More

    ಸರ್ವಜ್ಞರು ಕನ್ನಡದ ಅತ್ಯಂತ ಶ್ರೇಷ್ಠ ಕವಿ

    ನಂಜನಗೂಡು: ತಮ್ಮ ವಚನಗಳ ಮೂಲಕವೇ ಉತ್ತಮ ಸಂದೇಶ ನೀಡುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜಕ್ಕೆ ಕೊಡುಗೆ ನೀಡಿರುವ ಸರ್ವಜ್ಞರು ಕನ್ನಡದ ಅತ್ಯಂತ ಶ್ರೇಷ್ಠ ಕವಿ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

    ನಗರದ ಕುಂಬಾರ ಸಮುದಾಯ ಭವನದಲ್ಲಿ ತಾಲೂಕು ಕುಂಬಾರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮಹಾಕವಿ ಸರ್ವಜ್ಞರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನರ ಆಡು ಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ಜನರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸಿದ ಸಮಾಜ ಸುಧಾರಕ ಮಹಾಕವಿ ಸರ್ವಜ್ಞ ಅವರ ತ್ರಿಪದಿಗಳು ಸರ್ವಕಾಲಕ್ಕೂ ಪ್ರಸ್ತುತವೆನಿಸಿವೆ ಎಂದರು.
    ಕುಂಬಾರ ಸಮುದಾಯ ಭವನದ ಅಭಿವೃದ್ಧಿಗೆ ಶೀಘ್ರದಲ್ಲೇ ಅನುದಾನ ಕಲ್ಪಿಸುವುದಾಗಿ ಹೇಳಿದರು.

    ಜಿಪಂ ಮಾಜಿ ಸದಸ್ಯ ಸಿ.ಚಿಕ್ಕರಂಗನಾಯಕ ಮಾತನಾಡಿ, ಸಮಾಜದ ಸುಧಾರಣೆಗೆ ಶ್ರಮಿಸಿದ ದಾರ್ಶನಿಕರು ಯಾವುದೇ ಒಂದು ಧರ್ಮ ಜಾತಿಗೆ ಸೀಮಿತರಾದವರಲ್ಲ, ಅವರು ಸಮಾಜದ ಆಸ್ತಿ. ದೇಶದ ಇತಿಹಾಸದಲ್ಲಿ ಹಿಂದುಳಿದ ವರ್ಗದವರೇ ಸಮಾಜಕ್ಕೆ ಅತ್ಯಂತ ಹೆಚ್ಚು ಕೊಡುಗೆಯನ್ನು ನೀಡಿದವರು. ಅಂತಹ ಸಾಲಿನಲ್ಲಿ ಸರ್ವಜ್ಞರು ಅಗ್ರಗಣ್ಯರೆನಿಸಿದ್ದಾರೆ ಎಂದರು. ಹಿಂದುಳಿದ ವರ್ಗಗಳು ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣವೇ ಪ್ರಮುಖವಾದದ್ದಾಗಿದ್ದು, ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯಕೊಡಬೇಕು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
    ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆಕೇಶವಮೂರ್ತಿ, ಕುಂಬಾರ ಸಂಘದ ಅಧ್ಯಕ್ಷ ಮರಿಶೆಟ್ಟಿ, ಸಹ ಕಾರ್ಯದರ್ಶಿ ಇ.ಶಿವಣ್ಣ, ಪ್ರಕಾಶ್, ಎಸ್.ಕುಮಾರ್, ಲಕ್ಷ್ಮಿಕಾಂತ್, ಎಚ್.ಎಸ್.ಪ್ರಕಾಶ್, ಕೃಷ್ಣಶೆಟ್ಟಿ, ರಾಮಶೆಟ್ಟಿ, ಬೈರೇಶ್, ಬಸವಶೆಟ್ಟಿ, ರಂಗರಾಮು, ಮಹದೇವಶೆಟ್ಟಿ, ನಿಂಗರಾಜು, ವೆಂಕಟೇಶ್, ನವೀನ್‌ಕುಮಾರ್, ರೇವಣ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts