸಿದರು.
    ನ್ಯಾಯಪೀಠದಲ್ಲಿದ್ದ ಮುಖ್ಯನ್ಯಾಯಮೂರ್ತಿ ಎಸ್​.ಎ.ಬೊಬ್ಡೆ, ಒಂದು ತೀರ್ಪಿನ ಬಗ್ಗೆ ಮರುಪರಿಶೀಲನೆ ಆಗ್ರಹಿಸಿ ಮೇಲ್ಮನವಿ ಸಲ್ಲಿಕೆಯಾದಾಗ ಆ ಕೇಸನ್ನು ಮರುತೆರೆದಂತೆ ಅಲ್ಲವೆ ಎಂದು ಪ್ರಶ್ನಿಸಿದ್ದಾರೆ.
    ಇದಕ್ಕೆ ಉತ್ತರಿಸಿದ ಫಾಲಿ ಎಸ್.ನಾರಿಮನ್​, ಒಂದೊಮ್ಮೆ ಕೋರ್ಟ್ ಅನುಮತಿಸಿದರೆ ಆ ಕೇಸ್ ರೀಓಪನ್ ಆಗತ್ತೆ. ರಿವ್ಯೂ ಪಿಟಿಷನ್ ಎಂಬುದು ಸಾಮಾನ್ಯವಾಗಿ ತಿದ್ದುಪಡಿಗಾಗಿ ಸಲ್ಲಿಕೆಯಾಗುತ್ತವೆ. ಒಮ್ಮೆ ಇತ್ಯರ್ಥವಾಗಿರುವ ಪ್ರಶ್ನೆಯನ್ನು ಮತ್ತೆ ಕೆದಕಿ ಉತ್ತರ ಇಲ್ಲದಂತೆ ಮಾಡಲು ಕೋರ್ಟ್ ತನ್ನ ಅಧಿಕಾರವನ್ನು ಬಳಸಲಾಗದು. ರಾಷ್ಟ್ರೀಯ ಮಹತ್ವದ ಪ್ರಶ್ನೆಯಾದರೆ ರಾಷ್ಟ್ರಪತಿಯವರಿಗೆ ಮಾತ್ರವೇ ಅದನ್ನು ಕೋರ್ಟ್​ಗೆ ಶಿಫಾರಸು ಮಾಡುವ ಅಧಿಕಾರವಿದೆ ಎಂದು ವಿವರಿಸಿದರು.
    ಈ ವಿಚಾರಣೆ ಮಧ್ಯಾಹ್ನ ಊಟದ ವಿರಾಮದ ಬಳಿಕವೂ ಮುಂದುವರಿದಿದ್ದು, ಸಿಜೆಐ ಬೊಬ್ಡೆ ಅವರು, ಪರಾಮರ್ಶೆ ಅರ್ಜಿಯ ಮೂಲಕ ಒಂದು ವಿಚಾರ ದೊಡ್ಡ ಪೀಠಕ್ಕೆ ಶಿಫಾರಸು ಮಾಡಲ್ಪಟ್ಟರೆ ಕಾನೂನಿನಲ್ಲಿರುವ ಲೋಪಗಳ ಕುರಿತು ಪ್ರಶ್ನೆಗಳು ಮೂಡುವುದಿಲ್ಲವೇ? ಆ ತಪ್ಪುಗಳನ್ನು ತಿದ್ದುವುದಕ್ಕೆ ನ್ಯಾಯಮೂರ್ತಿಗಳಾಗಿ ನಮ್ಮ ಹೊಣೆಗಾರಿಕೆಯಲ್ಲವೇ? ಎಂದು ನ್ಯಾಯವಾದಿ ವೃಂದವನ್ನು ಪ್ರಶ್ನಿಸಿದ್ದಾರೆ.
    ಹಿರಿಯ ವಕೀಲರಾದ ಇಂದಿರಾ ಜೈಸಿಂಗ್, ರಾಜೀವ್ ಧವನ್​, ರಾಕೇಶ್ ದ್ವಿವೇದಿ, ಜೈದೀಪ್ ಗುಪ್ತಾ, ಶ್ಯಾಮ್ ದೇವನ್ ಮತ್ತು ಇತರರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
    ಒಂಭತ್ತು ನ್ಯಾಯಮೂರ್ತಿಗಳ ಪೀಠದ ವಿವರ: ಮುಖ್ಯನ್ಯಾಯಮೂರ್ತಿ ಎಸ್​.ಎ.ಬೊಬ್ಡೆ, ನ್ಯಾಯಮೂರ್ತಿಗಳಾದ ಆರ್. ಬಾನುಮತಿ, ಅಶೋಕ್ ಭೂಷಣ್, ಎಲ್​.ನಾಗೇಶ್ವರ ರಾವ್​, ಎಂ.ಎಂ.ಶಾಂತನಗೌಡರ್, ಎಸ್​.ಎ.ನಜೀರ್​, ಆರ್.ಸುಭಾಷ್ ರೆಡ್ಡಿ, ಬಿ.ಆರ್.ಗವಾಯಿ, ಸೂರ್ಯಕಾಂತ್​. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts