More

    ಕಾಂಗ್ರೆಸ್​ಗೆ ಮುಳುವಾದ ಗುಂಪುಗಾರಿಕೆ

    ಸವಣೂರ: ಸ್ಥಳೀಯ ಪುರಸಭೆಗೆ ಅಧ್ಯಕ್ಷ (ಸಾಮಾನ್ಯ ಮಹಿಳೆ) ಹಾಗೂ ಉಪಾಧ್ಯಕ್ಷ (ಸಾಮಾನ್ಯ) ಮಿಸಲಾತಿ ಘೊಷಣೆಯಾಗಿದ್ದು, ಅತಿಹೆಚ್ಚು ಸ್ಥಾನ ಹೊಂದಿರುವ ಕಾಂಗ್ರೆಸ್​ಗೆ ಪಕ್ಷದಲ್ಲಿನ ಗುಂಪುಗಾರಿಕೆಯೇ ಸವಾಲಾಗಿ ಪರಿಣಮಿಸಿದೆ. ಬದಲಾದ ರಾಜಕೀಯ ಲೆಕ್ಕಾಚಾರದಲ್ಲಿ ಬಿಜೆಪಿ ಅಧಿಕಾರಕ್ಕೇರಿದರೂ ಆಶ್ಚರ್ಯವಿಲ್ಲ.

    ಪುರಸಭೆಯಲ್ಲಿ 15 ಕಾಂಗ್ರೆಸ್, 8 ಬಿಜೆಪಿ, 2 ಜೆಡಿಎಸ್ ಹಾಗೂ 2 ಪಕ್ಷೇತರ ಸದಸ್ಯರಿದ್ದಾರೆ. ಪಪಂ ಗದ್ದುಗೆ ಹಿಡಿಯಲು 14 ಸದಸ್ಯರ ಬೆಂಬಲ ಅಗತ್ಯ. ಈ ಮೊದಲು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿತ್ತು. ಆದರೆ, ಸದಸ್ಯರಲ್ಲಿಯೇ 2 ಪ್ರಮುಖ ತಂಡಗಳಾಗಿ ಪೈಪೋಟಿ ಶುರುವಾಗಿದೆ.

    ಸದಸ್ಯ ಮಹೇಶ ಮುದಗಲ್ ನೇತೃತ್ವದಲ್ಲಿ 5 ಬಿಜೆಪಿ, 1 ಪಕ್ಷೇತರ ಹಾಗೂ 7 ಕಾಂಗ್ರೆಸ್ ಸೇರಿ ಒಟ್ಟು 13 ಸದಸ್ಯರ ಬೆಂಬಲದೊಂದಿಗೆ ತಂಡದಲ್ಲಿರುವ ಒಬ್ಬರನ್ನು (ಕಾಂಗ್ರೆಸ್ ಸದಸ್ಯೆ) ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಬಲಾಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

    ಮತ್ತೊಂದು ತಂಡ ಹಿರಿಯ ಸದಸ್ಯರಾದ ಸದಾನಂದ ಕೆಮ್ಮಣಕೇರಿ(ಬಿಜೆಪಿ) ಹಾಗೂ ಅಬ್ದುಲಖಾದರ ಪರಾಶ (ಕಾಂಗ್ರೆಸ್) ಅವರ ನೇತೃತ್ವದಲ್ಲಿ 7 ಕಾಂಗ್ರೆಸ್, 2 ಜೆಡಿಎಸ್, 3 ಬಿಜೆಪಿ ಹಾಗೂ 1 ಪಕ್ಷೇತರ ಸದಸ್ಯರು ಸೇರಿ ಒಟ್ಟು 13 ಸದಸ್ಯರ ಬೆಂಬಲ ಹೊಂದಿದ್ದಾರೆ. ಆದರೆ, ಎರಡೂ ತಂಡಗಳಲ್ಲಿ 13 ಸದಸ್ಯರಿದ್ದು, ಇನ್ನೋರ್ವ ಸದಸ್ಯೆ ಅಧ್ಯಕ್ಷ ಸ್ಥಾನ ನೀಡಿದಲ್ಲಿ ಮಾತ್ರ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ತಂಡದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಪೈಪೋಟಿ ಇರುವ ಹಿನ್ನೆಲೆಯಲ್ಲಿ ತಂಡದ ಸದಸ್ಯರು ಅಧಿಕಾರ ಪಡೆಯುವದು ಗೊಂದಲ ಮೂಡಿಸಿದೆ.

    27 ಸದಸ್ಯ ಸ್ಥಾನದಲ್ಲಿ 15 ಸ್ಥಾನ ಪಡೆದು ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವಕ್ಕಾಗಿ ಹಿರಿಯ ಸದಸ್ಯರಲ್ಲಿ ಗುಂಪುಗಾರಿಕೆ ನಡೆದಿದೆ. ಸದಸ್ಯರ ಪ್ರತಿಷ್ಠೆಯೇ ಕೆಲವರು ಬಿಜೆಪಿಗೆ ಬೆಂಬಲ ನೀಡಲು ಕಾರಣ ಎನ್ನಲಾಗಿದೆ.

    ಸತತ ಮೂರು ಬಾರಿ ಆಯ್ಕೆಗೊಂಡಿರುವ ಹಿರಿಯ ಸದಸ್ಯ ಅಬ್ದುಲ್​ಖಾದರ ಫರಾಶ ಹಾಗೂ ಅಲ್ಲಾವುದ್ದೀನ್ ಮನಿಯಾರ ನಡುವೆ ನಾಯಕತ್ವಕ್ಕಾಗಿ ತೆರೆಮರೆಯಲ್ಲಿ ಗುಂಪುಗಳು ಕಾರ್ಯ ನಿರ್ವಹಿಸುತ್ತಿವೆ. ಅಧ್ಯಕ್ಷರಾಗಲು ಸೂಕ್ತ ವೇದಿಕೆ ರೂಪಿಸಿದ್ದ ಇಬ್ಬರು ಹಿರಿಯ ಸದಸ್ಯರಿಗೆ ಅಧ್ಯಕ್ಷ (ಸಾಮಾನ್ಯ ಮಹಿಳೆ) ಮಿಸಲಾತಿ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳುವುದು ಪಕ್ಷದ ಮುಖಂಡರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

    8 ಬಿಜೆಪಿ, 2 ಪಕ್ಷೇತರ (ಬಿಜೆಪಿ ಬೆಂಬಲಿತ) ಹಾಗೂ 2 ಜೆಡಿಎಸ್ ಸೇರಿ ಒಟ್ಟು 12 ಸದಸ್ಯರ ಬಲ ಹಾಗೂ ಸ್ಥಳೀಯ ಶಾಸಕ, ಸಂಸದರ ಮತ ಸೇರಿ ಒಟ್ಟು 14 ಮತಗಳಾಗುತ್ತವೆ. ಆದರೆ, 27 ಪುರಸಭೆ ಸದಸ್ಯ ಸ್ಥಾನಕ್ಕೆ ಮ್ಯಾಜಿಕ್ ಸಂಖ್ಯೆ 14. ಆದರೆ, ಶಾಸಕ ಹಾಗೂ ಸಂಸದರ ಬಲಕ್ಕೆ ಮ್ಯಾಜಿಕ್ ಸಂಖ್ಯೆ 15ಕ್ಕೆ ಏರಿಕೆಯಾಗಲಿದೆ. ಆದ್ದರಿಂದ, ಆಪರೇಷನ್ ಕಮಲದೊಂದಿಗೆ ಅಧಿಕಾರ ಹಿಡಿಯಲು ಬಿಜೆಪಿ ಸರ್ವ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

    ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಆಯ್ಕೆಗಾಗಿ ಚುನಾವಣೆ ನಡೆಸಲು ಸವಣೂರ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣನವರ ಅವರನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈಗಾಗಲೇ ಚುನಾವಣೆಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳ ತಂಡ ಮುಂದಾಗಲಿದೆ.

    | ಕೃಷ್ಣ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts