More

    ಸರ್ಕಾರದ ನಿರ್ಧಾರಗಳು ಬಡವರ ಪರವಾಗಿರಲಿ: ಮಾಜಿ ಸಿಎಂ ಎಚ್‌ಡಿಕೆ ಪ್ರತಿಪಾದನೆ

    ರಾಮನಗರ: ಕರೊನಾ ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರಗಳು ತೀವ್ರ ಸಂಕಷ್ಟದಲ್ಲಿರುವ ಬಡ ಮತ್ತು ಮಧ್ಯಮ ವರ್ಗದ ಜನರ ಪರವಾಗಿ ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಪಾದಿಸಿದರು.

    ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯಲ್ಲಿ 1.5 ಲಕ್ಷ ದಿನಸಿ ಕಿಟ್ ವಿತರಿಸುವ ಕಾರ್ಯಕ್ಕೆ ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

    ಮ್ಯುಚುಯಲ್ ಫಂಡ್ ವಿಚಾರವಾಗಿ ಕೇಂದ್ರ ಸರ್ಕಾರ 50 ಸಾವಿರ ಕೋಟಿ ರೂ. ನೆರವು ೋಷಿಸಿದೆ. ಇದರಿಂದ ಬಡವರಿಗೆ ಯಾವುದೇ ಅನುಕೂಲ ಆಗುವುದಿಲ್ಲ. ರಿಲಯನ್ಸ್, ಮಹೀಂದ್ರಾದಂತಹ ದೊಡ್ಡ ಕಂಪನಿಗಳಿಗೆ ಮಾತ್ರ ಇದರ ಲಾಭವಾಗಲಿದೆ ಎಂದು ಅವರು ಹೇಳಿದರು.

    ಲಾಕ್‌ಡೌನ್ ಪರಿಸ್ಥಿತಿಯನ್ನು ಶ್ರೀಮಂತರು 6 ತಿಂಗಳು ತಡೆದುಕೊಳ್ಳಬಹುದು. ಆದರೆ ಬಡವರ ಸ್ಥಿತಿ ಶೋಚನೀಯವಾಗುತ್ತಿದೆ. ಸರ್ಕಾರಗಳ ನಿರ್ಧಾರಗಳು ಬಡವರ ಪರವಾಗಿರಬೇಕು. ಸಣ್ಣ ಉದ್ಯಮಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿ. ಈ ಬಗ್ಗೆ ಆಯಾ ವರ್ಗಗಳು ಬೇಡಿಕೆ ಇಟ್ಟರೂ ಈವರೆಗೆ, ರೈತರ ಪರ ಗಮನ ಹರಿಸಿಲ್ಲ. ಅಧಿಕಾರಿಗಳು 450 ಕೋಟಿ ರೂ. ಪರಿಹಾರ ನೀಡಿ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಇದನ್ನಾದರೂ ಅನುಷ್ಠಾನಕ್ಕೆ ತನ್ನಿ ಎಂದು ಆಗ್ರಹಿಸಿದರು.

    ನೆಗೆಟಿವ್ ಬಂದಿದ್ದಕ್ಕೆ ಸಂತಸ: ಕೆಲ ಯೋಜನೆಗಳು, ನಿರ್ಮಾಣ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವುದನ್ನು ಒಂದು ವರ್ಷ ಮುಂದೂಡಿ. ಆರೋಗ್ಯ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಸರ್ಕಾರಕ್ಕೆ ಎಚ್‌ಡಿಕೆ ಸಲಹೆ ನೀಡಿದರು. ರಾಮನಗರ ಕಾರಾಗೃಹದಲ್ಲಿದ್ದ ಪಾದರಾಯನಪುರ ಆರೋಪಿಗಳಲ್ಲಿ ಐವರು ಸೋಂಕಿತರಾಗಿದ್ದರು. ಆರೋಪಿಗಳನ್ನು ರಾಮನಗರದಿಂದ ಸ್ಥಳಾಂತರಿಸಿದ ನಂತರ ಇಲ್ಲಿನ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಸದ್ಯ ಎಲ್ಲರ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದು ಸಂತಸ ವಿಷಯ. ಆದರೆ ಮೈ ಮರೆಯುವಂತಿಲ್ಲ. ಮೊದಲು ಸೋಂಕು ಕಾಣಿಸಿಕೊಳ್ಳದೆ ನಂತರ ಕಾಣಿಸಿಕೊಳ್ಳುವ ಉದಾಹರಣೆಗಳೂ ಇವೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

    ಕರೊನಾ ರ‌್ಯಾಪಿಡ್ ಟೆಸ್ಟ್ ಕಿಟ್ ಖರೀದಿಯಲ್ಲಿ ಅವ್ಯವಹಾರ?: ದುಂದು ವೆಚ್ಚ ಕಡಿಮೆ ಮಾಡಬೇಕು. ಕರೊನಾ ರ‌್ಯಾಪಿಡ್ ಟೆಸ್ಟ್ ಕಿಟ್ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದೆ. ಈ ವಿಚಾರ ಹೈಕೋರ್ಟ್‌ನಲ್ಲೂ ಚರ್ಚೆ ಆಗಿದೆ. 250 ರೂ. ಬೆಲೆಯ ಟೆಸ್ಟ್ ಕಿಟ್ 650ರೂ.ಗೆ ಏರಿಕೆ ಮಾಡಲಾಗಿದೆ ಎಂಬ ದೂರು ಕೇಳಿಬಂದಿದೆ. ಅಲ್ಲದೆ ರಾಜ್ಯದಲ್ಲಿ ಸ್ಯಾನಿಟೈಜರ್ ಖರೀದಿಯಲ್ಲೂ ಅವ್ಯವಹಾರ ಆಗಿವೆ ಎಂಬ ಮಾತುಗಳು ಕೇಳಿಬಂದಿದೆ. ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸ ಆಗಬಾರದು. ಇಂತಹ ಆತಂಕದ ಪರಿಸ್ಥಿತಿಯಲ್ಲಿ ಬಡವರಿಗೆ ರಕ್ಷಣೆ ನೀಡಬೇಕು ಎಂದು ಕುಮಾರಸ್ವಾಮಿ ಅಸಮಾಧಾನ ಆಗ್ರಹಿಸಿದರು.

    1.5 ಲಕ್ಷ ದಿನಸಿ ಕಿಟ್: ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯಲ್ಲಿ 1.5 ಲಕ್ಷ ದಿನಸಿ ಕಿಟ್ ವಿತರಿಸುವ ಕಾರ್ಯಕ್ಕೆ ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಪುತ್ರ ನಿಖಿಲ್-ಸೊಸೆ ರೇವತಿ ಚಾಲನೆ ನೀಡಿದರು.

    ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು, ಈ ಮೊದಲು 60 ಸಾವಿರ ಕಿಟ್‌ಗಳನ್ನು ವಿತರಿಸಲು ನಿರ್ಧರಿಸಿದ್ದೆವು. ನಂತರ ಕಾರ್ಯಕರ್ತರ ಸಲಹೆ ಮೇರೆಗೆ ಯಾರಿಗೂ ತಾರತಮ್ಯ ಆಗದಂತೆ ಪ್ರತಿಯೊಂದು ಮನೆಗೂ ದಿನಸಿ ತಲುಪಿಸುವ ಹಿನ್ನೆಲೆಯಲ್ಲಿ 5 ಕೆ.ಜಿ. ಅಕ್ಕಿ, ಸಕ್ಕರೆ 1 ಕೆ.ಜಿ., ಈರುಳ್ಳಿ 1 ಕೆ.ಜಿ. ಹಾಗೂ ತೊಗರಿಬೇಳೆ 1 ಕೆ.ಜಿ. ಇರುವ 1.5 ಲಕ್ಷ ಕಿಟ್ ವಿತರಿಸಲು ನಿರ್ಧರಿಸಲಾಗಿದೆ. ಮಗ ಮತ್ತು ಸೊಸೆ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದರು.

     

    ಕರೊನಾದಿಂದಾಗಿ ಜನತೆ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದು ಶೀಘ್ರವೇ ಈ ರೋಗ ನಿವಾರಣೆಯಾಗಲಿ ಎಂದು ದೇವರದಲ್ಲಿ ಪ್ರಾರ್ಥಿಸೋಣ. ಚಿತ್ರರಂಗದ ಕಾರ್ಮಿಕರು ಸಹ ತೊಂದರೆಯಲಿದ್ದು, ಅವರ ಪರವಾಗಿ ನಾನೂ ವೈಯಕ್ತಿಕವಾಗಿ ನೆರವು ನೀಡಿದ್ದೇನೆ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ನೊಂದ ಕಾರ್ಮಿಕರ ಪರವಾಗಿ ಯೋಜನೆ ತರಲಿ.
    ನಿಖಿಲ್ ಕುಮಾರಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts