More

    ಹಗಲು ವೇಳೆ ವಿದ್ಯುತ್ ಪೂರೈಸಿ ರೈತರ ಪ್ರಾಣ, ಬೆಳೆ ಉಳಿಸಿ

    ಶ್ರೀರಂಗಪಟ್ಟಣ: ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ ವಿದ್ಯುತ್ ಪೂರೈಕೆ ಮಾಡಿ ರೈತರ ಪ್ರಾಣ ಹಾಗೂ ಬೆಳೆ ಉಳಿಸಿ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಆಗ್ರಹಿಸಿದರು.

    ಭೂಮಿತಾಯಿ ಹೋರಾಟ ಸಮಿತಿಯ ನೂರಾರು ಕಾರ್ಯಕರ್ತರೊಂದಿಗೆ ಮಂಗಳವಾರ ಪಟ್ಟಣದ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ರಾಜ್ಯ ಸರ್ಕಾರ ಹಾಗೂ ಇಂಧನ ಸಚಿವ ವಿರುದ್ಧ ಘೋಷಣೆ ಕೂಗಿ ಒಂದು ತಾಸು ಪ್ರತಿಭಟನೆ ನಡೆಸಿ ಬಳಿಕ ಸ್ಥಳದಲ್ಲಿದ್ದ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿ ಅವರು ಮಾತನಾಡಿದರು.

    ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೆ ಸಾವಿರಾರು ರೂ. ವೆಚ್ಚ ಮಾಡಿ ಬೆಳೆದಿರುವ ಬೆಳೆ ಕಳೆದುಕೊಳ್ಳುವಂತಾಗಿದೆ. ಒಂದು ವೇಳೆ ನೀರುಣಿಸಲು ಹೋದರೆ ಅಚಾನಕ್ ಕಾಡುಪ್ರಾಣಿಗಳ ದಾಳಿಗೆ ಒಳಗಾದಲ್ಲಿ ರೈತನ ಜೀವ ಹಾಗೂ ಆತನ ಕುಟುಂಬಕ್ಕೆ ಯಾರು ದಿಕ್ಕು. ರಾತ್ರಿ ವೇಳೆ ನೀರು ಹಾಯಿಸಲು ಹೋಗಿದ್ದ ಹಾಸನ ಜಿಲ್ಲೆ ಗುಡೇನಹಳ್ಳಿ ರೈತನಿಗೆ ಹಾವು ಕಚ್ಚಿ ಮೃತಪಟ್ಟಿದ್ದು, ಇಂತಹ ಘಟನೆಗಳಿಂದ ರೈತರು ಆತಂಕಕ್ಕೆ ಒಳಗಾಗಿ ನಿತ್ಯ ಜೀವಭಯದಿಂದ ಬೆಳೆಗೆ ನೀರುಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಹಗಲು ಸಮಯದಲ್ಲಿ ಕನಿಷ್ಠ ನಿರಂತರವಾಗಿ ಐದು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು, ಸರ್ಕಾರ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಪ್ರತಿಭಟನಾಕಾರರ ಮನವಿ ಆಲಿಸಿದ ಸೆಸ್ಕ್ ಎಇಇ ಮಂಜುನಾಥ ಪ್ರಸಾದ್ ಮಾತನಾಡಿ, ನೀರಿನ ಕೊರತೆಯಿಂದ ವಿದ್ಯುತ್ ಪೂರೈಕೆಗೆ ತೊಡಕಾಗುತ್ತಿದೆ. ಸರ್ಕಾರ ವಿದ್ಯುತ್ ವಿತರಣೆ ಸರಿದೂಗಿಸುವ ಸಲುವಾಗಿ ರಾತ್ರಿ ವೇಳೆ ಪಂಪ್ ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಹಗಲು ಸಮಯದಲ್ಲಿ ವಿದ್ಯುತ್ ನೀಡುವ ಕುರಿತು ಇಂಧನ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮನವಿ ಸಲ್ಲಿಸಲಾಗುವುದು. ನಂತರ ಹಗಲು ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

    ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಞೇಗೌಡ, ಸದಸ್ಯರಾದ ಡಿ.ಮಂಜುನಾಥ, ಪುರುಷೋತ್ತಮ, ಮೇಳಾಪುರ, ಜಯರಾಮು, ರಮೇಶ್ ಮಹೇಶ್, ಕಡತನಾಳು ಬಾಬು ಸೇರಿದಂತೆ ವಿವಿಧ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts