More

    ದೇಶ ಕಟ್ಟುವ ಕಾಯಕ ಮಾಡುತ್ತಿದೆ ಸುತ್ತೂರು ಮಠ: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅಭಿಪ್ರಾಯ

    ಮೈಸೂರು: ಸಹಸ್ರಾರು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಸುತ್ತೂರು ಶ್ರೀಮಠವು ಸದೃಢ ದೇಶ ಕಟ್ಟುವ ಕಾಯಕ ಮಾಡುತ್ತಿದೆ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅಭಿಪ್ರಾಯಪಟ್ಟರು.
    ಸುತ್ತೂರಿನ ವಸತಿ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜೀವನದಲ್ಲಿ ಗುರುವಿನ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಜೀವನದಲ್ಲಿ ಗುರುವಿನ ಮಾರ್ಗದರ್ಶನ ತುಂಬ ಅವಶ್ಯಕ. ಆದ್ದರಿಂದಲೇ ಗುರುವನ್ನು ಆಚಾರ್ಯ ದೇವೋಭವ ಎಂದು ದೇವರಿಗೆ ಹೋಲಿಸುತ್ತಾರೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ, ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ದೊಡ್ಡವರಾದ ಮೇಲೆ ಗುರುಗಳನ್ನು ಮರೆಯದೆ ಸ್ಮರಿಸಿಕೊಳ್ಳಬೇಕು. ಅವಶ್ಯಕತೆ ಇರುವವರಿಗೆ ಕೈಲಾದ ಸಹಾಯ ಮಾಡಬೇಕು. ಇಂತಹ ಮಾನವೀಯ ಮೌಲ್ಯಗಳನ್ನೇ ಶರಣರ ವಚನಗಳಲ್ಲೂ ಕಾಣಬಹುದು. ಬಿಡುವಿನ ಸಮಯದಲ್ಲಿ ವಚನಗಳನ್ನು ಅಭ್ಯಾಸ ಮಾಡುವ ಮೂಲಕ ನಮ್ಮ ಜೀವನದಲ್ಲೂ ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಅನಿವಾಸಿ ಭಾರತೀಯರಾದ ಡಾ. ಪೂರ್ಣಿಮಾ ಮದಿವನ್ನನ್ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆತ್ತವರು ಎಷ್ಟೊಂದು ಕಷ್ಟಪಡುತ್ತಾರೆ ಎಂಬುದನ್ನು ಮಕ್ಕಳು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಆರೋಗ್ಯ, ಸ್ವಚ್ಛ ಮನಸು ಮತ್ತು ಹೃದಯ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
    ತನ್ನ ಸಾಧನೆಯ ಹಾದಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಬಂಡೀಪುರದ ಬುಡಕಟ್ಟು ಮಹಿಳೆ ಡಾ. ರತ್ನಮ್ಮ, ಹುಟ್ಟು ಅಂಧರಾಗಿದ್ದ ತಂದೆ, ಸಂಕಷ್ಟಗಳ ನಡುವೆ ನನ್ನನ್ನು ಸಾಕಲು ತಾಯಿ ಪಡುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ. ಬಾಲ್ಯದಲ್ಲಿ ಅರಣ್ಯ ಪ್ರದೇಶದಲ್ಲಿ ಸಿಗುವ ನೆಲ್ಲಿಕಾಯಿ ಸಂಗ್ರಹಿಸಿ ಅವುಗಳನ್ನು ಮಾರಾಟ ಮಾಡಿ ಜೀವನ ಮಾಡಿದೆ. ಶಾಲೆಗೆ ನಾನು ಹೋಗುತ್ತಿದ್ದದ್ದು ವಿದ್ಯೆಗಿಂತ ಹೆಚ್ಚಾಗಿ ನನ್ನ ಹಸಿವಿಗೆ. ಆಶ್ರಮ ಶಾಲೆಯಲ್ಲಿ ಕೊಡುತ್ತಿದ್ದ ಗಂಜಿ ಮತ್ತು ಊಟಕ್ಕಾಗಿ ಹೋಗುತ್ತಿದ್ದೆ ಎಂದು ಕಷ್ಟದ ದಿನಗಳನ್ನು ಮೆಲುಕು ಹಾಕಿದರು.
    ವಿದ್ಯಾರ್ಥಿಗಳು ಸರ್ಕಾರ, ಶ್ರೀಮಠದಿಂದ ಸಿಗುವ ಅವಕಾಶಗಳನ್ನು ಜ್ಞಾನಾರ್ಜನೆಗೆ ಬಳಸಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನವನ್ನು ರೂಪಿಸಿಕೊಳ್ಳಿ. ಮುಂದೆ ಉತ್ತಮ ಪ್ರಜೆಗಳಾಗಿ ಕೈಲಾದಷ್ಟು ನೊಂದವರಿಗೆ ಸಹಾಯ ಮಾಡಿ ಎಂದು ಹೇಳಿದರು.
    ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts