More

    ಜೈಲಿಗೆ ಹೋಗಿ ಬಂದವರಿಗೂ ಸನ್ಮಾನ: ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ವಿಷಾದ

    ಮಂಡ್ಯ: ಹಿಂದೆ ಕಾರಣಾಂತರಗಳಿಂದ ಜೈಲಿಗೆ ಹೋಗಿ ಬಂದವರ ಕುಟುಂಬವನ್ನು ಜನರು ಕೀಳಾಗಿ ನೋಡುತ್ತಿದ್ದರು. ಆದರೆ, ಪ್ರಸ್ತುತ ಜೈಲಿಗೆ ಹೋಗಿ ಬರುವವರಿಗೆ ಹಾರ ತುರಾಯಿ ಹಾಕಿ ಜೈಕಾರ ಕೂಗಿ ಅಭಿನಂದಿಸಲಾಗುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.
    ನಗರದ ಜ್ಞಾನಸಾಗರ ಕ್ಯಾಂಪಸ್‌ನಲ್ಲಿ ಎಸ್.ಬಿ ಎಜುಕೇಷನ್ ಟ್ರಸ್ಟ್‌ನ ಮಾಂಡವ್ಯ ಶಿಕ್ಷಣ ಮಹಾವಿದ್ಯಾಲಯದ ಆಯೋಜಿಸಿದ್ದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಮತದಾರರೇ ಉತ್ತಮ ಮಟ್ಟದಲ್ಲಿರುವ ವ್ಯಕ್ತಿಗಳು. ಮತದಾರರ ಕೈಯಿಂದಲೇ ಪ್ರಜಾಪ್ರಭುತ್ವ ಉಳಿಯಬೇಕಿದೆ. ಚುನಾವಣೆ ಬರುತ್ತಿದ್ದು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ರಾಜೀನಾಮೆ ಕೊಟ್ಟು ಸ್ಪರ್ಧೆ ಮಾಡುತ್ತಿದ್ದಾರೆ. ಆದ್ದರಿಂದ ಇವರು ಜನತಾ ಸೇವೆಗೆ ಬಂದಿದ್ದಾರಾ ಅಥವಾ ಬೇರೆ ಉದ್ದೇಶಕ್ಕೆ ಬಂದಿದ್ದಾರಾ ಎನ್ನುವುದನ್ನು ನೋಡಿ ಬೆಂಬಲಿಸಬೇಕು. ಜನರ ಹಿತಾಸಕ್ತಿ ಇರುವಂತ ಅಭ್ಯರ್ಥಿ ಆಯ್ಕೆಯಾದರೆ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಸಲಹೆ ನೀಡಿದರು.
    ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳಿಗೆ ದುರಾಸೆಯೇ ಮೂಲ ಕಾರಣ. ಎಲ್ಲ ಕಾಯಿಲೆಗಳಿಗೆ ಔಷಧವಿದ್ದರೂ ದುರಾಸೆಗೆ ಮಾತ್ರ ಇಲ್ಲ. ಅದನ್ನು ಹೋಗಲಾಡಿಸಲು ಒಂದೇ ದಾರಿ ತೃಪ್ತಿ. ಇಂತಹ ಸನ್ನಿವೇಶದಲ್ಲಿ ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ದುರಾಸೆ ಮತ್ತು ಅಪ್ರಾಮಾಣಿಕತೆಯ ಸಮಾಜವನ್ನು ಬದಲಿಸಲು ಗಟ್ಟಿಯಾಗಿ ನಿಲ್ಲುವ ಮೂಲಕ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
    ಪ್ರಸ್ತುತ ಸನ್ನಿವೇಶದಲ್ಲಿ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದನ್ನು ನಿಯಂತ್ರಿಸಿದರೆ ಮಾತ್ರ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಹೆಚ್ಚು ಓದಿ ಉನ್ನತ ಹುದ್ದೆಗೇರುವ ಆಕಾಂಕ್ಷೆ ಇರಬೇಕು. ಆ ಮೂಲಕ ಶ್ರೀಮಂತರಾಗುವುದು ತಪ್ಪಲ್ಲ. ಇನ್ನೊಬ್ಬರ ಜೇಬಿಗೆ, ಮತ್ತೊಬ್ಬರ ಹೊಟ್ಟೆಗೆ ಕೈ ಹಾಕಿ ಸಿರಿವಂತರಾಗಬೇಕಿಲ್ಲ. ಜೀಪ್ ಹಗರಣದಿಂದ ಕಲ್ಲಿದ್ದಲು ಹಗರಣಗಳವರೆಗೆ ಉದಾಹರಣೆ ನೀಡಿದ ಸಂತೋಷ್ ಹೆಗ್ಡೆ ಅವರು, ಸರ್ಕಾರ 1 ರೂ ಅಭಿವೃದ್ಧಿಗೆ ನೀಡಿದರೆ ಕೊನೆ ಹಂತಕ್ಕೆ 15 ಪೈಸೆ ಮಾತ್ರ ತಲುಪಲಿದೆ ಎಂದು ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಬಹಿರಂಗವಾಗಿ ಹೇಳಿದ್ದರು. 2023ರ ಇಂದಿನ ಕಾಲಘಟ್ಟದಲ್ಲಿ 100 ರೂ ನೀಡಿದರೆ 15 ಪೈಸೆಯಷ್ಟೇ ಕಡೆ ಹಂತಕ್ಕೆ ತಲುಪುತ್ತಿದೆ ಎಂದು ವಿಷಾದಿಸಿದರು.
    ಎಸ್.ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ, ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಪ್ರಾಂಶುಪಾಲರಾದ ಡಾ.ಪಿ.ಸುಮಾರಾಣಿ, ಎಚ್.ಎಂ.ಶ್ರೀನಿವಾಸ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts