More

    4 ಲಕ್ಷ ಜನರಿಂದ ಡಿಕೆಶಿ ಪದಗ್ರಹಣ ವೀಕ್ಷಣೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಬೆಂಗಳೂರಿನಲ್ಲಿ ಜೂ. 7ರಂದು ನಡೆಯಲಿರುವ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ಪದಗ್ರಹಣ ಸಮಾರಂಭವನ್ನು ರಾಜ್ಯಾದ್ಯಂತ 4 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಸಮಾರಂಭದಲ್ಲಿ ನೇರವಾಗಿ 200 ಜನರಷ್ಟೇ ಪಾಲ್ಗೊಳ್ಳುವರು ಎಂದರು.

    ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳ ಕಚೇರಿ ಆವರಣದಲ್ಲಿ ಹಾಗೂ ವಿವಿಧ ವಾರ್ಡ್​ಗಳಲ್ಲಿ ಎಲ್​ಇಡಿ ಸ್ಕ್ರೀನ್ ಅಳವಡಿಸಿ, ಪದಗ್ರಹಣ ಸಮಾರಂಭದ ನೇರ ಪ್ರಸಾರ ಮಾಡಲಾಗುವುದು. ಫೇಸ್​ಬುಕ್ ಮೂಲಕವೂ ನೇರ ಪ್ರಸಾರ ಇರಲಿದೆ ಎಂದು ತಿಳಿಸಿದರು.

    ಮೇ 31ರ ನಂತರ ಲಾಕ್​ಡೌನ್ ನಿಯಮಗಳಲ್ಲಿ ಬದಲಾವಣೆಗಳಾದರೂ ಪದಗ್ರಹಣ ಸಮಾರಂಭದಲ್ಲಿ ಯಾವುದೇ ರೀತಿಯ ಬದಲಾ ವಣೆಗಳು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಡಿ.ಕೆ. ಶಿವಕುಮಾರ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಪಕ್ಷವನ್ನು ಮತ್ತೆ ಕೆಳ ಮಟ್ಟದಿಂದ ಸಂಘಟಿಸಲಾಗುವುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವುದು ಪ್ರತಿಯೊಬ್ಬ ಕಾರ್ಯಕರ್ತನ ಗುರಿಯಾಗಿರಬೇಕು ಎಂದು ತಿಳಿಸಿದರು.

    ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷ ವೀರಣ್ಣ ಮತ್ತಿಕಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಮಾಜಿ ಸಚಿವ ಕೆ.ಎನ್. ಗಡ್ಡಿ, ನಾಗರಾಜ ಗೌರಿ, ಸತೀಶ ಮೆಹರವಾಡೆ, ರಾಬರ್ಟ್ ದದ್ದಾಪುರಿ, ಜಿ. ದೇವಕಿ, ಸ್ವಾತಿ ಮಳಗಿ ಇತರರಿದ್ದರು.

    ಕಾಂಗ್ರೆಸ್ ಮಹಾನಗರ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಹಾಗೂ ಗ್ರಾಮೀಣ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ ಸ್ವಾಗತಿಸಿ, ನಿರೂಪಿಸಿದರು.

    ಲಾಕ್​ಡೌನ್ ನಿಯಮ ಪಾಲನೆಯಾಗಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಭೆ ಲಾಕ್​ಡೌನ್ ನಿಯಮಗಳನ್ನು ಅಣಕಿಸುವಂತಿತ್ತು. ಸಭೆಯಲ್ಲಿ ಕಾಂಗ್ರೆಸ್​ನ 300ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರ ಮಧ್ಯೆ ಪರಸ್ಪರ ಅಂತರ ಇರಲಿಲ್ಲ. ಮಾಸ್ಕ್ ಇದ್ದರೂ ಧರಿಸಿದ್ದವರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಸತೀಶ ಜಾರಕಿಹೊಳಿ ಕಚೇರಿಗೆ ಆಗಮಿಸುತ್ತಿದ್ದಂತೆಯೇ ಅವರ ಕೈ ಕುಲುಕಿ ಶುಭ ಹಾರೈಸಲು ಕಾರ್ಯಕರ್ತರು ಮುಗಿಬಿದ್ದಿದ್ದರು. ಸಭೆ-ಸಮಾರಂಭಗಳಿಗೆ 50ಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳುವುದಕ್ಕೆ ಮಿತಿ ಹೇರುವ ಆಡಳಿತ ವರ್ಗ, ಕಾಂಗ್ರೆಸ್ ಸಭೆಗೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿದ್ದರೂ ಮೌನ ವಹಿಸಿದ್ದೇಕೆ ಎಂಬ ಪ್ರಶ್ನೆಯೂ ಉದ್ಭವಿಸಿತ್ತು. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿಯಿಂದ ಶಾಮಿಯಾನ ಸಪ್ಲೈಯರ್ಸ್ ಕಾರ್ವಿುಕರಿಗೆ ದಿನಸಿ ಕಿಟ್ ನೀಡುವ ಕಾರ್ಯಕ್ರಮವನ್ನು ಜಿಲ್ಲಾಡಳಿತದ ಪರವಾನಗಿ ಪಡೆದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಕಾರ್ಯಕ್ರಮ ರದ್ದಾಗಿತ್ತು. ಆದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಪಾಲ್ಗೊಳ್ಳುವ ಕಾರ್ಯಕ್ರಮಕ್ಕೆ ಮಹಾನಗರ ಜಿಲ್ಲಾ ಕಾಂಗ್ರೆಸ್ ಹಾಗೂ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಮುಖಂಡರು ಜಿಲ್ಲಾಡಳಿತದಿಂದ ಯಾವುದೇ ಪರವಾನಗಿ ಪಡೆದಿರಲಿಲ್ಲ ಎಂದು ಸಂಘಟಕರು ತಿಳಿಸಿದರು.

    ಪಕ್ಷದ 8-10 ಮುಖಂಡರನ್ನಷ್ಟೇ ಸಭೆಗೆ ಆಹ್ವಾನಿಸಲಾಗಿತ್ತು. ಹೀಗಾಗಿ ಯಾವುದೇ ಅನುಮತಿ ಪಡೆದಿರಲಿಲ್ಲ. ಆದರೆ, ಸಭೆಗೆ ನಿರೀಕ್ಷೆಗೂ ಮೀರಿ ಕಾರ್ಯಕರ್ತರು ಆಗಮಿಸಿದರು.

    | ಅನಿಲಕುಮಾರ ಪಾಟೀಲ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts