More

    ನೀರಿಲ್ಲದೆ ಸೊರಗುತ್ತಿವೆ ಸಸಿ

    ರೋಣ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ನೆಡಲಾದ ನೂರಾರು ಸಸಿಗಳು ನೀರಿಲ್ಲದೆ ಒಣಗುತ್ತಿವೆ. ಇವುಗಳಿಗೆ ನೀರುಣಿಸಿ ಪೋಷಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ.

    ಪಟ್ಟಣದ ಕಾಳಿಕಾ ದೇವಸ್ಥಾನದ ಹತ್ತಿರ, ಸಾಧು ಅಜ್ಜನ ಬಡಾವಣೆ, ನ್ಯೂ ಲಿಟ್ಲ್ ಫ್ಲವರ್ ಶಾಲೆ ಹತ್ತಿರ, ಗಿರಡ್ಡಿ ಕಾಲೇಜ್, ಮುದೇನಗುಡಿ ರಸ್ತೆ, ಸರ್ಕಾರಿ ಆಯುರ್ವೆದ ಆಸ್ಪತ್ರೆ ಹತ್ತಿರ, ಕನಕ ಭವನ, ಸರ್ಕಾರಿ ಪ್ರೌಢಶಾಲೆ ಸೇರಿದಂತೆ ವಿವಿಧೆಡೆ 2020ರ ನಗರ ಹಸಿರೀಕರಣ ಯೋಜನೆಯಡಿ 1800 ಸಸಿಗಳನ್ನು ನೆಡಲಾಗಿದ್ದು, ಇವುಗಳಲ್ಲಿ ಬಹುತೇಕ ಸಸಿಗಳು ಒಣಗಿವೆ.

    ಹೆಸರಿಗಷ್ಟೇ ನಗರ ಹಸಿರೀಕರಣ: ನಗರ ಹಸರೀಕರಣ ಯೋಜನೆಯು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಂದಾಗಿ ನಾಮ್ ಕೇ ವಾಸ್ತೆ ಎನ್ನುವಂತಾಗಿದೆ. ಸಸಿಗಳ ರಕ್ಷಣೆ ಹಾಗೂ ಪೋಷಣೆಗಾಗಿ ಸಾಕಷ್ಟು ಹಣಕಾಸಿನ ನೆರವು ಸಿಗಲಿದೆ. ಆದರೆ, ಸಸಿಗಳ ಬೆಳವಣಿಗೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ.

    ನಿಯಮದಲ್ಲಿ ಏನಿದೆ: ಸಸಿಗಳನ್ನು ಮೂರು ವರ್ಷಗಳ ಕಾಲ ಕಾಪಾಡಬೇಕಾದ ಜವಾಬ್ದಾರಿ ಅರಣ್ಯ ಇಲಾಖೆಗೆೆ ಸೇರಿದೆ. ಒಂದು ಸಸಿ ನೆಡಲು ಗುಂಡಿ ತೋಡುವುದರಿಂದ ಹಿಡಿದು ಪಾತಿ, ಮುಳ್ಳಿನ ಬೇಲಿ, ಸಸಿಗಳು ಬಾಗದಂತೆ ಕೋಲು ಕಟ್ಟುವುದು. ಸಸಿಗಳ ಸುತ್ತ ಬೆಳೆದಿರುವ ಕಳೆ ಹಾಗೂ ಗಿಡಗಳನ್ನು ಕಿತ್ತು ಅದರ ಬೆಳವಣಿಗೆಗೆ ಪ್ರೋತ್ಸಾಹಿಸುವುದು. ಆಗಾಗ ಸಸಿಗಳನ್ನು ಪರಿಶೀಲಿಸುವುದು, ತೇವಾಂಶದ ಕೊರತೆ ಎದುರಾದರೆ ಟ್ಯಾಂಕರ್ ಮೂಲಕ ನೀರು ಹಾಕುವುದು ಅರಣ್ಯ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಅದಕ್ಕಾಗಿ ಒಂದು ಸಸಿಯ ನಿರ್ವಹಣೆಗೆ ವಾರ್ಷಿಕ 600 ರೂಪಾಯಿಯನ್ನು ಇಲಾಖೆ ಪ್ರೋತ್ಸಾಹಧನದ ರೂಪದಲ್ಲಿ ನೀಡುತ್ತದೆ.

    ಅಧಿಕಾರಿಗಳ ಹಾರಿಕೆ ಉತ್ತರ…

    ಸಸಿಗಳ ಸಮಸ್ಯೆ ಕುರಿತು ರೋಣ ಸಾಮಾಜಿಕ ವಲಯ ಅರಣ್ಯಾಧಿಕಾರಿ ಪ್ರಕಾಶ ಪವಾಡಿಗೌಡ್ರ ಅವರನ್ನು ವಿಚಾರಿಸಿದರೆ, ‘ಪಟ್ಟಣದಲ್ಲಿ ನಗರ ಹಸಿರೀಕರಣ ಯೋಜನೆಯಡಿ ಎಷ್ಟು ಗಿಡಗಳನ್ನು ಎಲ್ಲಿ ನೆಟ್ಟಿದ್ದಾರೆ, ಅವುಗಳ ಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಬಗ್ಗೆ ಉಪ ವಲಯ ಅರಣ್ಯಾಧಿಕಾರಿ ಶಕುಂತಲಾ ನಾಗನೂರ ಅವರನ್ನು ಕೇಳಿ’ ಎಂದರು. ಶಕುಂತಲಾ ಅವರನ್ನು ವಿಚಾರಿಸಿದರೆ, ‘ಪಟ್ಟಣದ ಸಾಧು ಅಜ್ಜನ ಬಡಾವಣೆಯಲ್ಲಿ ಸಸಿಗಳನ್ನು ನೆಟ್ಟ ಬಗ್ಗೆ ನನಗೆ ಮಾಹಿತಿಯಿಲ್ಲ. ಅದು ವಲಯ ಅರಣ್ಯ ಇಲಾಖೆಯವರು ನೆಟ್ಟಿರಬೇಕು’ ಎನ್ನುತ್ತಾರೆ. ರೋಣ ವಲಯ ಅರಣ್ಯಾಧಿಕಾರಿ ಎ.ಬಿ. ಕೋಲಕಾರ ಅವರನ್ನು ವಿಚಾರಿಸಿದರೆ ‘ಪಟ್ಟಣದ ಸಾಧು ಅಜ್ಜನ ಬಡಾವಣೆಯಲ್ಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿಗಳು ಸಸಿಗಳನ್ನು ನೆಟ್ಟಿದ್ದಾರೆ’ ಎನ್ನುತ್ತಾರೆ. ಹೀಗೆ ಪರಸ್ಪರ ಬೊಟ್ಟು ತೋರುತ್ತಾ ಹಾರಿಕೆ ಉತ್ತರ ಕೊಡುತ್ತಾರೆ. ಈ ಕುರಿತು ಸಂಬಂಧಪಟ್ಟ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯರು.

    ಅರಣ್ಯ ಇಲಾಖೆಯವರು ಕಾಟಾಚಾರಕ್ಕೆ ಎನ್ನುವಂತೆ ರೋಣ ಪುರಸಭೆ ಉದ್ಯಾನದ ಪಕ್ಕದ ಬಡಾವಣೆಯಲ್ಲಿ ನೂರಾರು ಸಸಿಗಳನ್ನು ನೆಟ್ಟಿದ್ದಾರೆ. ನೀರು ಹಾಗೂ ನಿರ್ವಹಣೆಯಿಲ್ಲದೆ ಸಸಿಗಳು ಸಂಪೂರ್ಣವಾಗಿ ಒಣಗಿ ಅವುಗಳ ಸುತ್ತ ಮುಳ್ಳಿನ ಕಂಟಿಗಳು ಬೆಳೆದಿವೆ. ಇನ್ನಾದರೂ ಅಧಿಕಾರಿಗಳು ಕಾಳಜಿ ವಹಿಸಬೇಕು.

    | ಮಂಜುನಾಥ ನಾಯಕ, ಪರಿಸರ ಪ್ರೇಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts