More

    ಸವಣೂರ ದೊಡ್ಡಕೆರೆ ಕಲುಷಿತ, ರೈತರು, ಸಾರ್ವಜನಿಕರ ಆಕ್ರೋಶ

    ಸವಣೂರ: ಪಟ್ಟಣದ ದೊಡ್ಡಕೆರೆಗೆ ಕಲ್ಮಶ ನೀರು ಸೇರ್ಪಡೆಗೊಂಡು ಕೆರೆಯಲ್ಲಿರುವ ಅಲ್ಪ ನೀರೂ ಬಳಕೆಗೆ ಬಾರದಂತಾಗಿದೆ. ಜನ, ಜಾನುವಾರುಗಳಿಗೆ ಜಲಮೂಲವಾಗಿರುವ ದೊಡ್ಡಕೆರೆ ಸಂರಕ್ಷಣೆಗೆ ಸಂಬಂಧಪಟ್ಟವರು ಮುಂದಾಗದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.

    198 ಎಕರೆ ವಿಸ್ತೀರ್ಣದ ದೊಡ್ಡಕೆರೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ತುಂಬಿತ್ತು. ಆದರೆ, ಈ ಬಾರಿಯ ಬರಗಾಲಕ್ಕೆ ಕೆರೆ ಬರಿದಾಗುತ್ತಿದೆ. ಕೆರೆ ತುಂಬಿಸುವ ಯೋಜನೆಯಡಿ ತಾಲೂಕಿನ ಮೆಳ್ಳಾಗಟ್ಟಿ ಪಂಪ್​ಹೌಸ್​ನಿಂದ ಕೆರೆಗೆ ನೀರು ಹರಿಸಲಾಗುತ್ತಿತ್ತು. ಆದರೆ, ವರದಾ ನದಿಯೂ ಬರಿದಾಗಿದ್ದರಿಂದ ಹಾಗೂ ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ.

    ಪಟ್ಟಣದ ಧರ್ಮರಾಜ ನಗರ, ಮಾಲತೇಶ ನಗರ, ಖಾದ್ರಿಯಾ ನಗರ ಸೇರಿದಂತೆ ವಿವಿಧ ಬಡಾವಣೆಗಳ ಕೊಳಚೆ ನೀರು ದೊಡ್ಡಕೆರೆಗೆ ಹರಿದು ಬರುತ್ತಿದೆ. ಅಲ್ಲದೆ, ಧರ್ಮರಾಜ ನಗರದಲ್ಲಿರುವ ಕಸಾಯಿಖಾನೆ ತ್ಯಾಜ್ಯ ಹಾಗೂ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಖಬರ್​ಸ್ತಾನದ ತ್ಯಾಜ್ಯವು ದೊಡ್ಡಕೆರೆಗೆ ಸೇರುತ್ತಿದೆ. ಈ ಕುರಿತು ಸ್ಥಳೀಯರು ಹಾಗೂ ರೈತ ಸಂಘಟನೆಗಳ ಪದಾಧಿಕಾರಿಗಳು ಹಲವು ಬಾರಿ ಪುರಸಭೆಗೆ ತಿಳಿಸಿದರೂ ಪ್ರಯೋಜನವಾಗಿಲ್ಲ.

    ರೈತರ ಗೋಳು:

    ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಜನತೆ ನೀರಿಗಾಗಿ ಪರದಾಡುತ್ತಿದ್ದಾರೆ. ರೈತರು ತಮ್ಮ ಜಾನುವಾರುಗಳಿಗೆ ದೊಡ್ಡಕೆರೆಯಲ್ಲಿ ನೀರು ಕುಡಿಸುತ್ತಿದ್ದಾರೆ. ನೀರು ಕಲ್ಮಶವಾಗಿರುವುದರಿಂದ ಜಾನುವಾರುಗಳು ರೋಗಗಳಿಗೆ ತುತ್ತಾಗುತ್ತಿವೆ. ಕೆರೆಯ ನೀರು ಬಳಕೆಗೆ ಯೋಗ್ಯವಲ್ಲದ ಮಟ್ಟಿಗೆ ತ್ಯಾಜ್ಯ ಸೇರ್ಪಡೆಗೊಳ್ಳುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ರೈತರು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಕೆರೆ ಸ್ವಚ್ಛತೆ ಮರೀಚಿಕೆ:

    ದೊಡ್ಡ ವಿಸ್ತೀರ್ಣ ಹೊಂದಿರುವ ದೊಡ್ಡಕೆರೆಯ ಸುತ್ತಲೂ ತ್ಯಾಜ್ಯದೊಂದಿಗೆ ಜಾಲಿಗಿಡ ಸೇರಿದಂತೆ ಕಸ ಕಡ್ಡಿ ಹೆಚ್ಚಿದೆ. ಮಲ ವಿಸರ್ಜನೆ, ಸತ್ತ ಪ್ರಾಣಿಗಳನ್ನು ತಂದು ಕೆರೆ ದಂಡೆಗೆ ಹಾಕುತ್ತಿರುವುದರಿಂದ ಕೆರೆಯ ವಾತಾವರಣ ಸಂಪೂರ್ಣ ಕಲುಷಿತಗೊಂಡಿದೆ.

    ಪುರಸಭೆ ಅಧಿಕಾರಿಗಳು ಗಟಾರ ಒತ್ತುವರಿ ತೆರವುಗೊಳಿಸಲು ಹಿಂದೇಟು ಹಾಕುತ್ತಿರುವುದರಿಂದ ದೊಡ್ಡಕೆರೆಗೆ ಕಲ್ಮಶ ನೀರು ಹಾಗೂ ತ್ಯಾಜ್ಯ ಸೇರ್ಪಡೆಗೊಳ್ಳುತ್ತಿದೆ. ಗಟಾರ ಒತ್ತುವರಿ ತೆರವುಗೊಳಿಸಿ, ಕಲ್ಮಶ ನೀರನ್ನು ತಡೆದಲ್ಲಿ ಮಾತ್ರ ಕೆರೆಯ ನೀರು ಶುದ್ಧವಾಗಿರಿಸಲು ಸಾಧ್ಯವಾಗಲಿದೆ ಎಂಬುದು ಪಟ್ಟಣದ ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

    ಕೆರೆಗೆ ನದಿ ನೀರು ಹರಿಸುವುದು ಹಾಗೂ ಕೆರೆಗೆ ಸೇರುತ್ತಿರುವ ಕಲ್ಮಶ ನೀರು ತಡೆಯುವ ಕುರಿತು ಪುರಸಭೆ ಮುಖ್ಯಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳೊಂದಿಗೆ ರ್ಚಚಿಸಿದರೂ ಪ್ರಯೋಜನ ಕಂಡುಬರುತ್ತಿಲ್ಲ. ಈ ಕುರಿತು ಹೋರಾಟ ಅನಿವಾರ್ಯವಾಗಿದೆ.

    | ಸಂಗಮೇಶ ಪೀತಾಂಭ್ರಶೆಟ್ಟಿ, ರೈತ ಸಂಘ ಸವಣೂರ ತಾಲೂಕು ಅಧ್ಯಕ್ಷ

    ಸವಣೂರ ಪಟ್ಟಣದ ದೊಡ್ಡಕೆರೆಗೆ ಸೇರ್ಪಡೆಗೊಳ್ಳುತ್ತಿರುವ ಕಲ್ಮಶ ನೀರು ತಡೆಯಲು ಹಾಗೂ ಕೆರೆ ಅಭಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸಲಾಗಿದೆ. ಗಟಾರ ಒತ್ತುವರಿ ತೆರವಿಗಾಗಿ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

    | ರೇಣುಕಾ ದೇಸಾಯಿ, ಸವಣೂರ ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts